ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದುಳಿದಿದ್ದ ಕ್ಷೇತ್ರ ನಿರೀಕ್ಷೆಗೂ ಮೀರಿ ಅಭಿವೃದ್ಧಿ

ಜನರನ್ನು ಯಾಮರಿಸೋಕೆ ಬರಲ್ಲ: ಶಾಸಕ ಶ್ರೀನಿವಾಸಗೌಡ ಹೇಳಿಕೆ
Last Updated 11 ಏಪ್ರಿಲ್ 2022, 14:01 IST
ಅಕ್ಷರ ಗಾತ್ರ

ಕೋಲಾರ: ‘ಕ್ಷೇತ್ರದಲ್ಲಿ ಕಳೆದೊಂದು ದಶಕದಿಂದ ಅಭಿವೃದ್ಧಿ ಕುಂಠಿತಗೊಂಡಿತ್ತು. ನಾನು ಶಾಸಕನಾದ ನಂತರ ಜನರ ನಿರೀಕ್ಷೆಗೂ ಮೀರಿ ಕ್ಷೇತ್ರ ಅಭಿವೃದ್ಧಿಪಡಿಸಿದ್ದೇನೆ. ಬಾಕಿ ಅಭಿವೃದ್ಧಿ ಕೆಲಸಗಳನ್ನು ಪೂರ್ಣಗೊಳಿಸಲು ಒತ್ತು ಕೊಟ್ಟಿದ್ದೇನೆ’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಹೇಳಿದರು.

ತಾಲ್ಲೂಕಿನ ಕ್ಯಾಲನೂರು-ಕಡಗಟ್ಟೂರು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸೋಮವಾರ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿ. ‘10 ವರ್ಷ ಕ್ಷೇತ್ರದ ಶಾಸಕನಾಗಿದ್ದ ಮಹಾನುಭಾವ ಏನು ಕೆಲಸ ಮಾಡಿದ್ದಾರೆ ಎಂದು ಜನರಿಗೆ ಗೊತ್ತಿದೆ. ಅವರ ವೈಫಲ್ಯವೇ ನನ್ನ ಗೆಲುವಿಗೆ ಕಾರಣವಾಯಿತು. ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಜನರನ್ನು ಯಾಮಾರಿಸಲು ನನಗೆ ಬರುವುದಿಲ್ಲ’ ಎಂದು ಮಾಜಿ ಶಾಸಕ ವರ್ತೂರು ಪ್ರಕಾಶ್‌ರನ್ನು ಟೀಕಿಸಿದರು.

‘ನರಸಾಪುರದಿಂದ ಸೀತಿ, ಕ್ಯಾಲನೂರಿಂದ ವೇಮಗಲ್, ಕ್ಯಾಲನೂರು ಕ್ರಾಸ್‌ನಿಂದಎಚ್.ಕ್ರಾಸ್, ಕಡಗಟ್ಟೂರು ಗ್ರಾಮದಿಂದ ಕ್ಯಾಲನೂರುವರೆಗಿನ ರಸ್ತೆ ಹಾಗು ಕೋಲಾರ ನಗರದ ಎಲ್ಲಾ ಮುಖ್ಯ ರಸ್ತೆಗಳನ್ನು ₹ 60 ಕೋಟಿ ಅಂದಾಜು ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಕ್ರಮ ಕೈಗೊಂಡಿದ್ದೇವೆ. ದಿವಂಗತ ಬೈರೇಗೌಡರು ಸಚಿವರಾಗಿದ್ದಾಗ ಕ್ಯಾಲನೂರು ಭಾಗ ಅಭಿವೃದ್ಧಿಯಾಗಿತ್ತು. ನಾನು ಶಾಸಕನಾದ ನಂತರ ಕೆಲಸ ಮಾಡಿಸಿದೆ. ಈಗಲೂ ನಾನೇ ಮಾಡಿಸುತ್ತಿದ್ದೆನೆ’ ಎಂದರು.

‘ಶ್ರೀನಿವಾಸಗೌಡರು ಶಾಸಕರಾದ ಮೇಲೆ ಗ್ರಾಮಗಳಲ್ಲಿ ಜನರು ನೆಮ್ಮದಿಯಿಂದ ಬದುಕುತ್ತಿದ್ದಾರೆ. ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರ. ಬೈರೇಗೌಡರ ನಂತರ ಶ್ರೀನಿವಾಸಗೌಡರು ಅಭಿವೃದ್ಧಿಯ ಹರಿಕಾರರಾಗಿದ್ದಾರೆ’ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ವಿ.ದಯಾನಂದ್ ಬಣ್ಣಿಸಿದರು.

‘ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗದ ಕಾರಣ ಶ್ರೀನಿವಾಸಗೌಡರು ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಕಾಂಗ್ರೆಸ್‍ಗೆ ಹೋಗಿದ್ದಾರೆ ಎಂದು ಬೆಗ್ಲಿ ಪ್ರಕಾಶ್ ಹೇಳಿದ್ದಾರೆ. ಬೆಗ್ಲಿ ಪ್ರಕಾಶ್‌ ಬಾಯಿ ತೆವಲಿಗೆ ಮನಬಂದಂತೆ ಹೇಳಿಕೆ ನೀಡಿ ಮುಜುಗರಕ್ಕೆ ಒಳಗಾಗಿದ್ದಾರೆ’ ಎಂದು ವ್ಯಂಗ್ಯವಾಡಿದರು.

ಹಿಡಿತವಿರಲಿ: ‘10 ವರ್ಷ ಅಭಿವೃದ್ಧಿಯಲ್ಲಿ ಹಿಂದುಳಿದಿದ್ದ ಕ್ಷೇತ್ರವನ್ನು ಶ್ರೀನಿವಾಸಗೌಡರು ಅಭಿವೃದ್ಧಿ ಮಾಡಿದ್ದಾರೆ. ಪ್ರತಿನಿತ್ಯ ಅಧಿಕಾರಿಗಳೊಂದಿಗೆ ವಿಶ್ವಾಸದಿಂದ ಮಾತನಾಡಿ ಕೆಲಸ ಮಾಡಿಸಿ ಗೌರವಯುತವಾಗಿ ನಡೆದುಕೊಂಡಿದ್ದಾರೆ. ಹಿರಿಯರ ವಿರುದ್ಧ ಹೇಳಿಕೆ ನೀಡುವ ಮೊದಲು ನಾಲಿಗೆ ಮೇಲೆ ಹಿಡಿತವಿರಲಿ’ ಎಂದು ಎಚ್ಚರಿಕೆ ನೀಡಿದರು.

‘ಯರಗೋಳ್ ಯೋಜನೆ ಕಾಮಗಾರಿಗೆ ಶಂಕುಸ್ಥಾಪನೆ ಮಾಡಿದ್ದು ಶ್ರೀನಿವಾಸಗೌಡರು. ಆ ಕಾಮಗಾರಿ ಪೂರ್ಣಗೊಳಿಸಲು ಮತ್ತೆ ಶ್ರೀನಿವಾಸಗೌಡರೇ ಶಾಸಕರಾಗ ಬೇಕಾಯಿತು. ಅವರು ಶಾಸಕರಲ್ಲದೆ ಅಂತರರಾಷ್ಟ್ರೀಯ ಮಟ್ಟದ ಹಿರಿಯ ಸಹಕಾರಿಯಾಗಿದ್ದಾರೆ. ಪ್ರತಿ ಹಂತದಲ್ಲೂ ಜನರು ಅವರ ಬೆಂಬಲಕ್ಕೆ ನಿಲ್ಲಬೇಕು’ ಎಂದು ಮನವಿ ಮಾಡಿದರು.

‘ಕೆ.ಸಿ ವ್ಯಾಲಿ ಯೋಜನೆ ಮೂಲಕ ಜಿಲ್ಲೆಯ ಕೆರೆಗಳಿಗೆ ನೀರು ಬಂದ ಮೇಲೆ ರೈತರು ನಿಟ್ಟುಸಿರು ಬಿಡುವಂತಾಗಿದೆ. ಬತ್ತಿ ಹೋಗಿದ್ದ ಕೊಳವೆ ಬಾವಿಗಳು ಮರುಪೂರಣಗೊಂಡು ಕುಡಿಯುವ ನೀರಿನ ಸಮಸ್ಯೆ ಬಗೆಹರಿದಿದೆ. ಸುಮ್ಮನೆ ಕೊಳವೆ ಬಾವಿ ಕೊರೆಸಿ ಬಿಲ್ ಮಾಡಿರುವ ಉದಾಹರಣೆಯಿಲ್ಲ. ಪ್ರತಿ ಕೆಲಸವೂ ಪ್ರಾಯೋಗಿಕವಾಗಿ ನಡೆದಿದೆ’ ಎಂದು ಹೇಳಿದರು.

ಡಿಸಿಸಿ ಬ್ಯಾಂಕ್‌ ನಿರ್ದೇಶಕ ಸೊಣ್ಣೇಗೌಡ, ಗ್ರಾಮ ಪಂಚಾಯಿತಿ ಸದಸ್ಯರಾದ ಸುರೇಶ್, ಹರೀಶ್, ಮುಬಾರಕ್, ವೆಂಕಟೇಶ್, ಸೊಣ್ಣೇಗೌಡ, ಬಚ್ಚಣ್ಣ, ಪಿಳ್ಳಪ್ಪ, ಕೆ.ಎಸ್.ಕೃಷ್ಣಪ್ಪ, ನಾರಾಯಣಪ್ಪ, ನಾರಾಯಣಸ್ವಾಮಿ, ಮುನಿಯಪ್ಪ, ಮುನೇಗೌಡ, ದೊಡ್ಡಮರಿಯಣ್ಣ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT