ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಬಾಳ್ವೆಗೆ ಸಂವಿಧಾನ ಪೂರಕ: ರಮೇಶ್ ಕುಮಾರ್

ಸ್ವಾತಂತ್ರ್ಯಾನಂತರವೂ ಆರ್ಥಿಕ ಸ್ವಾತಂತ್ರ್ಯಮರೀಚಿಕೆ ರಮೇಶ್ ಕುಮಾರ್ ಬೇಸರ
Last Updated 27 ಜನವರಿ 2021, 3:43 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ಸರ್ವರ ಹಿತಕ್ಕಾಗಿ ರಚಿಸಲಾಗಿರುವ ಸಂವಿಧಾನದ ಆಶಯಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು. ಪ್ರಜೆಗಳು ಪರಸ್ಪರ ಗೌರವದಿಂದ ನಡೆದುಕೊಂಡು ಶಾಂತಿಯುತ ಸಹಬಾಳ್ವೆ ನಡೆಸಬೇಕು ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಹೇಳಿದರು.

ಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಮಂಗಳವಾರ ಏರ್ಪಡಿಸಿದ್ದ ಗಣರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜನರಿಗೆ ರಾಜಕೀಯ ಸ್ವಾತಂತ್ರ್ಯದ ಜತೆಗೆ ಆರ್ಥಿಕಸ್ವಾತಂತ್ರ್ಯ ಬಂದಾಗ ಮಾತ್ರ ಬದುಕು ಹಸನಾಗಲು ಸಾಧ್ಯ. ಆದರೆ ಸ್ವಾತಂತ್ರ್ಯಾನಂತರವೂ ಎಲ್ಲರಿಗು ಆರ್ಥಿಕಸ್ವಾತಂತ್ರ್ಯ ಎಂಬುದು ಮರೀಚಿಕೆಯಾಗಿ ಉಳಿದಿದೆ ಎಂದು ಅಭಿಪ್ರಾಯಪಟ್ಟರು.

ಡಾ. ಬಿ.ಆರ್.ಅಂಬೇಡ್ಕರ್ ಅವರ ಸಾರಥ್ಯದಲ್ಲಿ ನಾವು ಜಗತ್ತಿನಲ್ಲಿಯೇ ಅತ್ಯಂತ ಶ್ರೇಷ್ಠವಾದ ಸಂವಿಧಾನ ಪಡೆದುಕೊಂಡಿದ್ದೇವೆ. ಆದರೆ ಬದ್ಧತೆಯ ಕೊರತೆಯಿಂದಾಗಿ ಸಂವಿಧಾನದ ಆಶಯಗಳು ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬಂದಿಲ್ಲ. ಆದ್ದರಿಂದಲೇ ಸಮಾಜದಲ್ಲಿ ಮೇಲು ಕೀಳು ಭಾವನೆ ಜೀವಂತವಾಗಿದೆ. ಇಂಥ ಪರಿಸ್ಥಿತಿ ಬದಲಾಗಬೇಕು ಎಂದು ಹೇಳಿದರು.

ರೈತ ಹಾಗೂ ಸೈನಿಕನ ಶ್ರಮಕ್ಕೆ ತಕ್ಕ ಗೌರವ ಸಿಗಬೇಕು. ಅವರಿಲ್ಲದೆ ದೇಶದ ಮುನ್ನಡೆ ಸಾಧ್ಯವಿಲ್ಲ. ದೇಶದ ರಕ್ಷಣೆ, ಕಾನೂನು ಪಾಲನೆ ಸಹ ಜೀವನಕ್ಕೆ ಪೂರಕ. ಅದಕ್ಕೆ ಕಾರಣರಾದವರನ್ನು ಗೌರವದಿಂದ ನಡೆಸಿಕೊಳ್ಳುವುದು ಎಲ್ಲರ ಕರ್ತವ್ಯ. ಇದರಲ್ಲಿ ವ್ಯತ್ಯಾಸ ಕಂಡು ಬಂದಲ್ಲಿ ಸಮಸ್ಯೆ ಎದುರಾಗುತ್ತದೆ ಎಂದು ಹೇಳಿದರು.

ತಹಶೀಲ್ದಾರ್ ಎಸ್.ಎಂ.ಶ್ರೀನಿವಾಸ್ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಪ್ರತಿಯೊಬ್ಬರು ಸಂವಿಧಾನವನ್ನು ಗೌರವಿಸಬೇಕು. ಸಂವಿಧಾನ ಬದ್ಧ ಹಕ್ಕು ಹಾಗೂ ಕರ್ತವ್ಯಗಳನ್ನು ಸಮಾನ ಮನೋಭಾವದಿಂದ ಸ್ವೀಕರಿಸಬೇಕು. ಅತ್ಯುತ್ತಮ ಸಂವಿಧಾನ ನೀಡಿದ ಡಾ. ಬಿ.ಆರ್.ಅಂಬೇಡ್ಕರ್ ಅವರನ್ನು ಧನ್ಯತಾ ಭಾವದಿಂದ ಸ್ಮರಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಕೇರ್ ಆಫ್ ಅಡ್ರಸ್ ಫಿಲಂಸ್ ಕವಿ ಆರ್.ಚೌಡರೆಡ್ಡಿ ಪನಸಮಾಕನಹಳ್ಳಿ ಅವರ ‘ಯುಗದ ಜ್ಯೋತಿ ಅಂಬೇಡ್ಕರ್’ ಗೀತೆಯ ವಿಡಿಯೋವನ್ನು ಶಾಸಕ ಕೆ.ಆರ್.ರಮೇಶ್ ಕುಮಾರ್ ಬಿಡುಗಡೆ ಮಾಡಿದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್.ಆನಂದ್, ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಉಮಾದೇವಿ, ಕಂದಾಯ ನಿರೀಕ್ಷಕ ಬಿ.ವಿ.ಮುನಿರೆಡ್ಡಿ, ಜಿಲ್ಲಾ ಪಂಚಾಯಿತಿ ಸದಸ್ಯ ಗೋವಿಂದಸ್ವಾಮಿ, ಪುರಸಭಾಧ್ಯಕ್ಷೆ ಎಂ.ಎನ್.ಲಲಿತಾ ಶ್ರೀನಿವಾಸ್, ಉಪಾಧ್ಯಕ್ಷೆ ಆಯಿಷಾ ನಯಾಜ್, ಮುಖ್ಯಾಧಿಕಾರಿ ವಿ.ಮೋಹನ್ ಕುಮಾರ್, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಶ್ರೀನಿವಾಸಮೂರ್ತಿ, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ನಾಗರಾಜ್, ಕಲಾಶಂಕರ್, ಸುಬ್ರಮಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT