ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಕಡಿವಾಣ ಹಾಕಿ

ಸಭೆಯಲ್ಲಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸತ್ಯಭಾಮ ಸೂಚನೆ
Last Updated 29 ಜನವರಿ 2021, 15:09 IST
ಅಕ್ಷರ ಗಾತ್ರ

ಕೋಲಾರ: ‘ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಕಡಿವಾಣ ಹಾಕಬೇಕು’ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಅಧಿಕಾರಿಗಳಿಗೆ ಸೂಚಿಸಿದರು.

ಇಲ್ಲಿ ಶುಕ್ರವಾರ ನಡೆದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿವಿಧ ಸಮಿತಿಗಳ ಸಭೆಯಲ್ಲಿ ಮಾತನಾಡಿ, ‘ಸರ್ಕಾರ ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗೆ ಹಾಗೂ ಅಭಿವೃದ್ಧಿಗೆ ಹಲವು ಕಾಯ್ದೆಗಳನ್ನು ಜಾರಿಗೆ ತಂದಿದೆ. ಆದರೂ ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ನಿಂತಿಲ್ಲ’ ಎಂದು ಕಳವಳ ವ್ಯಕ್ತಪಡಿಸಿದರು.

‘ಜಿಲ್ಲಾ ಕೇಂದ್ರದಲ್ಲಿ ಸ್ವಾಧಾರ ಕೇಂದ್ರ ಆರಂಭಿಸಬೇಕು. ಇದರಿಂದ ಹೆಚ್ಚು ಜನರಿಗೆ ಅನುಕೂಲವಾಗುತ್ತದೆ. ಜಿಲ್ಲೆಯಲ್ಲಿ ಭಿಕ್ಷುಕರ ಪುನರ್ವಸತಿ ಕೇಂದ್ರ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಮಹಿಳೆಯರಿಗೆ ಯಾವುದೇ ಹಂತದಲ್ಲೂ ತೊಂದರೆಯಾಗಬಾರದು ಎಂದು ಹಲವು ಯೋಜನೆ ರೂಪಿಸಿದ್ದು, ಇದರ ಸದುಪಯೋಗ ಪಡೆಯಬೇಕು’ ಎಂದು ತಿಳಿಸಿದರು.

‘ನೊಂದ ಮಹಿಳೆಯರಿಗೆ ವೈದ್ಯಕೀಯ, ಪೊಲೀಸ್, ಕಾನೂನು ಸೇವೆ ನೀಡಬೇಕು. ಜಿಲ್ಲೆಯಲ್ಲಿ ದತ್ತು ಕೇಂದ್ರ ಆರಂಭಿಸುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದು, ಅನುಮೋದನೆ ಸಿಕ್ಕಿದೆ. ಜಿಲ್ಲಾ ಕೇಂದ್ರದ ಎಸ್ಎನ್ಆರ್ ಜಿಲ್ಲಾ ಆಸ್ಪತ್ರೆಯಲ್ಲಿ ಸುಟ್ಟ ಗಾಯದ ರೋಗಿಗಳ ವಿಭಾಗ (ಬರ್ನಿಂಗ್ ವಾರ್ಡ್) ತೆರೆಯಲಾಗುತ್ತದೆ’ ಎಂದು ಭರವಸೆ ನೀಡಿದರು.

ಸಂಬಳ ಕಡಿತ: ‘ಜಿಲ್ಲೆಯಲ್ಲಿ ಇತ್ತೀಚೆಗೆ ಕೌಟುಂಬಿಕ ದೌರ್ಜನ್ಯ ಪ್ರಕರಣ ಕಡಿಮೆಯಾಗಿವೆ. ಈ ಸಂಗತಿ ಅವಲೋಕಿಸಿದರೆ ಸಿಡಿಪಿಒಗಳು ಕಚೇರಿಯಲ್ಲಿ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಗೊತ್ತಾಗುತ್ತದೆ. ಸಿಡಿಪಿಒಗಳ ಧೋರಣೆ ಬದಲಾಗದಿದ್ದರೆ ಸಂಬಳ ಕಡಿತಗೊಳಿಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

‘ಬಾಲ್ಯವಿವಾಹ ಸಂಬಂಧಪಟ್ಟ ಇಲಾಖೆಗಳು ಮುಂದಿನ ಸಭೆ ವೇಳೆಗೆ ಕನಿಷ್ಠ 5 ಪ್ರಕರಣ ಗುರುತಿಸಬೇಕು. ಬಾಲ್ಯವಿವಾಹ ತಡೆಗೆ ಅಧಿಕಾರಿಗಳು ತಂಡವಾಗಿ ಕೆಲಸ ಮಾಡಬೇಕು. ಬಾಲ್ಯವಿವಾಹದ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಬೇಕು. ದಮನಿತ ಮಹಿಳೆಯರು ಸರ್ಕಾರದ ಸೌಲಭ್ಯ ಪಡೆದು ಲೈಂಗಿಕ ವೃತ್ತಿಯಿಂದ ಹೊರಬಂದು ಸ್ವಾವಲಂಬಿ ಜೀವನ ನಡೆಸಬೇಕು’ ಎಂದರು.

ಸ್ವಾಧಾರ ಕೇಂದ್ರ: ‘ಮಾಲೂರಿನಲ್ಲಿ 2016ರಲ್ಲಿ ಸ್ವಾಧಾರ ಕೇಂದ್ರ ಆರಂಭವಾಯಿತು. ಈ ಕೇಂದ್ರದಲ್ಲಿ 30 ಮಕ್ಕಳಿದ್ದು, ಕೌಶಲಾಭಿವೃದ್ಧಿ ತರಬೇತಿ ನೀಡಲಾಗುತ್ತಿದೆ. ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಸಖಿ ಒನ್‌ಸ್ಟಾಪ್‌ ಸೆಂಟರ್‌ನಲ್ಲಿ ಒಂದೇ ಸೂರಿನಡಿ ವೈದ್ಯಕೀಯ, ಪೊಲೀಸ್, ಕಾನೂನು ಸೇವೆ, ಸಮಾಲೋಚನೆ ಮತ್ತು ತಾತ್ಕಾಲಿಕ ವಸತಿ ಸೌಲಭ್ಯ ಒದಗಿಸಲಾಗುತ್ತದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಪಾಲಿ ಮಾಹಿತಿ ನೀಡಿದರು.

‘ಜಿಲ್ಲೆಯಲ್ಲಿ 2020–21ನೇ ಸಾಲಿನಲ್ಲಿ 11 ದೌರ್ಜನ್ಯ ಪ್ರಕರಣ ವರದಿಯಾಗಿವೆ. ಅತ್ಯಾಚಾರ ಸಂಬಂಧ 25 ಪ್ರಕರಣ, 3 ಅಪಹರಣ ಪ್ರಕರಣ ದಾಖಲಾಗಿವೆ. ಸಾಂತ್ವನ ಕೇಂದ್ರಗಳಲ್ಲಿ 3,369 ಮಹಿಳೆಯರು ವಿವಿಧ ಸೌಲಭ್ಯ ಪಡೆದುಕೊಂಡಿದ್ದಾರೆ’ ಎಂದು ವಿವರಿಸಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಚ್.ಗಂಗಾಧರ್‌, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಣಾಧಿಕಾರಿ ಎನ್.ಎಂ.ನಾಗರಾಜ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಾಹ್ನವಿ, ವಿವಿಧ ಇಲಾಖೆಗಳ ಅಧಿಕಾರಿಗಳು, ಸ್ವಯಂ ಸೇವಾ ಸಂಸ್ಥೆ ಪ್ರತಿನಿಧಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT