ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡಿಭಾಗದ ಮದ್ಯದ ಅಂಗಡಿ ಮುಚ್ಚಿಸಲು ಚಿಂತನೆ: ಸಂಸದ ಎಸ್‌.ಮುನಿಸ್ವಾಮಿ ಹೇಳಿಕೆ

Last Updated 8 ಮೇ 2020, 9:54 IST
ಅಕ್ಷರ ಗಾತ್ರ

ಕೆಜಿಎಫ್‌: ನೆರೆ ರಾಜ್ಯಗಳಲ್ಲಿ ಮದ್ಯದ ಬೆಲೆ ಹೆಚ್ಚಿರುವುದರಿಂದ ಗಡಿಭಾಗದ ಜನರು ರಾಜ್ಯಕ್ಕೆ ಮದ್ಯ ಖರೀದಿಗೆ ಬರುತ್ತಿದ್ದಾರೆ. ಇದರಿಂದ ಅನಗತ್ಯವಾಗಿ ಚೆಕ್‌ಪೋಸ್ಟ್‌ ದಾಟಿ ಬರುವಂತಾಗಿದೆ. ಆದ್ದರಿಂದ ಗಡಿ ಭಾಗದಲ್ಲಿರುವ ಮದ್ಯದ ಅಂಗಡಿಗಳನ್ನು ತಾತ್ಕಾಲಿಕವಾಗಿ ಮುಚ್ಚಿಸಬೇಕು ಎಂದು ಅಬಕಾರಿ ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ ಎಂದು ಸಂಸದ ಎಸ್‌.ಮುನಿಸ್ವಾಮಿ ಹೇಳಿದರು.

ನಗರದ ಕೆಂಪಾಪುರ ಚೆಕ್‌ಪೋಸ್ಟ್‌ಗೆ ಭೇಟಿ ನೀಡಿ ಮಾತನಾಡಿ, ಲಾಕ್‌ಡೌನ್ ಆದ ಬಹುದಿನದ ನಂತರ ಮದ್ಯದ ಅಂಗಡಿಗಳು ತೆರೆದಿವೆ. ಆದ್ದರಿಂದ ಮೊದಲನೇ ದಿನ ಅಬ್ಬರ ಜಾಸ್ತಿ ಇತ್ತು. ಈಗ ಕಡಿಮೆಯಾಗಿದೆ. ಸಣ್ಣಪುಟ್ಟ ಅಂಗಡಿಗಳಲ್ಲಿ, ಮನೆಗಳಲ್ಲಿಟ್ಟು ಕೊಂಡು ಮದ್ಯ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಗಡಿಭಾಗದ ಚೆಕ್‌ಪೋಸ್ಟ್‌ನಲ್ಲಿ ನಮ್ಮ ಅಧಿಕಾರಿಗಳು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಆದರೂ, ನೆರೆ ರಾಜ್ಯದಿಂದ ವಾಮಮಾರ್ಗದಲ್ಲಿ ನುಸುಳಿ ಬರುತ್ತಿದ್ದಾರೆ ಎಂಬ ಮಾಹಿತಿ ಇದೆ. ಪೊಲೀಸರ ಜೊತೆಗೆ ಗ್ರಾಮಸ್ಥರು ಸಹ ಕಾವಲಿನಲ್ಲಿ ಸಹಕರಿಸಬೇಕು ಎಂದರು.

ತಮಿಳುನಾಡು ಮತ್ತು ಆಂಧ್ರಪ್ರದೇಶದ ಗಡಿಯಲ್ಲಿ ಖಾಯಂ ಚೆಕ್‌ಪೋಸ್ಟ್‌ ನಿರ್ಮಾಣ ಮಾಡಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೋರಿಕೆಗೆ ಸಹಮತ ವ್ಯಕ್ತಪಡಿಸಿದ ಸಂಸದರು, ಹೊಸೂರು ರಸ್ತೆಯಲ್ಲಿರುವ ಗಡಿ ಚೆಕ್‌ಪೋಸ್ಟ್ ರೀತಿಯಲ್ಲಿ ಆಧುನಿಕ ಚೆಕ್‌ಪೋಸ್ಟ್ ನಿರ್ಮಾಣವಾಗಬೇಕು. ಕೂಡಲೇ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಉಪ ವಿಭಾಗಾಧಿಕಾರಿ ಸೋಮಶೇಖರ್‌ಗೆ ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಸ್‌.ಮೊಹಮದ್ ಸುಜೀತ, ತಹಶೀಲ್ದಾರ್ ಕೆ.ರಮೇಶ್‌, ಡಿವೈಎಸ್ಪಿ ಉಮೇಶ್‌, ಮಾಜಿ ಶಾಸಕ ವೈ.ಸಂಪಂಗಿ, ಬಿಜೆಪಿ ಮುಖಂಡರಾದ ಕಮಲನಾಥನ್‌, ಜಯಪ್ರಕಾಶ್ ಬುಜ್ಜಿ ನಾಯ್ಡು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT