ಮಂಗಳವಾರ, ಫೆಬ್ರವರಿ 18, 2020
30 °C
ಸಿಬಿಐಟಿ ಆವರಣದಲ್ಲಿ ಮೇಳ: ಉದ್ಯೋಗ ಆಕಾಂಕ್ಷಿಗಳ ನೋಂದಣಿ

ಉದ್ಯೋಗ ಮೇಳಕ್ಕೆ ಕ್ಷಣಗಣನೆ: ಸಕಲ ಸಿದ್ಧತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ನಗರದ ಹೊರವಲಯದ ಸಿ.ಬೈರೇಗೌಡ ತಾಂತ್ರಿಕ ಮಹಾವಿದ್ಯಾಲಯದ (ಸಿಬಿಐಟಿ) ಆವರಣದಲ್ಲಿ ಮಂಗಳವಾರದಿಂದ (ಫೆ.11) ಆರಂಭವಾಗಲಿರುವ ಬೃಹತ್‌ ಉದ್ಯೋಗ ಮೇಳಕ್ಕೆ ಸಕಲ ಸಿದ್ಧತೆ ನಡೆದಿದ್ದು, ಮೇಳಕ್ಕೆ ಕ್ಷಣಗಣನೆ ಆರಂಭವಾಗಿದೆ.

ಮೇಳದಲ್ಲಿ ಪಾಲ್ಗೊಳ್ಳಲಿರುವ ಉದ್ಯೋಗ ಆಕಾಂಕ್ಷಿಗಳು ಈಗಾಗಲೇ ಆನ್‌ಲೈನ್‌ ಮೂಲಕ ಹೆಸರು ನೋಂದಾಯಿಸಿದ್ದಾರೆ. ಈವರೆಗೆ 13,500 ಮಂದಿ ಹೆಸರು ನೋಂದಣಿ ಮಾಡಿಕೊಂಡಿದ್ದು, ಮೇಳದ ಸ್ಥಳದಲ್ಲಿ ಮಂಗಳವಾರ ಸುಮಾರು 2 ಸಾವಿರ ಉದ್ಯೋಗ ಆಕಾಂಕ್ಷಿಗಳು ಹೆಸರು ನೋಂದಾಯಿಸುವ ನಿರೀಕ್ಷೆಯಿದೆ.

ಉದ್ಯೋಗ ಆಕಾಂಕ್ಷಿಗಳು ಆನ್‌ಲೈನ್‌ನಲ್ಲಿ ತಮ್ಮ ಹೆಸರು, ವಿದ್ಯಾರ್ಹತೆ, ಜನ್ಮ ದಿನಾಂಕ, ಮೊಬೈಲ್‌ ಸಂಖ್ಯೆ ಸೇರಿದಂತೆ ವೈಯಕ್ತಿಕ ವಿವರ ದಾಖಲಿಸಿದ್ದಾರೆ. ಈ ಅಭ್ಯರ್ಥಿಗಳ ಮೊಬೈಲ್‌ಗೆ ಈಗಾಗಲೇ ಖಾತರಿ ಸಂದೇಶ ರವಾನಿಸಲಾಗಿದೆ. ವಿದ್ಯಾಭ್ಯಾಸ ಪೂರ್ಣಗೊಳಿಸಿರುವವರಿಗೆ ಉದ್ಯೋಗ ಕಲ್ಪಿಸಲು ಮೇಳದಲ್ಲಿ ಮೊದಲ ಆದ್ಯತೆ ನೀಡಲಾಗಿದೆ.

ಒಟ್ಟಾರೆ 2 ದಿನಗಳ ಕಾಲ ಮೇಳ ನಡೆಯಲಿದ್ದು, ಮೇಳದಲ್ಲಿ ಪಾಲ್ಗೊಳ್ಳಲಿರುವ ಅಭ್ಯರ್ಥಿಗಳು ಹಾಗೂ ಕಂಪನಿಗಳ ಪ್ರತಿನಿಧಿಗಳಿಗೆ ಸ್ಥಳದಲ್ಲೇ ಊಟದ ವ್ಯವಸ್ಥೆ ಮಾಡಲಾಗಿದೆ. ಮೇಳದ ಮುಖ್ಯ ಪೆಂಡಾಲ್‌ನಲ್ಲಿ ಸುಮಾರು 2 ಸಾವಿರ ಜನರಿಗೆ ಆಸನ ವ್ಯವಸ್ಥೆ ಮಾಡಲಾಗಿದೆ. ಅಭ್ಯರ್ಥಿಗಳ ಅನುಕೂಲಕ್ಕಾಗಿ ಮಾಹಿತಿ ಕೇಂದ್ರ ಹಾಗೂ ನೋಂದಣಿ ಕೌಂಟರ್ ತೆರೆಯಲಾಗಿದೆ.

ಜಿಲ್ಲೆಯ ಕೈಗಾರಿಕಾ ಪ್ರದೇಶಗಳಲ್ಲಿನ ಕೈಗಾರಿಕೆಗಳು ಹಾಗೂ ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಕಂಪನಿಗಳಿಗೆ ಜಿಲ್ಲಾಡಳಿತವು ಮೇಳಕ್ಕೆ ಆಹ್ವಾನ ನೀಡಿದೆ. ಉತ್ಪಾದನೆ, ಮಾಹಿತಿ ತಂತ್ರಜ್ಞಾನ, ಬ್ಯಾಂಕಿಂಗ್, ಫೈನಾನ್ಸ್‌, ಇನ್ಶೂರೆನ್ಸ್‌, ಜವಳಿ, ಪ್ರತಿಷ್ಠಿತ ಕೈಗಾರಿಕೆಗಳು, ಆಟೊ ಮೊಬೈಲ್ಸ್‌ ಮತ್ತು ಇತರೆ ವಲಯದ ಒಟ್ಟು 250ಕ್ಕೂ ಹೆಚ್ಚು ಕಂಪನಿಗಳು ಮೇಳದಲ್ಲಿ ಭಾಗಿಯಾಗಲಿವೆ. ಈ ಕಂಪನಿಗಳ ಪ್ರತಿನಿಧಿಗಳಿಗೆ ಮೂಲಸೌಕರ್ಯ ಒದಗಿಸಲಾಗಿದೆ.

ಸಹಾಯವಾಣಿ: ‘ಸಿಬಿಐಟಿ ಅವರಣದಲ್ಲಿ 2 ದಿನ ಉದ್ಯೋಗ ಮೇಳ ನಡೆಯಲಿದೆ. ಮೇಳದ ಯಶಸ್ಸಿಗೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳ ನೇತೃತ್ವದ ಸಮಿತಿ ರಚಿಸಲಾಗಿದೆ. ಮೇಳಕ್ಕೆ ಸಿದ್ಧತೆ ಪೂರ್ಣಗೊಂಡಿದೆ. ಉದ್ಯೋಗ ಆಕಾಂಕ್ಷಿಗಳ ನೆರವಿಗಾಗಿ ಸಹಾಯವಾಣಿ ಕೇಂದ್ರ ಸಹ ಆರಂಭಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ತಿಳಿಸಿದರು.

‘ಮೇಳ ನಡೆಯುವ ಸ್ಥಳದಲ್ಲಿ 25 ಕೌಂಟರ್ ತೆರೆಯಲಾಗಿದೆ. ಕಂಪ್ಯೂಟರ್ ಅಳವಡಿಸಲಾಗಿದೆ. 7ನೇ ತರಗತಿ ವಿದ್ಯಾರ್ಹತೆಯಿಂದ ಹಿಡಿದು ಪದವಿ, ತಾಂತ್ರಿಕ ಪದವಿ, ಐಟಿಐ, ಡಿಪ್ಲೊಮಾ ಸೇರಿದಂತೆ ಇತರೆ ಪದವೀಧರರು ಈಗಾಗಲೇ ಆನ್‌ಲೈನ್‌ನಲ್ಲಿ ಹೆಸರು ನೋಂದಾಯಿಸಿದ್ದಾರೆ’ ಎಂದು ವಿವರಿಸಿದರು.

‘ಉದ್ಯೋಗ ಆಕಾಂಕ್ಷಿಗಳ ವಿದ್ಯಾರ್ಹತೆಗೆ ತಕ್ಕಂತೆ ಪ್ರತ್ಯೇಕ ಕೌಂಟರ್‌ ರಚಿಸಲಾಗಿದೆ. ಸಹಾಯವಾಣಿ ಸಿಬ್ಬಂದಿ ಮಾಹಿತಿ ನೀಡುತ್ತಾರೆ. ಉದ್ಯೋಗದಾತರು ಮತ್ತು ಉದ್ಯೋಗಾಕಾಂಕ್ಷಿಗಳ ನಡುವಿನ ಸೇತುವೆಯಾಗಿ ಮೇಳ ಕಾರ್ಯ ನಿರ್ವಹಿಸಲಿದೆ’ ಎಂದು ಮಾಹಿತಿ ನೀಡಿದರು.

ಬಸ್‌ ಸೌಕರ್ಯ

ಉದ್ಯೋಗ ಮೇಳದ ಹಿನ್ನೆಲೆಯಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು (ಕೆಎಸ್‌ಆರ್‌ಟಿಸಿ) ಹೆಚ್ಚುವರಿ ಬಸ್‌ ಸೌಕರ್ಯ ಕಲ್ಪಿಸಿದೆ. ಮೇಳದ ಎರಡೂ ದಿನ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಂದ ಸಿಬಿಐಟಿಗೆ ಹೆಚ್ಚುವರಿ ಬಸ್‌ಗಳು ಸಂಚರಿಸಲಿವೆ. ಅಲ್ಲದೇ, ಜಿಲ್ಲಾ ಕೇಂದ್ರದ ಕೆಎಸ್‌ಆರ್‌ಟಿಸಿ ನಿಲ್ದಾಣದಿಂದ ಮೇಳದ ಸ್ಥಳಕ್ಕೆ ಬಸ್‌ಗಳು ಸಂಚರಿಸಲಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು