ಶುಕ್ರವಾರ, ಮಾರ್ಚ್ 5, 2021
30 °C
ಪಥಸಂಚಲನದ ಮೆರುಗು: ರಾರಾಜಿಸಿದ ರಾಷ್ಟ್ರಧ್ವಜಗಳು

ಕೋಲಾರ | ಕೋವಿಡ್‌ ಭೀತಿ: ರಾಷ್ಟ್ರಹಬ್ಬದ ಸರಳ ಆಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಕೊರೊನಾ ಸೋಂಕಿನ ಆತಂಕದ ನಡುವೆಯೂ ಜಿಲ್ಲೆಯಲ್ಲಿ ಶನಿವಾರ ರಾಷ್ಟ್ರೀಯ ಹಬ್ಬ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ಕಳೆಗಟ್ಟಿತು.

ಜಿಲ್ಲಾ ಕೇಂದ್ರದ ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಸಾಕಷ್ಟು ಸುರಕ್ಷತಾ ಕ್ರಮಗಳೊಂದಿಗೆ ಅಂತರ ಕಾಯ್ದುಕೊಂಡು, ಮಾಸ್ಕ್‌ ಧರಿಸಿ ಮತ್ತು ಸ್ಯಾನಿಟೈಸರ್‌ ಬಳಕೆ ಮಾಡಿ ಸರಳವಾಗಿ ಸ್ವಾತಂತ್ರ್ಯ ದಿನ ಆಚರಿಸಲಾಯಿತು.

ಸರ್ಕಾರಿ ಕಚೇರಿಗಳು, ಬ್ಯಾಂಕ್‌ ಹಾಗೂ ನ್ಯಾಯಾಲಯ ಕಟ್ಟಡಗಳಲ್ಲಿ ರಾಷ್ಟ್ರಧ್ವಜ ಹಾರಿಸಿ ಸ್ವಾತಂತ್ರ್ಯ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಪ್ರಮುಖ ರಾಜಕೀಯ ಪಕ್ಷಗಳ ಕಚೇರಿಗಳಲ್ಲಿ ತ್ರಿವರ್ಣ ಧ್ವಜ ಹಾರಿಸಿ, ರಾಷ್ಟ್ರಗೀತೆ ಹಾಡಿ ಗೌರವ ಸೂಚಿಸಲಾಯಿತು.

ಕೋವಿಡ್–19 ಕಾರಣಕ್ಕೆ ಶಾಲಾ ಕಾಲೇಜುಗಳಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ಕಂಡುಬರಲಿಲ್ಲ. ಶಾಲೆ ಮುಖ್ಯ ಶಿಕ್ಷಕರು ಬೆರಳೆಣಿಕೆ ಸಿಬ್ಬಂದಿಯೊಂದಿಗೆ ಧ್ವಜಾರೋಹಣ ನೆರವೇರಿಸಿದರು. ಸಂಘ ಸಂಸ್ಥೆಗಳು ಸೇವಾ ಕಾರ್ಯಗಳ ಮೂಲಕ ಸ್ವಾತಂತ್ರ್ಯ ದಿನಾಚರಣೆಯನ್ನು ಅರ್ಥಪೂರ್ಣವಾಗಿಸಿದರು.

ಪೊಲೀಸ್‌ ಬಂದೋಬಸ್ತ್‌: ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾ ಕ್ರೀಡಾಂಗಣದಲ್ಲಿ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಹೆಚ್ಚಿನ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು. ಪೊಲೀಸ್‌ ಸಿಬ್ಬಂದಿ ಪ್ರತಿ ವ್ಯಕ್ತಿಯನ್ನು ತಪಾಸಣೆ ಮಾಡಿ ಕ್ರೀಡಾಂಗಣದ ಒಳ ಹೋಗಲು ಬಿಟ್ಟರು. ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೆರವೇರಿಸಿ ಪೊಲೀಸರಿಂದ ಗೌರವ ವಂದನೆ ಸ್ವೀಕರಿಸಿದರು.

ಪೊಲೀಸ್‌ ಸಿಬ್ಬಂದಿಯು ಆಕರ್ಷಕ ಪಥಸಂಚಲನದ ಮೂಲಕ ಕಾರ್ಯಕ್ರಮಕ್ಕೆ ಮೆರುಗು ನೀಡಿದರು. ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್‌ ಪಡೆ, ಕೋಲಾರ ಉಪ ವಿಭಾಗದ ಪೊಲೀಸ್ ಪಡೆ, ಮುಳಬಾಗಿಲು ಉಪ ವಿಭಾಗದ ಪೊಲೀಸ್ ಪಡೆ, ಜಿಲ್ಲಾ ಮಹಿಳಾ ಪೊಲೀಸ್‌ ಪಡೆ, ಗೃಹರಕ್ಷಕ ದಳ ಸಿಬ್ಬಂದಿ ಪಥ ಸಂಚಲನದಲ್ಲಿ ಭಾಗವಹಿಸಿದರು. ಸಚಿವರು, ಸಂಸದರು, ಶಾಸಕರು ಹಾಗೂ ಗಣ್ಯರು ಪಥಸಂಚಲನ ವೀಕ್ಷಿಸಿದರು.

ಪ್ರಮುಖ ಆಕರ್ಷಣೆ: ಸರಳ ಆಚರಣೆ ನಡುವೆಯೂ ಮಾಜಿ ಯೋಧರ ತಂಡವು ಇದೇ ಮೊದಲ ಬಾರಿಗೆ ಸುಮಾರು 70 ಮೀಟರ್ ಉದ್ದದ ತ್ರಿವರ್ಣ ಧ್ವಜ ಪ್ರದರ್ಶಿಸಿದ್ದು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು.

ಅಂತರಗಂಗೆ ರಸ್ತೆಯ ಪ್ರವೇಶ ಭಾಗದಲ್ಲಿ ಬೃಹತ್‌ ಸ್ವಾಗತ ಕಮಾನು ಹಾಕಲಾಗಿತ್ತು. ರಸ್ತೆಯ ಇಕ್ಕೆಲಗಳಲ್ಲಿ ರಾಷ್ಟ್ರಧ್ವಜಗಳು ರಾರಾಜಿಸುತ್ತಿದ್ದವು. ಆಟೊ ಚಾಲಕರು, ಬಸ್‌ ಚಾಲಕರು ಹಾಗೂ ಬೈಕ್‌ ಸವಾರರು ವಾಹನಗಳ ಮೇಲೆ ರಾಷ್ಟ್ರಧ್ವಜ ಹಾಕಿಕೊಂಡು ಓಡಾಡುತ್ತಿದ್ದ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು