ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಮುಕ್ತ ಶಾಲೆ ಗುರಿ

ಮಾರ್ಗಸೂಚಿ ಪಾಲನೆ ಕಡ್ಡಾಯ: ರಾಜ್ಯ ಶಿಕ್ಷಣ ಇಲಾಖೆ ನಿರ್ದೇಶಕ ಕೃಷ್ಣ ಕರಿಚನ್ನಣ್ಣನವರ್ ಹೇಳಿಕೆ
Last Updated 7 ಸೆಪ್ಟೆಂಬರ್ 2021, 13:38 IST
ಅಕ್ಷರ ಗಾತ್ರ

ಕೋಲಾರ: ‘ನಿರಂತರ ಸ್ವಚ್ಛತೆ, ನೈರ್ಮಲ್ಯದಿಂದ ಮಾತ್ರ ರೋಗ ಮುಕ್ತ ಸಮಾಜ ಹಾಗೂ ಶಾಲೆ ನಿರ್ಮಾಣ ಸಾಧ್ಯ. ಈ ಕಲ್ಪನೆಯೊಂದಿಗೆ ಶಾಲೆಗಳಲ್ಲಿ ಮಕ್ಕಳಿಗೆ ಜಾಗೃತಿ ಮೂಡಿಸುವ ಕೆಲಸವನ್ನು ಶಿಕ್ಷಕರು ಮಾಡಬೇಕು’ ಎಂದು ರಾಜ್ಯ ಶಿಕ್ಷಣ ಇಲಾಖೆ ನಿರ್ದೇಶಕ ಕೃಷ್ಣ ಜಿ.ಎಸ್.ಕರಿಚನ್ನಣ್ಣನವರ್ ಹೇಳಿದರು.

ಶಿಕ್ಷಣ ಇಲಾಖೆಯು ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಸ್ವಚ್ಛತಾ ಪಕ್ವಾಡ–2021 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ಕೋವಿಡ್‌ನಿಂದ ಸಾಕಷ್ಟು ತೊಂದರೆ ಅನುಭವಿಸಿದ್ದೇವೆ. ಶೈಕ್ಷಣಿಕವಾಗಿ ಭಾರಿ ಹಿನ್ನಡೆ ಆಗಿದೆ. ಇದೀಗ ಶಾಲೆಗಳು ಆರಂಭವಾಗಿದ್ದು, ಕಡ್ಡಾಯವಾಗಿ ಕೋವಿಡ್ ಮಾರ್ಗಸೂಚಿ ಪಾಲಿಸಿ’ ಎಂದು ತಾಕೀತು ಮಾಡಿದರು.

‘ಮಕ್ಕಳ ಸುರಕ್ಷತೆ ದೃಷ್ಟಿಯಿಂದ 5 ದಿನ ಶಾಲೆ ನಡೆಸಲು ಸೂಚಿಸಲಾಗಿದೆ. ಗ್ರಾಮ ಪಂಚಾಯಿತಿಗಳ ಸಹಕಾರ ಪಡೆದು ಶನಿವಾರದ ದಿನ ಶಾಲೆಗಳಿಗೆ ಸ್ಯಾನಿಟೈಸರ್ ಸಿಂಪಡಣೆ ಮಾಡಬೇಕು ಮತ್ತು ಸ್ವಚ್ಛತಾ ಕಾರ್ಯ ನಿರ್ವಹಿಸಬೇಕು. ವಿದ್ಯಾರ್ಥಿಗಳು ತರಗತಿಯಲ್ಲಿ ಅಂತರ ಕಾಪಾಡಬೇಕು. ಸ್ನೇಹಿತರು ಎಂದು ಅಕ್ಕಪಕ್ಕ ಕೂರಬಾರದು. ಕೋವಿಡ್ ಸಂದರ್ಭದಲ್ಲಿ ಆರೋಗ್ಯ ರಕ್ಷಣೆಗೆ ಸರ್ಕಾರ ಸೂಚಿಸುವ ಕ್ರಮಗಳನ್ನು ಪಾಲಿಸದಿದ್ದರೆ ಸಂಕಷ್ಟ ಎದುರಿಸಬೇಕಾಗುತ್ತದೆ’ ಎಂದರು.

ಮಕ್ಕಳೊಂದಿಗೆ ಸಂವಾದ ನಡೆಸಿದ ನಿರ್ದೇಶಕರು ಸೇತುಬಂಧ, ಹಿಂದಿನ ವರ್ಷದ ಪಾಠಗಳ ಅವಲೋಕನದ ಕುರಿತು ಮಾಹಿತಿ ಪಡೆದು, ‘ಇ-–ಸಂವೇದ, ಚಂದನಾ ದೂರದರ್ಶನದ ಪಾಠಗಳನ್ನು ನೋಡಿ’ ಎಂದು ತಿಳಿಸಿದರು.

ಮಾರ್ಗದರ್ಶನ ಪಾಲಿಸಿ: ‘75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಆಜಾದಿ ಕಾ ಅಮೃತ ಮಹೋತ್ಸವ ಕಾರ್ಯಕ್ರಮದಡಿ ಉತ್ತಮ ಭಾರತ ನಿರ್ಮಿಸುವ ಸದುದ್ದೇಶದಿಂದ ಸ್ವಚ್ಛತಾ ಪಕ್ವಾಡ–-2021ರಡಿ ನೈರ್ಮಲ್ಯ ಮತ್ತು ಸ್ವಚ್ಛತೆ ಕುರಿತು ಜಾಗೃತಿ ಮೂಡಿಸಲು ಸೆ.1ರಿಂದ ಸೆ.15ರವರೆಗೆ ಈ ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಕೆ.ರತ್ನಯ್ಯ ವಿವರಿಸಿದರು.

‘ಸ್ವಚ್ಛತಾ ಪಕ್ವಾಡದ ಮೂಲಕ ಶಾಲೆಯ ಜತೆಗೆ ಮನೆಯಲ್ಲೂ ಸ್ವಚ್ಛತೆಗೆ ಒತ್ತು ನೀಡಿ. ಶಾಲೆಗೆ ಬರುವಾಗ ಕುಡಿಯಲು ಮನೆಯಿಂದಲೇ ಬಿಸಿ ನೀರು ತನ್ನಿ. ಸರ್ಕಾರ ಆನ್‌ಲೈನ್ ಮತ್ತು ಆಫ್‌ಲೈನ್ ಮೂಲಕ ತರಗತಿ ನಡೆಸಲು ಸೂಚಿಸಿದೆ. ಮಕ್ಕಳು ಶಿಕ್ಷಕರು ನೀಡಿದ ಮಾರ್ಗದರ್ಶನ ಪಾಲಿಸಬೇಕು’ ಎಂದು ಹೇಳಿದರು.

‘ವಿದ್ಯಾರ್ಥಿಗಳು ಸ್ವಚ್ಛತೆ ಕುರಿತು ಹಿರಿಯರಿಗೆ ಮಾರ್ಗದರ್ಶನ ನೀಡಬೇಕು. ಶೌಚಾಲಯ ಬಳಸುವಾಗ ಮತ್ತು ಬಳಸಿದ ನಂತರ ನೀರು ಹಾಕಿ ಸ್ವಚ್ಛತೆ ಕಾಪಾಡಬೇಕು. ಶಾಲಾ ಶಿಕ್ಷಣವೇ ಕಲಿಕೆಗೆ ಪೂರಕ ಆಗಿರುವುದರಿಂದ ಕೊರೊನಾ ಸೋಂಕು ತಾಗದಂತೆ ಎಚ್ಚರ ವಹಿಸಿ ಶಾಲೆಗಳನ್ನು ಕೋವಿಡ್ ಮುಕ್ತವಾಗಿಸಬೇಕು. ಕೋವಿಡ್ 3ನೇ ಅಲೆ ಆತಂಕ ಕಾಡುತ್ತಿದೆ. ಜೀವವೂ ಮುಖ್ಯ, ಕಲಿಕೆಯೂ ಮುಖ್ಯವೆಂದು ಅರಿತು ಮಕ್ಕಳ ಆರೋಗ್ಯ ರಕ್ಷಣೆ ಬಗ್ಗೆ ಗಮನಹರಿಸಿ’ ಎಂದು ಕಿವಿಮಾತು ಹೇಳಿದರು.

‘ಇಲಾಖೆ ಸೂಚನೆಯಂತೆ ಶಾಲೆಗಳಲ್ಲಿ ಆಯಾ ತರಗತಿ ಮಕ್ಕಳನ್ನು ಮಾತ್ರ ಕರೆಸಿಕೊಳ್ಳಿ. ಹೆಚ್ಚು ಮಕ್ಕಳು ಒಂದೆಡೆ ಸೇರಿದರೆ ಅಂತರ ಕಾಯ್ದುಕೊಳ್ಳಲು ಸಮಸ್ಯೆಯಾಗಿ ಸೋಂಕು ಹರಡಲು ಅವಕಾಶವಾಗುತ್ತದೆ. ಡೆಸ್ಕ್‌ಗೆ ಇಬ್ಬರು ವಿದ್ಯಾರ್ಥಿಗಳನ್ನು ಮಾತ್ರ ಕೂರಿಸಬೇಕು. ಶಿಕ್ಷಕರನ್ನೇ ನಂಬಿ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಿದ್ದಾರೆ. ಅವರ ನಂಬಿಕೆಗೆ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳಿ’ ಎಂದು ಡಿಡಿಪಿಐ ಎಸ್.ಜಿ.ನಾಗೇಶ್ ಸಲಹೆ ನೀಡಿದರು.

ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್, ಶಿಕ್ಷಣ ಸಂಯೋಜಕ ಆರ್.ಶ್ರೀನಿವಾಸನ್, ಎಸ್‌ಡಿಎಂಸಿ ಅಧ್ಯಕ್ಷ ಮಹೇಂದ್ರ, ಶಾಲೆಯ ಮುಖ್ಯ ಶಿಕ್ಷಕ ಸಿ.ಎನ್.ಪ್ರದೀಪ್‌ಕುಮಾರ್, ಶಿಕ್ಷಕರಾದ ಸಚ್ಚಿದಾನಂದಮೂರ್ತಿ, ಭವಾನಿ, ಶ್ವೇತಾ, ಕೆ.ಲೀಲಾ, ಸುಗುಣಾ, ಫರೀದಾ, ವೆಂಕಟರೆಡ್ಡಿ, ಶ್ರೀನಿವಾಸಲು, ಡಿ.ಚಂದ್ರಶೇಖರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT