ಮಂಗಳವಾರ, ಜೂನ್ 28, 2022
26 °C

ಕೋವಿಡ್‌: ಕಡ್ಡಾಯವಾಗಿ ಲಸಿಕೆ ಪಡೆಯಿರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಕೋವಿಡ್ ಮಹಾಮಾರಿಯಿಂದ ಮುಕ್ತವಾಗಲು ವಕೀಲರು ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಬೇಕು. ಜತೆಗೆ ಕಕ್ಷಿದಾರರಿಗೂ ಲಸಿಕೆ ಹಾಕಿಸಿಕೊಳ್ಳುವಂತೆ ಮಾರ್ಗದರ್ಶನ ನೀಡಬೇಕು’ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಂ.ಎಲ್.ರಘುನಾಥ್ ಕಿವಿಮಾತು ಹೇಳಿದರು.

ಜಿಲ್ಲಾ ವಕೀಲರ ಸಂಘ ಮತ್ತು ಆರೋಗ್ಯ ಇಲಾಖೆ ಸಹಯೋಗದಲ್ಲಿ ವಕೀಲರು ಹಾಗೂ ಅವರ ಕುಟುಂಬ ಸದಸ್ಯರಿಗೆ ಇಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕೋವಿಡ್‌ ಲಸಿಕಾ ಅಭಿಯಾನ ಉದ್ಘಾಟಿಸಿ ಮಾತನಾಡಿದರು.

‘ಕೊರೊನಾ ಸೋಂಕಿನಿಂದ ದೇಶದ ಅರ್ಥ ವ್ಯವಸ್ಥೆ ಬುಡ ಮೇಲಾಗಿದ್ದು, ಜನರು ಆತಂಕದಲ್ಲಿ ಬದುಕುತ್ತಿದ್ದಾರೆ. ಜನರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸದಲ್ಲಿ ಸಮಾಜದ ಭಾಗವಾಗಿರುವ ವಕೀಲರು ಮುಖ್ಯ ಪಾತ್ರ ವಹಿಸಬೇಕು. ಕೋವಿಡ್‌ನಿಂದ ರಕ್ಷಣೆ ಪಡೆಯಲು ಇಂದು ಲಸಿಕೆ ಹಾಕಿಸಿಕೊಳ್ಳುವುದೇ ಉಳಿದಿರುವ ದಾರಿ. ಲಸಿಕೆ ಬಗ್ಗೆ ಅಪಪ್ರಚಾರ ನಡೆಯದಂತೆ ಎಚ್ಚರ ವಹಿಸಿ’ ಎಂದು ಸಲಹೆ ನೀಡಿದರು.

‘ಲಸಿಕೆ ಬಗ್ಗೆ ಸಾರ್ವಜನಿಕರಲ್ಲಿ ಗೊಂದಲವಿದೆ. ಯಾವ ಲಸಿಕೆ ಒಳ್ಳೆಯದು ಎಂಬ ತರ್ಕ ನಡೆಯುತ್ತಿದೆ. ಹತ್ತಿರದ ಆಸ್ಪತ್ರೆ, ಶಿಬಿರಗಳಲ್ಲಿ ಅಗತ್ಯವಿರುವ ಯಾವುದೇ ಲಸಿಕೆ ಹಾಕಿಸಿಕೊಂಡರೂ ಪರವಾಗಿಲ್ಲ. ಕುಟುಂಬ ಸದಸ್ಯರಿಗೂ ಲಸಿಕೆ ಪಡೆಯುವಂತೆ ಸೂಚಿಸಿ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಗದೀಶ್ ತಿಳಿಸಿದರು.

‘ಕೊರೊನಾ ಸೋಂಕು ಬಂದ ಬಳಿಕ ಎಷ್ಟು ದಿನದ ನಂತರ ಲಸಿಕೆ ಪಡೆಯಬೇಕೆಂಬ ಗೊಂದಲ ಸಾರ್ವಜನಿಕರಲ್ಲಿದೆ. ಸೋಂಕು ಬಂದ ದಿನದಿಂದ 3 ತಿಂಗಳ ನಂತರ ಲಸಿಕೆ ಪಡೆದರೆ ಯಾವುದೇ ತೊಂದರೆಯಿಲ್ಲ’ ಎಂದು ಹೇಳಿದರು.

ಧನ್ಯವಾದ: ‘ಆರೋಗ್ಯ ಇಲಾಖೆಯು ವಕೀಲರ ಭವನದಲ್ಲೇ ಲಸಿಕೆ ಅಭಿಯಾನ ನಡೆಸುವ ಮೂಲಕ ವಕೀಲರು ಮತ್ತು ಅವರ ಕುಟುಂಬದವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದೆ’ ಎಂದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಜಿ.ಶ್ರೀಧರ್ ಧನ್ಯವಾದ ಸಲ್ಲಿಸಿದರು.

ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ರಘುಪತಿಗೌಡ, ಗಾಂಧಿನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಫಿರ್ದೋಸ್‌, ಸರ್ಕಾರಿ ಅಭಿಯೋಜಕ ನಾರಾಯಣಸ್ವಾಮಿ, ವಕೀಲರಾದ ಕೆ.ಆರ್.ಧನರಾಜ್, ಅಮರೇಂದ್ರ, ವೆಂಕಟರಾಮಪ್ಪ, ಜಿ.ಕೆ.ಲೋಕೇಶ್, ಸೈಯದ್ ರಫಿ, ಕೃಷ್ಣಾರೆಡ್ಡಿ, ಲಕ್ಷ್ಮೀನಾರಾಯಣ ಪಾಲ್ಗೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು