ಗುರುವಾರ , ಮಾರ್ಚ್ 4, 2021
18 °C
ಕೇಂದ್ರೀಯ ತೆರಿಗೆ ಸಹಾಯಕ ಆಯುಕ್ತ ಬೈರಪ್ಪ ಸಲಹೆ

ಮಕ್ಕಳ ಕಲಿಕೆಗೆ ಪೂರಕ ವಾತಾವರಣ ಕಲ್ಪಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

 ಕೋಲಾರ: ‘ಮಕ್ಕಳಿಗೆ ಕಲಿಕೆಗೆ ಪೂರಕ ವಾತಾವರಣ ಕಲ್ಪಿಸಿದರೆ ಜೀವನದಲ್ಲಿ ಯಶಸ್ಸುಕಂಡುಕೊಳ್ಳಲು ಸಾಧ್ಯವಾಗುತ್ತದೆ’ ಎಂದು ಕೇಂದ್ರೀಯ ತೆರಿಗೆ ಸಹಾಯಕ ಆಯುಕ್ತ ಬೈರಪ್ಪ ತಿಳಿಸಿದರು.

ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ಇಲ್ಲಿನ ಯೋಗ ಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿ, ‘ಮಕ್ಕಳ ಕಲಿಕೆಗೆ ಪೂರಕ ವಾತಾವರಣ, ಸೂಕ್ತ ಮಾರ್ಗದರ್ಶನ ಸಿಕ್ಕಿದರೆ ಯಶಸ್ಸು ಸಾಧಿಸಬಹುದು’ ಎಂದರು.

‘ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವುದು ಕಷ್ಟವಲ್ಲ. ಐಎಎಸ್, ಐಎಫ್‍ಎಸ್, ಐಆರ್‍ಎಸ್, ಐಪಿಎಸ್ ಎಲ್ಲವೂ ಒಂದೇ, ಆದರೆ ಸೇವೆಗೆ ಇರುವ ಅವಕಾಶಗಳು ಬೇರೆಬೇರೆ. ಪ್ರಸ್ತುತ ಐಆರ್‍ಎಸ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ, ಎರಡು ಅಂಕಗಳಿಂದ ಐಎಎಸ್ ಆಗುವ ಅವಕಾಶ ಕೈ ತಪ್ಪಿತು. ಇನ್ನೊಂದು ಅವಕಾಶ ಇರುವುದರಿಂದ ಅದಕ್ಕೆ ಸಿದ್ದನಾಗುತ್ತಿದ್ದೇನೆ’ ಎಂದು ವಿವರಿಸಿದರು.

‘ವಿದ್ಯಾರ್ಥಿಗಳು ಸ್ಪಷ್ಟ ಗುರಿ ಇಟ್ಟುಕೊಂಡು ಸರಿಯಾದ ಮಾರ್ಗದರ್ಶನದಲ್ಲಿ ಸಾಗಿದರೆ ಯಶಸ್ಸು ಸಾಧಿಸಬಹುದು. ಪಿಯುಸಿ ನಂತರ ವಿದ್ಯಾರ್ಥಿಗಳು ಮುಂದೆ ರಾಜ್ಯ, ರಾಷ್ಟ್ರಮಟ್ಟದಲ್ಲಿ ಪರೀಕ್ಷೆಗಳನ್ನು ಎದುರಿಸಬೇಕಾಗಿರುವುದರಿಂದ ಈಗಿನಿಂದಲೇ ಸಿದ್ದತೆ ಮಾಡಿಕೊಳ್ಳಬೇಕು’ ಎಂದು ಕಿವಿ ಮಾತು ಹೇಳಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆ.ರತ್ನಯ್ಯ ಮಾತನಾಡಿ, ‘ಎಸ್ಸೆಸ್ಸೆಲ್ಸಿ, ಪಿಯುಸಿ ನಂತರ ಮುಂದೇನು ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ದಿಸೆಯಲ್ಲಿ ಈಗಿನಿಂದಲೇ ಪ್ರಯತ್ನ ಪಡಬೇಕು’ ಎಂದು ತಿಳಿಸಿದರು.

‘ಪ್ರತಿ ಹಂತದಲ್ಲೂ ಕುತೂಹಲ ಬೆಳೆಸಿಕೊಂಡು ಪ್ರಶ್ನಿಸುವ, ಅನ್ವೇಷಣೆ ಮಾಡುತ್ತಾ ಹೆಚ್ಚು ವಿಷಯಗಳನ್ನು ಸಂಗ್ರಹಿಸಬೇಕು. ರಾತ್ರಿ ಬೀಳುವ ಕನಸು ಬರೀ ಭ್ರಮೆ. ಜೀವನದಲ್ಲಿ ಸಾಧಿಸುವ ಕನಸನ್ನು ಕಂಡು ಅದನ್ನು ನನಸಾಗಿಸಲು ಪ್ರಯತ್ನಿಸಬೇಕು’ ಎಂದು ಸಲಹೆ ನೀಡಿದರು.

ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ತುಮಕೂರು ಪ್ರಾಂತ ಸಂಚಾಲಕ ಆರ್.ಚನ್ನಬಸಪ್ಪ ಮಾತನಾಡಿ, ‘ಪ್ರತಿಯೊಬ್ಬರೂ ಜೀವನದಲ್ಲಿ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಸಮಾಜಕ್ಕೆ ಸೇವೆ ಸಲ್ಲಿಸಿದರೆ ಸಾವಿನ ನಂತರವೂ ಸಾವಿರಾರು ವರ್ಷ ನೆನಪು ಉಳಿಯಂತೆ ಆಗುತ್ತದೆ’ ಎಂದರು.

‘ವೃತ್ತಿ ಬದುಕಿನಲ್ಲಿ ನಿಂದಿಸಿಕೊಂಡು ಕೆಲಸ ಮಾಡುವ ಬದಲು ಸೇವಾ ಮನೋಭಾವದಿಂದ ಕೆಲಸ ನಿರ್ವಹಿಸಿದರೆ ಮನಸ್ಸಿಗೆ ಕಷ್ಟ ಎನಿಸುವುದಿಲ್ಲ. ನಮ್ಮ ಸೇವೆ ದೇಶ, ನಾಡಿಗಾಗಿ ಎಂದು ತಿಳಿದು ಮಾಡಬೇಕು’ ಎಂದು ಸಲಹೆ ನೀಡಿದರು.

‘ಪತಂಜಲಿ ಯೋಗ ಶಿಕ್ಷಣ ಸಮಿತಿ 1970ರಲ್ಲಿ ಒಂದು ಶಾಖೆಯಾಗಿ ಆರಂಭಗೊಂಡು ಇಂದು ಸಾವಿರಾರು ಶಾಖೆಗಳು ಕಾರ್ಯನಿರ್ವಹಿಸುತ್ತಿದೆ. ಪ್ರತಿ ವಾರ 1,000ಕ್ಕೂ ಹೆಚ್ಚು ಸೇವಾ ಕಾರ್ಯಕ್ರಮ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ನಾಟ್ಯ ಯೋಗ ಶಿಬಿರ ರೈತರಿಗೆ, ನಿವೃತ್ತ ಯೋಧರಿಗೆ ಯೋಗ ಶಿಕ್ಷಣ ನೀಡುವ ಉದ್ದೇಶವಿದೆ’ ಎಂದು ತಿಳಿಸಿದರು.

ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡಿದ ಮಕ್ಕಳನ್ನು ಪುರಸ್ಕರಿಸಿ, ಸನ್ಮಾನಿಸಲಾಯಿತು.

ಸಮಿತಿ ಅಧ್ಯಕ್ಷ ಬಿಸಪ್ಪಗೌಡ, ಸಮಿತಿ ಹಿರಿಯರಾದ ನಂಜುಂಡಯ್ಯ ಶ್ರೇಷ್ಠಿ, ಉಪಾಧ್ಯಕ್ಷ ಡಾ.ಜನಾರ್ಧನ್, ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್, ಜಿಲ್ಲಾ ಸಂಚಾಲಕ ಮಾರ್ಕಂಡೇಯ ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.