ಶನಿವಾರ, ಸೆಪ್ಟೆಂಬರ್ 26, 2020
23 °C
ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ಹೋರಾಟದ ಎಚ್ಚರಿಕೆ

ಬಿಳಿ ಚೀಟಿ ವ್ಯವಹಾರಕ್ಕೆ ಕಡಿವಾಣ ಹಾಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಎಪಿಎಂಸಿಯಲ್ಲಿ ಬಿಳಿ ಚೀಟಿ ವ್ಯವಹಾರಕ್ಕೆ ಕಡಿವಾಣ ಹಾಕಬೇಕು. ನಿಗದಿತ 35 ಪೈಸೆ ಬಳಕೆದಾರರ ಶುಲ್ಕ ಪಾವತಿಸಿ ವಹಿವಾಟು ನಡೆಸಬೇಕು. ಇಲ್ಲದಿದ್ದರೆ ನಾನೇ ಹೋರಾಟ ನಡೆಸುತ್ತೇನೆ’ ಎಂದು ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ಎಚ್ಚರಿಕೆ ನೀಡಿದರು.

ಇಲ್ಲಿ ಎಪಿಎಂಸಿ ಆಡಳಿತ ಮಂಡಳಿ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿ. ‘ಬಿಳಿ ಚೀಟಿ ವ್ಯವಹಾರ ನ್ಯಾಯಯುತವಲ್ಲ. ಈ ವಿಚಾರದಲ್ಲಿ ರೈತ ಸಂಘಟನೆಗಳ ಹೋರಾಟಕ್ಕೆ ಅವಕಾಶ ನೀಡಬೇಡಿ. ಅಧಿಕೃತ ಬಿಲ್ ನೀಡಿ ಕ್ರಮಬದ್ಧವಾಗಿ ವ್ಯವಹಾರ ನಡೆಸಿದರೆ ಸೌಲಭ್ಯ ಕೇಳಲೂ ಸಮಿತಿಗೆ ಹಕ್ಕಿರುತ್ತದೆ’ ಎಂದರು.

‘ಎಪಿಎಂಸಿ ಸಮಸ್ಯೆ ವಿಚಾರವಾಗಿ ವಿಧಾನ ಪರಿಷತ್ತಿನಲ್ಲಿ ನಾನೇ ಧ್ವನಿ ಎತ್ತುತ್ತೇನೆ. ಕ್ರಮಬದ್ಧವಾಗಿ ವ್ಯವಹಾರ ಮಾಡದಿದ್ದರೆ ನಾನೇ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ’ ಎಂದು ಎಪಿಎಂಸಿ ಆಡಳಿತ ಮಂಡಳಿ ಸದಸ್ಯರು, ವರ್ತಕರು ಹಾಗೂ ದಲ್ಲಾಳಿಗಳಿಗೆ ಖಡಕ್‌ ಎಚ್ಚರಿಕ ನೀಡಿದರು.

‘ಕೋಲಾರ ಎಪಿಎಂಸಿ ಏಷ್ಯಾದ ಅತಿ ದೊಡ್ಡ ಮಾರುಕಟ್ಟೆ ಎಂಬ ಖ್ಯಾತಿ ಪಡೆದಿದೆ. ವಾಸ್ತವದಲ್ಲಿ ಇದು ದಡ್ಡ ಮಾರ್ಕೆಟ್‌. ಜಿಲ್ಲೆಯ ಜನಪ್ರತಿನಿಗಳು ಎಪಿಎಂಸಿ ಸಮಸ್ಯೆಗಳ ಪರಿಹಾರಕ್ಕೆ ಗಮನ ಹರಿಸಿಲ್ಲ. ಆಡಳಿತ ನಡೆಸಿದ ಅಧ್ಯಕ್ಷರು, ಉಪಾಧ್ಯಕ್ಷರು 6 ತಿಂಗಳಂತೆ ಅಧಿಕಾರ ಹಂಚಿಕೊಂಡಿದ್ದು ಬಿಟ್ಟರೆ ಅಭಿವೃದ್ಧಿಗೆ ಬದ್ಧತೆಯಿಂದ ಕೆಲಸ ಮಾಡಿಲ್ಲ. ಅಧಿಕಾರಿಗಳಿಗೂ ಬದ್ಧತೆಯಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಿಹಿ ಸುದ್ದಿ: ‘ಎಪಿಎಂಸಿ ವಿಸ್ತರಣೆಗೆ ಗುರುತಿಸಿರುವ ಜಮೀನು ನೀಡಿಕೆ ಸಂಬಂಧ ಸರ್ಕಾರ ಹಲವು ಕಾರಣ ನೀಡಿ ಪ್ರಸ್ತಾವ ತಿರಸ್ಕರಿಸಿದೆ. ಈ ಬಗ್ಗೆ ತಹಶೀಲ್ದಾರ್, ಜಿಲ್ಲಾಧಿಕಾರಿ ಜತೆ ಚರ್ಚಿಸಿದ್ದೇನೆ. ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಸೂಕ್ತ ಜಮೀನು ಕೊಡಿಸಲು ಪ್ರಯತ್ನ ಆರಂಭಿಸಿದ್ದೇನೆ. ಜಮೀನು ಸರ್ವೆ ಮಾಡಿಸಿ ಶೀಘ್ರವೇ ಸಿಹಿ ಸುದ್ದಿ ಕೊಡುತ್ತೇನೆ’ ಎಂದು ಭರವಸೆ ನೀಡಿದರು.

‘ವಿಧಾನ ಪರಿಷತ್‌ಗೆ ಆಯ್ಕೆಯಾಗಲು ಬೇರೆಯವರು ಸಾಕಷ್ಟು ಪ್ರಯತ್ನ ಮಾಡಿದರು. ನನಗಿಂತಲೂ ಬಲಿಷ್ಠರಾದವರು ಇದ್ದರು. ನನ್ನ ಹೆಸರು ಶಿಫಾರಸು ಮಾಡುವಂತೆ ಶಾಸಕ ಶ್ರೀನಿವಾಸಗೌಡರಿಗೆ ಹೇಳಿರಲಿಲ್ಲ. ಆದರೆ, ಪಕ್ಷದ ವರಿಷ್ಠರು ನನ್ನನ್ನು ಗುರುತಿಸಿ ಅವಕಾಶ ಕೊಟ್ಟಿದ್ದಾರೆ. ಈ ಅವಕಾಶ ಬಳಸಿಕೊಂಡು ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುತ್ತೇನೆ’ ಎಂದು ತಿಳಿಸಿದರು.

ಪ್ರಚಾರಕ್ಕೆ ಭೇಟಿ: ‘ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳು ಪಿಪಿಇ ಕಿಟ್ ಧರಿಸಿ ಎಸ್‌ಎನ್‌ಆರ್‌ ಆಸ್ಪತ್ರೆಗೆ ಹೋಗಿ ಪತ್ರಿಕೆಗಳಲ್ಲಿ ಪ್ರಚಾರ ಪಡೆದರು. ಆದರೆ, ಆಸ್ಪತ್ರೆಗೆ ಏನು ಬೇಕೆಂದು ಕೇಳಲಿಲ್ಲ. ಆಸ್ಪತ್ರೆಯಲ್ಲಿ ಕನಿಷ್ಠ ಶುದ್ಧ ಕುಡಿಯುವ ನೀರಿನ ಘಟಕವಿಲ್ಲ. ಈ ವಿಚಾರ ಹೇಳಲು ಆಸ್ಪತ್ರೆ ಸಿಬ್ಬಂದಿಗೆ ಅವಕಾಶ ಕೊಡಬೇಕಲ್ಲವೇ? ಎಲ್ಲದಕ್ಕೂ ಜಿಲ್ಲಾಧಿಕಾರಿಯೇ ಉತ್ತರಿಸುವುದಾದರೆ ಸಮಸ್ಯೆ ಬೆಳಕಿಗೆ ಬರುವುದಾದರೂ ಹೇಗೆ?’ ಎಂದು ಪ್ರಶ್ನಿಸಿದರು.

‘ಚೆಲುವನಹಳ್ಳಿಯಲ್ಲಿ ಗುರುತಿಸಿರುವ ಜಮೀನು ನೀರು ಮುಳುಗಡೆ ಪ್ರದೇಶವೆಂದು ದಾಖಲೆಪತ್ರಗಳಲ್ಲಿ ಇರುವುದರಿಂದ ಎಪಿಎಂಸಿಗೆ ಆ ಜಮೀನು ಸಿಗುವ ಅವಕಾಶ ಕಡಿಮೆ. ಈ ಹಿಂದೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಭೂಸ್ವಾಧೀನದ ಸಂಬಂಧ ಇಂತಹ ಕಾನೂನು ತೊಡಕಿನಿಂದ ನ್ಯಾಯಾಲಯ ₹ 10 ಕೋಟಿ ದಂಡ ವಿಧಿಸಿತ್ತು. ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ಒಗ್ಗೂಡಿ ಎಪಿಎಂಸಿಯ ಜಾಗದ ಸಮಸ್ಯೆ ಬಗೆಹರಿಸಬೇಕು’ ಎಂದು ಎಪಿಎಂಸಿ ಅಧ್ಯಕ್ಷ ಕೆ.ಮಂಜುನಾಥ್ ಮನವಿ ಮಾಡಿದರು.

ಎಪಿಎಂಸಿ ಉಪಾಧ್ಯಕ್ಷ ಎಲ್.ವೆಂಕಟೇಶಪ್ಪ, ನಿರ್ದೇಶಕರಾದ ಭಾಗ್ಯಮ್ಮ, ಕೆ.ರವಿಶಂಕರ್, ನಾರಾಯಣಸ್ವಾಮಿ, ವಿ.ಅಪ್ಪಯ್ಯಪ್ಪ, ಸಿ.ಎಂ.ಮಂಜುನಾಥ್, ಎಸ್.ರೇಖಾ, ಕಾರ್ಯದರ್ಶಿ ಟಿ.ಎಸ್.ರವಿಕುಮಾರ್, ಜೈ ಕರ್ನಾಟಕ ದಲ್ಲಾಳಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು