ಮಂಗಳವಾರ, ಮಾರ್ಚ್ 28, 2023
26 °C
ಆರ್‌.ಎಲ್‌.ಜಾಲಪ್ಪ ಅತಿಥಿ ಗೃಹ ಪಕ್ಕದ ಮೈದಾನದಲ್ಲಿ ಸೋಮವಾರ ಆಯೋಜಿಸಿದ್ದ ಕಾಂಗ್ರೆಸ್ ಪಕ್ಷದ ‘ಪ್ರಜಾಧ್ವನಿ’ ಸಮಾವೇಶ

ಬಿಜೆಪಿ‌ ಸರ್ಕಾರದ ಶೇ 40 ಕಮಿಷನ್ ಉಳಿಸಿದರೆ ಉಚಿತ ಯೋಜನೆಗೆ ಹಣ ಸಿಗಲಿದೆ: ಡಿಕೆಶಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

PV Photo

ಕೋಲಾರ: 'ರಾಜ್ಯ ಬಿಜೆಪಿ ಸರ್ಕಾರ ಪಡೆಯುತ್ತಿರುವ ಶೇ 40  ಕಮಿಷನ್ ಉಳಿಸಿದರೆ  ಸಾಕು 200 ಯೂನಿಟ್ ಉಚಿತ ವಿದ್ಯುತ್ ಹಾಗೂ ಕುಟುಂಬದ ಯಾಜಮಾನಿಗೆ ಪ್ರತಿ ತಿಂಗಳಿಗೆ ₹ 2  ಸಾವಿರ ಕೊಡಬಹುದು' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

ಆರ್‌.ಎಲ್‌.ಜಾಲಪ್ಪ ಅತಿಥಿ ಗೃಹ ಪಕ್ಕದ ಮೈದಾನದಲ್ಲಿ ಸೋಮವಾರ ಆಯೋಜಿಸಿದ್ದ ಕಾಂಗ್ರೆಸ್ ಪಕ್ಷದ ‘ಪ್ರಜಾಧ್ವನಿ’ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. 

'ರಾಜ್ಯ ಸರ್ಕಾರವು ಲಂಚ ಇಲ್ಲದೆ ಯಾರಿಗೂ ಉದ್ಯೋಗ ಕೊಡುತ್ತಿಲ್ಲ. ಹಲವರು ಐಪಿಎಸ್,‌ ಐಎಎಸ್ ಅಧಿಕಾರಿಗಳು ಸೇರಿದಂತೆ ಕೆಲಸ ಪಡೆದವರು, ಕೆಲಸ ಕೊಟ್ಟವರು ಲಂಚದ ಕಾರಣ ಜೈಲಿಗೆ ಹೋಗಿದ್ದಾರೆ. ನಾನು ಇಂಧನ ಸಚಿವನಾಗಿದ್ದಾಗ ಇಲಾಖೆಯ ನೇಮಕಾತಿ ನಡೆಯಿತು. ಯಾರಿಂದಲಾದರೂ ಲಂಚ ಪಡೆದೆನೇ ಹೇಳಿ' ಎಂದು ಕೇಳಿದರು.

'ಎಚ್.ಡಿ. ದೇವೇಗೌಡರನ್ನು ಪ್ರಧಾನಿ ಮಾಡಿದೆವು, ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದೆವು. ಅಧಿಕಾರ ಕೊಟ್ಟರೂ ಅವರು ಉಳಿಸಿಕೊಳ್ಳಲಿಲ್ಲ. ಐದು ವರ್ಷ ನೀವೇ ಮುಖ್ಯಮಂತ್ರಿ ಆಗಿರಿ ಎಂಬುದಾಗಿ ಹೇಳಿದ್ದೆವು. ಅದೂ ಅವರಿಗೆ ಸಾಧ್ಯವಾಗಲಿಲ್ಲ' ಎಂದು ಟೀಕಿಸಿದರು.

'ಕೆ.ಸಿ.ವ್ಯಾಲಿ ಯೋಜನೆ ಬಗ್ಗೆ ಕೆಲವರು ಟೀಕಿಸಿದ್ದಾರೆ. ಆದರೆ, ಈ ಯೋಜನೆಯಿಂದ ಕೋಲಾರ ಜಿಲ್ಲೆಯಲ್ಲಿ ಅಂತರ್ಜಲ ‌ಮಟ್ಟ ಹೆಚ್ಚಿದೆ. ಬಚ್ಚಲು ನೀರು ಕೊಡುತ್ತೇವೆಯೋ,  ಕನ್ನಂಬಾಡಿ ನೀರು ಕೊಡುತ್ತೇವೆಯೋ ? ರೈತರ ಬದುಕು ಹಸನಾಗಿದೆಯೋ ಇಲ್ಲವೋ ಹೇಳಿ. ಇದಕ್ಕೆ ನಮಗೇನಾದರೂ ಕಮಿಷನ್ ಸಿಕ್ಕಿತೇ ? ಪರ್ಸೆಂಟೇಜ್ ಪಡೆದೆವೋ' ಎಂದು ಪ್ರಶ್ನಿಸಿದರು.

'ಕೇಂದ್ರ-ರಾಜ್ಯದ ಡಬಲ್ ಎಂಜಿನ್ ಸರ್ಕಾರ ನುಡಿದಂತೆ ನಡೆದಿದೆಯೇ ಎಂಬುದನ್ನು ಅರಿಯಲು ಈ ಯಾತ್ರೆ ಹಮ್ಮಿಕೊಂಡಿದ್ದೇವೆ. ಜನರು ತಮ್ಮ ನೋವು ಹಂಚಿಕೊಂಡಿದ್ದಾರೆ. ಎಲ್ಲಿ ಹೋದರೂ ಹೆಚ್ಚು ಜನ ಸೇರುತ್ತಿದ್ದಾರೆ. ಹಾಸನದಲ್ಲಿ ಒಬ್ಬ ಶಾಸಕ ಇಲ್ಲ. ಒಂದು ಲಕ್ಷಕ್ಕೂ ಅಧಿಕ ಜನ ಸೇರಿದ್ದರು. ಅಧಿಕಾರ ಇದ್ದಾಗ ಜನರಿಗೆ ಏನು ಮಾಡುತ್ತೇವೆ ಎಂಬುದು‌ ಮುಖ್ಯ' ಎಂದು ಹೇಳಿದರು.

'ಕೋಲಾರದವರು ಬಹಳ ಶ್ರಮಜೀವಿಗಳು. ಬೆಂಗಳೂರಿಗೆ ಹಾಲು, ತರಕಾರಿ, ರೇಷ್ಮೆ ಹಾಗೂ ದೇಶಕ್ಕೆ ಚಿನ್ನ‌ ಕೊಟ್ಟವರು. ಹಿರಿಯರ ಹೋರಾಟ, ತ್ಯಾಗವನ್ನು ಮರೆಯುವಂತಿಲ್ಲ. ಹಲವರು ಬೆಂಗಳೂರಿಗೆ ಕೆಲಸಕ್ಕೆ ಬಂದು ಹೋಗುತ್ತಾರೆ' ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

'ಬಿಜೆಪಿ ಸರ್ಕಾರ 600 ಭರವಸೆ ಕೊಟ್ಟಿತ್ತು. ಆದರೆ, 550 ಭರವಸೆ ಈಡೇರಿಸಲು ಇನ್ನೂ ಸಾಧ್ಯವಾಗಿಲ್ಲ. ಈ ಸಂಬಂಧ ನಮ್ಮ ಪ್ರಶ್ನೆಗೆ ಅವರು ಉತ್ತರಿಸುತ್ತಿಲ್ಲ. 169 ಭರವಸೆಗಳಲ್ಲಿ ಸಿದ್ದರಾಮಯ್ಯ ಸರ್ಕಾರ 165 ಭರವಸೆ ಈಡೇರಿಸಿತ್ತು. ಜೆಡಿಎಸ್ ಎತ್ತಿನಹೊಳೆ ಗೆ ವಿರೋಧ ವ್ಯಕ್ತವಾಯಿತು. ಇದಕ್ಕೆ ಜನರೇ ಉತ್ತರಕೊಡಬೇಕು. ಇದನ್ನೆಲ್ಲಾ ತಿಳಿಸಲು ನಾವು ಪ್ರಜಾಧ್ವನಿ‌ ಯಾತ್ರೆ ಹಮ್ಮಿಕೊಂಡಿದ್ದೇವೆ' ಎಂದು ಹೇಳಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು