ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡಿ ನಾಡಿನ ಸಂಗೀತ ದಾಸೋಹಿ ಕೆ. ನರಸಿಂಹಮೂರ್ತಿ

ಸಂಗೀತ ಶಿಕ್ಷಕನ ಸಾಧನೆಗೆ ಶ್ಲಾಘನೆ
Last Updated 13 ಜನವರಿ 2023, 5:42 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ಮಾವಿನ ಪಟ್ಟಣವೆಂದು ಹೆಸರಾಗಿರುವ ಶ್ರೀನಿವಾಸಪುರದಲ್ಲಿ ಗಾಯಕ ಹಾಗೂ ಸಂಗೀತ ಶಿಕ್ಷಕ ಕೆ. ನರಸಿಂಹಮೂರ್ತಿ ಆಸಕ್ತರಿಗೆ ಸಂಗೀತ ದಾಸೋಹದ ಮೂಲಕ ಸಂಗೀತ ಪ್ರಿಯರ ಮನ ಸೆಳೆದಿದ್ದಾರೆ.

ನರಸಿಂಹಮೂರ್ತಿ ಬಹುಮುಖ ಪ್ರತಿಭೆಯ ಕಲಾವಿದ. ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ ಹಾಗೂ ವಾದ್ಯ ಸಂಗೀತದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಭೈರವೇಶ್ವರ ವಿದ್ಯಾನಿಕೇತನದಲ್ಲಿ ಎರಡು ದಶಕಗಳಿಂದ ಸಂಗೀತ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿರುವ ಅವರು, ಗಡಿ ಭಾಗದ ಮಕ್ಕಳಿಗೆ ಸಂಗೀತ ಪಾಠ ಹೇಳಿಕೊಡುತ್ತಿದ್ದಾರೆ. ಶಾಲೆಯ ಹೊರಗೂ ಸಂಗೀತಾಸಕ್ತರಿಗೆ ಸಂಗೀತ ಹಾಗೂ ವಾದ್ಯ ತರಬೇತಿ ನೀಡುತ್ತಿದ್ದಾರೆ.

ಅಷ್ಟು ಮಾತ್ರವಲ್ಲದೆ ಕೆಲವು ಕಿರುಚಿತ್ರಗಳಿಗೆ ಅವರು ಸಂಗೀತ ನೀಡಿದ್ದಾರೆ. ಲಿರಿಕಲ್ ಗೀತೆಗಳನ್ನೂ ಹಾಡಿದ್ದಾರೆ. ನಾಟಕ ಹಾಗೂ ಅಭಿನಯ ಗೀತೆಗಳಿಗೆ ನಿರ್ದೇಶನ ಮಾಡಿದ್ದಾರೆ. ತಮ್ಮ ಸಂಗೀತ ಪಯಣದಲ್ಲಿ ಜಿಲ್ಲಾ ಹಾಗೂ ರಾಜ್ಯ ಮಟ್ಟದ ಸಂಗೀತ ಕಾರ್ಯಕ್ರಮಗಳಲ್ಲಿ ಹಾಡಿದ್ದಾರೆ. ದಾಸರ ಆರಾಧನಾ ಸಂಗೀತೋತ್ಸವಗಳಲ್ಲಿ ಹಾಡಿ ಸಂಗೀತ ಪ್ರಿಯರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ನರಸಿಂಹಮೂರ್ತಿ ಅವರ ತಾಯಿ ನಾರಾಯಣಮ್ಮ ಜನಪದ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡುತ್ತಿದ್ದರು. ಚಿಕ್ಕಪ್ಪ ವೆಂಕಟಪ್ಪ ಗ್ರಾಮೀಣ ಪ್ರದೇಶದಲ್ಲಿ ನಾಟಕ ನಿರ್ದೇಶಕರಾಗಿ ಹೆಸರು ಮಾಡಿದ್ದರು. ಇನ್ನೊಬ್ಬ ಚಿಕ್ಕಪ್ಪ ವೆಂಕಟಸ್ವಾಮಿ ತಬಲ ಕಲಾವಿದರಾಗಿದ್ದರು. ಅಂತಹ ಪರಿಸರದಲ್ಲಿ ಬೆಳೆದ ಅವರಿಗೆ ಸಹಜವಾಗಿಯೇ ಸಂಗೀತದಲ್ಲಿ ಆಸಕ್ತಿ ಮೂಡಿತು.

ತಾವೂ ಕಲಾವಿದನಾಗಲು ನಿರ್ಧರಿಸಿ ಬೆಂಗಳೂರಿನ ಆದರ್ಶ ಫಿಲಂ ಇನ್‌ಸ್ಟಿಟ್ಯೂಟ್ ಸೇರಿದರು. ಅಲ್ಲಿ ‘ಎ’ ಗ್ರೇಡ್‌ನಲ್ಲಿ ಉತ್ತೀರ್ಣರಾದರು. ಸಂಗೀತ ವಿದ್ವಾನ್ ಬಾಲಸುಬ್ರಮಣ್ಯಂ ಅವರ ಬಳಿ ಮೂರು ವರ್ಷ ಕಾಲ ಶಾಸ್ತ್ರೀಯ ಸಂಗೀತದ ಅಭ್ಯಾಸ ಮಾಡಿದರು. ತಬಲಾ ಕಲಾವಿದ ವಿಶ್ವನಾಥ್ ನಾಕೋಡ್ ಬಳಿ ಎರಡು ವರ್ಷಗಳ ಕಾಲ ಹಿಂದೂಸ್ತಾನಿ ತಬಲ ವಾದನ ಅಭ್ಯಾಸ ಮಾಡಿದರು. ಬೆಂಗಳೂರಿನ ಕೆಲವು ಆಡಿಯೊ ಕಂಪನಿಗಳು ತಯಾರಿಸಿದ ಕ್ಯಾಸೆಟ್‌ಗಳಿಗೆ ಕೆಲವು ಗೀತೆಗಳನ್ನು ಹಾಡಿದ್ದಾರೆ.

ಡಾ.ರಾಜ್‌ಕುಮಾರ್, ಗೋಟೂರಿ, ಎಸ್.ಪಿ. ಬಾಲಸುಬ್ರಮಣ್ಯಂ, ಮಂಜುಳಾ ಗುರುರಾಜ್ ಅವರ ಹಾಡಿದ ಕೆಲವು ಗೀತೆಗಳಿಗೆ ವೃಂದ ಗಾಯಕರಲ್ಲಿ ಒಬ್ಬರಾಗಿ ಧ್ವನಿಗೂಡಿಸಿದ್ದನ್ನು ಖುಷಿಯಿಂದ ನೆನಪು ಮಾಡಿಕೊಳ್ಳುವ ಅವರು ಶಾಲಾ, ಕಾಲೇಜು ದಿನಗಳಲ್ಲಿ ಹಾಡಲು ಅವಕಾಶ ನೀಡುವುದರ ಮೂಲಕ ಶಿಕ್ಷಕರು ನೀಡಿದ ಪ್ರೋತ್ಸಾಹವನ್ನು ಮರೆತಿಲ್ಲ.

‘ಸಂಗೀತ ಕಲಾವಿದನಾಗಿ ರೂಪುಗೊಳ್ಳಲು ತಂದೆ ಕೆ. ಕೋನಪ್ಪ, ತಾಯಿ ನಾರಾಯಣಮ್ಮ, ಕುಟುಂಬದ ಸದಸ್ಯರು ಹಾಗೂ ತಾವು ಸೇವೆ ಸಲ್ಲಿಸುತ್ತಿರುವ ಶಿಕ್ಷಣ ಸಂಸ್ಥೆ ನೀಡಿದ ಪ್ರೊತ್ಸಾಹ ಹಾಗೂ ಸಹಕಾರ ಮರೆಯಲಾಗದು’ ಎನ್ನುತ್ತಾರೆ
ಅವರು.

ನರಸಿಂಹಮೂರ್ತಿ ಅವರ ಸಂಗೀತ ಸೇವೆ ಗುರುತಿಸಿ ಕರ್ನಾಟಕ ರಕ್ಷಣಾ ವೇದಿಕೆಯು ‘ಗುರು ಶ್ರೇಷ್ಠ, ಅನಿಕೇತನ ಪ್ರತಿಷ್ಠಾನವು ‘ಗಡಿನಾಡ ಪ್ರತಿಭೆ’ ಪ್ರಶಸ್ತಿ ನೀಡಿ ಗೌರವಿಸಿವೆ. ಹಲವು ಸಂಘ, ಸಂಸ್ಥೆಗಳು ಗೌರವಿಸಿವೆ.

‘ಸಂಗೀತದಿಂದ ಸಂಸ್ಕಾರ ಪ್ರಾಪ್ತವಾಗುತ್ತದೆ. ಏಕಾಗ್ರತೆ ಮೂಡುತ್ತದೆ. ಭೇದ ಭಾವ ಅಳಿಸುವ ಶಕ್ತಿ ಸಂಗೀತಕ್ಕಿದೆ. ಹಾಗಾಗಿ, ಬದಲಾದ ಪರಿಸ್ಥಿತಿಯಲ್ಲಿ ಮಕ್ಕಳಲ್ಲಿ ಸಂಗೀತಾಸಕ್ತಿ ಬೆಳೆಸಬೇಕಾಗಿದೆ’ ಎಂಬುದು ಅವರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT