ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಧಿಕೃತ ಕ್ಲಿನಿಕ್‌: ಜೈಲಿಗೆ ಕಳುಹಿಸುತ್ತೇವೆ

ನಕಲಿ ವೈದ್ಯರಿಗೆ ಜಿಲ್ಲಾಧಿಕಾರಿ ಮಂಜುನಾಥ್‌ ಖಡಕ್‌ ಎಚ್ಚರಿಕೆ
Last Updated 23 ಜನವರಿ 2019, 12:36 IST
ಅಕ್ಷರ ಗಾತ್ರ

ಕೋಲಾರ: ‘ಕರ್ನಾಟಕ ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಕಾಯ್ದೆ (ಕೆಪಿಎಂಇ) ಉಲ್ಲಂಘಿಸಿ ಅನಧಿಕೃತವಾಗಿ ಕ್ಲಿನಿಕ್‌ ನಡೆಸಿದರೆ ಯಾವುದೇ ಮುಲಾಜಿಲ್ಲದೆ ಕ್ರಿಮಿನಲ್ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸುತ್ತೇವೆ’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ನಕಲಿ ಕ್ಲಿನಿಕ್ ವೈದ್ಯರಿಗೆ ಖಡಕ್‌ ಎಚ್ಚರಿಕೆ ನೀಡಿದರು.

ಇಲ್ಲಿ ಬುಧವಾರ ಕೆಪಿಎಂಇ ಪ್ರಕರಣಗಳ ವಿಚಾರಣೆ ನಡೆಸಿ ಮಾತನಾಡಿ, ‘ಈಗಾಗಲೇ ಆರೋಗ್ಯ ಇಲಾಖೆ ಅಧಿಕಾರಿಗಳು ಜಿಲ್ಲೆಯಾದ್ಯಂತ ಕಾರ್ಯಾಚರಣೆ ನಡೆಸಿ 169 ನಕಲಿ ಕ್ಲಿನಿಕ್‌ಗಳಿಗೆ ಬೀಗಮುದ್ರೆ ಹಾಕಿದ್ದಾರೆ. ಮತ್ತೆ ಬೇರೆಡೆ ನಕಲಿ ಕ್ಲಿನಿಕ್‌ ತೆರೆದರೆ ಆ ವೈದ್ಯರನ್ನು ಸುಮ್ಮನೆ ಬಿಡುವುದಿಲ್ಲ’ ಎಂದರು.

‘ಬಂದ್‌ ಮಾಡಿಸಿರುವ ನಕಲಿ ಕ್ಲಿನಿಕ್‌ಗಳ ವೈದ್ಯರ ಪೈಕಿ ಯಾರೂ ಕೆಪಿಎಂಇ ಕಾಯ್ದೆ ಪಾಲಿಸುತ್ತಿಲ್ಲ. ಇವರೆಲ್ಲಾ ಅಸ್ಸಾಂ, ಬಿಹಾರ, ಲಕ್ನೋ, ಪಶ್ಚಿಮ ಬಂಗಾಳದಲ್ಲಿ ಪ್ರಮಾಣಪತ್ರ ತಂದು ಕ್ಲಿನಿಕ್‌ಗೆ ಅನುಮತಿ ಪಡೆಯಲು ಅರ್ಹತೆ ಹೊಂದಿದ್ದೇವೆ ಎಂದು ಮನವಿ ಮಾಡಿದ್ದಾರೆ. ಆದರೆ, ಪ್ರಮಾಣಪತ್ರಗಳು ಕರ್ನಾಟಕ ರಾಜ್ಯಕ್ಕೆ ಅನ್ವಯವಾಗುವುದಿಲ್ಲ. ಕಾಯ್ದೆ ಪ್ರಕಾರ ಅವು ಅನಧಿಕೃತ’ ಎಂದು ಸ್ಪಷ್ಟಪಡಿಸಿದರು.

ಇತ್ತೀಚೆಗೆ ಸಮಸ್ಯೆ: ‘ನಾವು ಹಲವು ವರ್ಷಗಳಿಂದ ಕ್ಲಿನಿಕ್ ನಡೆಸಿಕೊಂಡು ಜೀವನ ನಡೆಸುತ್ತಿದ್ದೇವೆ. 2014ರವರೆಗೆ ಯಾವುದೇ ಕಾಯ್ದೆಯ ತೊಂದರೆ ಇರಲಿಲ್ಲ. ಇತ್ತೀಚೆಗೆ ಈ ಸಮಸ್ಯೆ ಎದುರಾಗಿದೆ. ಸರ್ಕಾರದ ಮಾನ್ಯತೆ ಪ್ರಮಾಣಪತ್ರವಿದೆ. ಕ್ಲಿನಿಕ್ ನಡೆಸಲು ಅನುಮತಿ ನೀಡಿ’ ಎಂದು ನಕಲಿ ವೈದ್ಯ ಅಣ್ಣಯ್ಯ ಕೋರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ‘ನೀವು ಹೊರ ರಾಜ್ಯಗಳಿಂದ ಪಡೆದುಕೊಂಡು ಬಂದ ಪ್ರಮಾಣಪತ್ರವನ್ನು ಇಲ್ಲಿ ಮಾನ್ಯ ಮಾಡುವುದಿಲ್ಲ. ಕರ್ನಾಟಕ ವೈದ್ಯಕೀಯ ಮಂಡಳಿ (ಕೆಎಂಸಿ) ಮತ್ತು ಆಯುರ್ವೇದ ಅಲೋಪತಿ ಮಂಡಳಿ ನಿರ್ದೇಶಕದಿಂದ ಅನುಮತಿ ಪಡೆದುಕೊಂಡು ಬನ್ನಿ ಅವಕಾಶ ನೀಡುತ್ತೇವೆ’ ಎಂದು ತಿಳಿಸಿದರು.

‘ಅಧಿಕಾರಿಗಳು 2011ರಿಂದಲೂ ವೈದ್ಯರಿಗೆ ನೋಟಿಸ್‌ ನೀಡಿದ್ದಾರೆ. ಆದರೆ, ವೈದ್ಯರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಪಾರಂಪರಿಕವಾಗಿ ವೈದ್ಯಕೀಯ ವೃತ್ತಿ ನಡೆಸಿಕೊಂಡು ಬರಲಾಗಿದ್ದು, ಅನುಮತಿಗಾಗಿ ಆನ್‌ಲೈನ್‌ ಮೂಲಕ ಅರ್ಜಿ ಹಾಕಿಕೊಂಡಿದ್ದಾರೆ. ಈಗ 8 ಅರ್ಜಿಗಳ ವಿಚಾರಣೆ ನಡೆಸಿ ವಿಲೇವಾರಿ ಮಾಡಲಾಗುತ್ತಿದೆ. ಇಲ್ಲಿ ಅನುಮತಿ ಕೊಡಲು ಅವಕಾಶವಿಲ್ಲವೆಂದು ಹಿಂಬರಹ ನೀಡುತ್ತೇವೆ. ಕೆಎಂಸಿ ಮತ್ತು ಆಯುರ್ವೇದ ಮಂಡಳಿಗೆ ಅರ್ಜಿ ಹಾಕಿಕೊಳ್ಳಿ’ ಎಂದು ಸಲಹೆ ನೀಡಿದರು.

ಕಾನೂನು ಒಂದೇ: ‘ಕ್ಲಿನಿಕ್‌ ಆರಂಭಕ್ಕೆ ನಾನು ಅರ್ಜಿ ಹಾಕಿ ಸುಮಾರು ದಿನಗಳು ಕಳೆದಿವೆ. ಬೇರೆ ರಾಜ್ಯಗಳಲ್ಲಿ ಎಲ್ಲರೂ ಕ್ಲಿನಿಕ್‌ ನಡೆಸುತ್ತಿದ್ದಾರೆ. ನಮಗೂ ಅವಕಾಶ ಕೊಡಿ’ ಎಂದು ವೈದ್ಯ ಮಂಜುನಾಥ್ ಮನವಿ ಮಾಡಿದರು.

ಆಗ ಜಿಲ್ಲಾಧಿಕಾರಿ, ‘ನಕಲಿ ಕ್ಲಿನಿಕ್‌ಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರ ಕೆಪಿಎಂಇ ಕಾಯ್ದೆಗೆ ತಿದ್ದುಪಡಿ ತಂದಿದೆ. ಕಾನೂನು ಎಲ್ಲರಿಗೂ ಒಂದೇ. ಸಮರ್ಪಕ ದಾಖಲೆಪತ್ರ ಸಲ್ಲಿಸಿದರೆ ಅವಕಾಶ ನೀಡುತ್ತೇವೆ. ನಿಮ್ಮ ವೈಯಕ್ತಿಕ ವಿಚಾರಕ್ಕೂ ಇದಕ್ಕೂ ಸಂಬಂಧವಿಲ್ಲ. ಜೀವನ ನಡೆಸಲು ಅನೇಕ ಮಾರ್ಗಗಳಿವೆ’ ಎಂದು ಹೇಳಿದರು.

‘ಜನರಿಗೆ ಒಳ್ಳೆಯದು ಮಾಡಲು ಅನಧಿಕೃತ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಬಾರದು. ಜನಸಂಖ್ಯೆಗೆ ಅನುಗುಣವಾಗಿ ವೈದ್ಯರ ಕೊರತೆಯಿದೆ. ಅಧಿಕೃತವಾಗಿ ಕ್ಲಿನಿಕ್ ನಡೆಸಲು ಕೆಪಿಎಂಇ ಕಾಯ್ದೆಯಡಿ ಅರ್ಹರಿರುವವರಿಗೆ ಮಾತ್ರ ಅನುಮತಿ ನೀಡುತ್ತೇವೆ’ ಎಂದು ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್‌.ಎನ್‌.ವಿಜಯ್‌ಕುಮಾರ್, ತಾಯಿ ಮತ್ತು ಮಕ್ಕಳ ಆರೋಗ್ಯ ಯೋಜನಾಧಿಕಾರಿ (ಆರ್‌ಸಿಎಚ್‌) ಡಾ.ಚಂದನ್‌, ಕುಟುಂಬ ಕಲ್ಯಾಣಾಧಿಕಾರಿ ಡಾ.ಭಾರತಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT