ಶನಿವಾರ, ಜನವರಿ 23, 2021
21 °C
ಗೌರಿಬಿದನೂರು ಶಾಖೆ ಜಿಲ್ಲೆಗೆ ಮಾದರಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಗೋವಿಂದಗೌಡ

ಉದ್ಯಮಶೀಲತೆಗೆ ಕಾಯಕ ಯೋಜನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಇ- ಶಕ್ತಿ ಮಹಿಳಾ ಶಕ್ತಿಯಾದರೆ, ಕಾಯಕ ಯೋಜನೆ ಅವರನ್ನು ಸ್ವಾವಲಂಬಿ ಉದ್ಯಮಶೀಲರನ್ನಾಗಿ ಮಾಡುತ್ತದೆ ಎಂದು ಕೋಲಾರ, ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದರು.

ಜಿಲ್ಲಾ ಸಹಕಾರಿ ಯೂನಿಯನ್ ಸಭಾಂಗಣದಲ್ಲಿ ಭಾನುವಾರ ಕೋಲಾರ, ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕಿನ ಶಾಖಾ ವ್ಯವಸ್ಥಾಪಕರು, ಮೇಲ್ವಿಚಾರಕರು, ಇ-ಶಕ್ತಿ ಅನುಷ್ಠಾನಕ್ಕಾಗಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳ ಸಭೆಯಲ್ಲಿ ಮಾತನಾಡಿದರು.

ಇ-ಶಕ್ತಿಯಿಂದ ವಹಿವಾಟಿನಲ್ಲಿ ಭ್ರಷ್ಟತೆ ತೊಡೆದು ಹಾಕಿ ಪಾರದರ್ಶಕತೆಗೆ ಕಾರಣವಾಗುವುದರಿಂದ ಮಹಿಳೆಯರ ನಂಬಿಕೆ ಬಲಗೊಳ್ಳುತ್ತದೆ. ಎರಡು ದಿನದೊಳಗೆ ನಬಾರ್ಡ್ ಸೂಚಿಸಿರುವ ಎಲ್ಲ 7ಸಾವಿರ ಮಹಿಳಾ ಸಂಘಗಳ ಮಾಹಿತಿ ಅಪ್‍ಲೋಡ್ ಮಾಡಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ಇ-ಶಕ್ತಿ ಹೊಣೆ ಹೊತ್ತ ಸಿಬ್ಬಂದಿ ತಮಗೆ ನೀಡಿರುವ ಗುರಿ ಸಾಧಿಸದಿರುವ ಕುರಿತು ಆಕ್ರೋಶ ವ್ಯಕ್ತಪಡಿಸಿದರು.

ಜ. 26ಕ್ಕೆ ಶೇ 100 ಗಣಕೀಕರಣ ಮಾಡಿ: ಸೊಸೈಟಿಗಳು ಶೇ 90 ರಷ್ಟು ಗಣಕೀಕರಣವಾಗಿದೆ. ವಹಿವಾಟು ಕೇವಲ 60ರಷ್ಟು ಮಾತ್ರ ಮಾಡುತ್ತಿದ್ದಾರೆ. ಆದ್ದರಿಂದ ಜ.26 ರೊಳಗೆ ಶೇ100 ಗಣಕೀಕರಣ ಮತ್ತು ಆನ್‍ಲೈನ್ ವಹಿವಾಟು ನಡೆಯಬೇಕು ಎಂದು ಸೂಚಿಸಿದರು.

ಕಾಯಕ ಯೋಜನೆ: ಕಾಯಕ ಯೋಜನೆಯಡಿ ಮಹಿಳಾ ಸಂಘಗಳಿಗೆ ₹5 ಲಕ್ಷ ಬಡ್ಡಿರಹಿತ ಸಾಲ ಮತ್ತು ಬಡ್ಡಿಯ ₹5 ಲಕ್ಷ ಸಾಲ ಭದ್ರತೆ ಇಲ್ಲದೇ ಸಿಗುತ್ತದೆ. ಹೈನುಗಾರಿಕೆ, ಮಿನಿಡೇರಿ ಆರಂಭಿಸಿ ಉದ್ಯಮಶೀಲರಾದರೆ ಅವರ ಬದುಕನ್ನು ಯೋಜನೆ ಕಾಯುತ್ತದೆ ಎಂದರು.

ಬ್ಯಾಂಕ್ ಎಲ್ಲ ವಿಷಯಗಳಲ್ಲೂ ಸಾಧನೆ ಮಾಡಿದೆ. ಆದರೆ ಠೇವಣಿ ಸಂಗ್ರಹದಲ್ಲಿ ಹಿಂದುಳಿದಿದೆ. ಮಾರ್ಚ್ ವೇಳೆಗೆ ₹700 ಕೋಟಿ ಸಂಗ್ರಹದ ಗುರಿ ಸಾಧನೆಗೆ ಶ್ರಮಿಸಿ ಎಂದರು.

ಗೌರಿಬಿದನೂರು ಶಾಖೆ ಜಿಲ್ಲೆಗೆ ಮಾದರಿಯಾಗಿದೆ. ಅವರಂತೆ ಅಂದಿನ ವಹಿವಾಟು ಅಂದೇ ಆನ್‍ಲೈನ್‍ಗೆ ದಾಖಲಿಸುವ ಮೂಲಕ ಕೆಲಸದಲ್ಲಿ ಶಿಸ್ತು ಬೆಳೆಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.

ಸುಸ್ತಿ ಸಾಲಗಳ ವಸೂಲಾತಿ ಬಗ್ಗೆ ವಿಮರ್ಶೆ, ಠೇವಣಿ ಸಂಗ್ರಹ ಪ್ರಗತಿ ಪರೀಶೀಲನೆ, ಇ-ಶಕ್ತಿ ಯೋಜನೆ ಪ್ರಗತಿ, ಸ್ವಸಹಾಯ ಸಂಘಗಳು, ಕೆಸಿಸಿ, ಮಧ್ಯಮಾವಧಿ ಸಾಲಗಳ ಬಡ್ಡಿ ಸಹಾಯಧನ ಕ್ಲೈಮ್ ಬಿಲ್ಲುಗಳ ಕುರಿತು ಮತ್ತು ಸಹಕಾರ ಸಂಘಗಳ ಗಣಕೀಕರಣ ಪ್ರಗತಿ ಕುರಿತು ಚರ್ಚಿಸಲಾಯಿತು.

ಸಭೆಯಲ್ಲಿ ಬ್ಯಾಂಕ್ ನಿರ್ದೇಶಕ ನಾಗನಾಳ ಸೋಮಣ್ಣ, ಕೆ.ವಿ.ದಯಾನಂದ್, ಯಲವಾರ ಸೊಣ್ಣೇಗೌಡ, ಎಂಡಿ ರವಿ, ಎಜಿಎಂ ಬೈರೇಗೌಡ, ಖಲೀಮುಲ್ಲಾ, ಹುಸೇನ್‍ಸಾಬ್ ದೊಡ್ಡಮನಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.