ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಯಾಕೇಜ್ ಅನುದಾನ ಶೀಘ್ರ ತಲುಪಿಸಿ

Last Updated 19 ಮೇ 2021, 15:10 IST
ಅಕ್ಷರ ಗಾತ್ರ

ಕೋಲಾರ: ರಾಜ್ಯ ಸರ್ಕಾರವು ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಅಸಂಘಟಿತ ಕಾರ್ಮಿಕರು ಮತ್ತು ರೈತರಿಗೆ ಘೋಷಿಸಿರುವ ವಿಶೇಷ ಪ್ಯಾಕೇಜ್ ಅನುದಾನವನ್ನು ಶೀಘ್ರವೇ ಫಲಾನುಭವಿಗಳಿಗೆ ತಲುಪಿಸಬೇಕು ಎಂದು ರೈತ ಸಂಘ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಎ.ನಳಿನಿಗೌಡ ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

ಅಸಂಘಟಿತ ಕಾರ್ಮಿಕರು ಹಾಗೂ ರೈತರಿಗೆ ವಿಶೇಷ ಪ್ಯಾಕೇಜ್ ಘೋಷಿಸಿರುವುದು ಸ್ವಾಗತಾರ್ಹ. ಆದರೆ, ಕೋವಿಡ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ ರೇಷ್ಮೆ ಬೆಳೆಗಾರರನ್ನು ಸರ್ಕಾರ ಮರೆತಿದೆ. ಲಾಕ್‌ಡೌನ್‌ನಿಂದ ರೇಷ್ಮೆಗೂಡಿನ ಬೆಲೆ ಕುಸಿದಿದ್ದು, ಪ್ರತಿ ಕೆ.ಜಿ ಗೂಡಿಗೆ ₹ 40 ನೆರವು ಘೋಷಣೆ ಮಾಡಬೇಕು ಎಂದು ಕೋರಿದ್ದಾರೆ.

ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗದೆ ರೈತರು ಬೆಳೆಗಳನ್ನು ರಸ್ತೆಗೆ ಸುರಿಯುತ್ತಿರುವುದನ್ನು ಗಮನಿಸಿ ಸರ್ಕಾರ ನೆರವಿಗೆ ಬಂದಿರುವುದರಿಂದ ರೈತರಿಗೆ ಕೊಂಚ ನೆಮ್ಮದಿ ತಂದಿದೆ. ಆದರೆ, ಪ್ರತಿ ಹೆಕ್ಟೇರ್ ಬೆಳೆಗೆ ₹ 10 ಸಾವಿರ ಘೋಷಿಸಿರುವುದು ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ. ಹಿಂದಿನ ವರ್ಷ ಲಾಕ್‌ಡೌನ್‌ ಸಂದರ್ಭದಲ್ಲಿ ಘೋಷಿಸಿದ ಹಣಕಾಸು ನೆರವು ಇನ್ನೂ ರೈತರ ಖಾತೆಗೆ ಸೇರಿಲ್ಲ ಎಂದು ಹೇಳಿದ್ದಾರೆ.

ಕೊರೊನಾ ಸೋಂಕಿನ ನಿಯಂತ್ರಣದ ಜತೆಗೆ ರೈತರ ರಕ್ಷಣೆಗೆ ಪ್ಯಾಕೇಜ್ ಘೋಷಿಸಿರುವುದಕ್ಕೆ ಅಭ್ಯಂತರವಿಲ್ಲ. ಆದರೆ, ರೇಷ್ಮೆ ಬೆಳೆಗಾರರ ಹಿತ ಕಡೆಗಣಿಸಿರುವುದು ಖಂಡನೀಯ. ರಾಜ್ಯದಲ್ಲಿ ರೇಷ್ಮೆ ಕೃಷಿ ನಂಬಿ ಲಕ್ಷಾಂತರ ರೈತ ಕುಟುಂಬಗಳು ಬದುಕು ಸಾಗಿಸುತ್ತಿವೆ. ಗೂಡಿನ ಧಾರಣೆ ಕುಸಿದಿರುವುದರಿಂದ ಈ ಕುಟುಂಬಗಳಿಗೆ ದಿಕ್ಕು ತೋಚದಂತಾಗಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT