ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಜಿಎಫ್‌: ಗೃಹರಕ್ಷಕ ದಳದ ಕಮಾಂಡೆಂಟ್ ಕಚೇರಿ ಪುನರಾರಂಭಕ್ಕೆ ಆಗ್ರಹ

ಕೃಷ್ಣಮೂರ್ತಿ
Published 3 ಜನವರಿ 2024, 6:28 IST
Last Updated 3 ಜನವರಿ 2024, 6:28 IST
ಅಕ್ಷರ ಗಾತ್ರ

ಕೆಜಿಎಫ್‌: ಹಲವು ದಶಕಗಳ ಕಾಲ ಸಾರ್ವಜನಿಕ ಸೇವೆ ಮತ್ತು ಉದ್ಯೋಗಕ್ಕೆ ಆಸರೆಯಾಗಿದ್ದ ಗೃಹರಕ್ಷಕ ದಳದ ಕಮಾಂಡೆಂಟ್ ಕಚೇರಿಯನ್ನು ನಗರದಲ್ಲಿ ಪುನರಾರಂಭಕ್ಕೆ ಬೇಡಿಕೆ ಎದ್ದಿದೆ.

ದೇಶದಲ್ಲಿಯೇ ಅತ್ಯುತ್ತಮ ಗೃಹರಕ್ಷಕ ದಳ ಎಂಬ ಖ್ಯಾತಿ ಮತ್ತು ಪ್ರಶಸ್ತಿಗೆ ಪಾತ್ರವಾಗಿದ್ದ ಗೃಹರಕ್ಷಕದ ದಳದ ಕಮಾಂಡೆಂಟ್ ಕಚೇರಿಯನ್ನು ಕೋಲಾರ ಜಿಲ್ಲೆಯೊಡನೆ ವಿಲೀನಗೊಳಿಸಿ ಸುಮಾರು 14 ವರ್ಷಗಳಾಗಿವೆ. ಈಗ ಆರ್ಥಿಕ ಮತ್ತು ಸಾಮಾಜಿಕ ಬೆಳವಣಿಗೆಯ ದೃಷ್ಟಿಯಿಂದ ಕಚೇರಿಯನ್ನು ಪುನರ್ ಆರಂಭಿಸಬೇಕು ಎಂಬ ಒತ್ತಾಯ ಬಂದಿದೆ.

ಊರಿಗಾಂನಲ್ಲಿದ್ದ ಗೃಹರಕ್ಷಕ ದಳದ ಕಮಾಂಡೆಂಟ್ ಕಚೇರಿಯನ್ನು 2009ರಲ್ಲಿ ಕೋಲಾರ ಜಿಲ್ಲೆಯೊಡನೆ ವಿಲೀನಗೊಳಿಸಲಾಯಿತು. ವಿಲೀನದ ಸಮಯದಲ್ಲಿ ಸುಮಾರು 1,200 ಗೃಹರಕ್ಷಕದ ದಳದವರು ನಗರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಬಿಜಿಎಂಎಲ್‌ ಮುಚ್ಚಿದ ನಂತರ ನಿರುದ್ಯೋಗದಲ್ಲಿದ್ದ ಕಾರ್ಮಿಕರು ಗೃಹರಕ್ಷಕದಳಕ್ಕೆ ಸೇರುವಲ್ಲಿ ಆಸಕ್ತಿ ವಹಿಸಿದರು. ಇದೇ ರೀತಿಯಲ್ಲಿ ನಿರುದ್ಯೋಗಿ ಮಹಿಳೆಯರು ಕೂಡ ಮಹಿಳಾ ಘಟಕದ ಪ್ರಾರಂಭಕ್ಕೆ ಕಾರಣರಾದರು. ಸರ್ಕಾರದ ಆರ್ಥಿಕ ವೆಚ್ಚ ಕಡಿಮೆ ಮಾಡುವ ದೃಷ್ಟಿಯಿಂದ ದಳದ ಕಚೇರಿಯನ್ನು ವಿಲೀನಗೊಳಿಸಿದ ಮೇಲೆ ಕೆಜಿಎಫ್ ಪೊಲೀಸ್ ಜಿಲ್ಲೆಯಲ್ಲಿ ಕೇವಲ 467 ಗೃಹ ರಕ್ಷಕದಳದವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಗೃಹರಕ್ಷಕ ದಳಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನು ಕೋಲಾರದಲ್ಲಿ ಪಡೆಯಬೇಕಾಗಿರುವುದರಿಂದ ದಿನೇ ದಿನೇ ದಳಕ್ಕೆ ಸೇರುವವರ ಸಂಖ್ಯೆ ಕಡಿಮೆಯಾಗುತ್ತಿದೆ.

ಮಾಜಿ ಮುಖ್ಯಮಂತ್ರಿ ಕೆಂಗಲ್‌ ಹನುಮಂತಯ್ಯ ಅವರ ಅಳಿಯ ಡಾ.ತಿಮ್ಮಯ್ಯ ಕೆಜಿಎಫ್ ಗೃಹ ರಕ್ಷಕದ ದಳದ ಮೊದಲ ಕಮಾಂಡೆಂಟ್ ಆಗಿದ್ದರು. ನಂತರ ಪ್ರಸಿದ್ದ ವೈದ್ಯ ಡಾ.ಪುಣ್ಯಮೂರ್ತಿ ಕೆಲ ವರ್ಷಗಳ ಕಾಲ ಇದ್ದರು. ನಂತರ ಲಯನ್ ನಂದ ಸುಮಾರು ಮೂರು ದಶಕಗಳ ಕಾಲ ಹುದ್ದೆ ನಿರ್ವಹಿಸಿದರು. ನಂತರ ಎನ್‌.ಆರ್‌.ಪುರುಷೋತ್ತಮ ಕಮಾಂಡೆಂಟ್ ಆಗಿ ಉತ್ತಮ ಕೆಲಸ ನಿರ್ವಹಿಸಿದ್ದರು. ಇವರ ಪೈಕಿ ನಂದ ಮತ್ತು ಪುರುಷೋತ್ತಮ ರಾಷ್ಟ್ರಪ್ರಶಸ್ತಿ ಪುರಸ್ಕಾರ ಕೂಡ ಪಡೆದಿದ್ದರು. ದೇಶದಲ್ಲಿಯೇ ಅತ್ಯುತ್ತಮ ದಳ ಎಂಬ ಪ್ರಶಂಸೆಗೆ ಹೆಸರಾಗಿತ್ತು. ಸುಂದರಪಾಳ್ಯ ಹೋಬಳಿ ಕೇಂದ್ರದಲ್ಲಿ ಕೂಡ ಗೃಹರಕ್ಷಕದ ದಳದ ಘಟಕ ಪ್ರಾರಂಭಿಸಲಾಗಿತ್ತು. ಗ್ರಾಮೀಣ ಭಾಗದಲ್ಲಿ ಒಂದು ಘಟಕ ರಾಜ್ಯದಲ್ಲಿ ಎಲ್ಲಿಯೂ ನಿರ್ವಹಿಸಿರಲಿಲ್ಲ. ಅಷ್ಟೊಂದು ಜನಪ್ರಿಯತೆಯನ್ನು ಈ ದಳ ಹೊಂದಿತ್ತು.

ಬಿಜಿಎಂಎಲ್‌ ಕಾರ್ಯನಿರ್ವಹಿಸುತ್ತಿದ್ದ ಸಮಯದಲ್ಲಿ ಗಣಿ ಕಾರ್ಮಿಕರು ಕೂಡ ಹೆಚ್ಚುವರಿ ಭತ್ಯೆ ಸಿಗುತ್ತದೆ ಎಂಬ ಕಾರಣಕ್ಕಾಗಿ ತಮ್ಮ ಕೆಲಸದ ಅವಧಿ ಬಿಟ್ಟು ಬೇರೆ ಸಮಯದಲ್ಲಿ ದಳದಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಸಾಕಷ್ಟು ಸಂಖ್ಯೆಯಲ್ಲಿರುವ ನಿವೃತ್ತ ಯೋಧರು ಕೂಡ ಸೇರ್ಪಡೆಯಾಗಿದ್ದರು. ಆದರೆ ಈಚಿನ ದಿನಗಳಲ್ಲಿ ದಳದ ಜನಪ್ರಿಯತೆ ಕಡಿಮೆಯಾಗಿದೆ. ಪೊಲೀಸರಿಗೆ ಪರ್ಯಾಯವಾಗಿ ಕಾರ್ಯನಿರ್ವಹಿಸುತ್ತಿದ್ದ ಪಡೆಗೆ ಸೇರುವವರಲ್ಲಿ ಆಸಕ್ತಿ ಇಲ್ಲ. ಪುನಃ ನಗರದಲ್ಲಿ ಕಚೇರಿ ಪ್ರಾರಂಭ ಮಾಡಿದರೆ ಹಿಂದಿನ ವೈಭವ ಮರಳಿ ಪಡೆಯಬಹುದು. ಸಾಕಷ್ಟು ಸಂಖ್ಯೆಯಲ್ಲಿ ಗೃಹ ರಕ್ಷಕದಳದ ಸಿಬ್ಬಂದಿ ನಿಯೋಜನೆಗೆ ಕಾರಣವಾಗುತ್ತದೆ ಎಂಬ ಮಾತುಗಳು ಕೇಳಿಬಂದಿವೆ.

ದೇಶದಲ್ಲಿಯೇ ನಮ್ಮ ಯೂನಿಟ್‌ ಅತ್ಯುತ್ತಮ ಎಂಬ ಪ್ರಶಸ್ತಿಗೆ ಭಾಜನವಾಗಿತ್ತು. ಪ್ರತಿ ವರ್ಷ ರಕ್ತದಾನ ಶಿಬಿರ ಮತ್ತಿತರರ ಸಾರ್ವಜನಿಕ ಸೇವೆಗಳನ್ನು ನಡೆಸಲಾಗುತ್ತಿತ್ತು. ಈಗ ಘಟಕ ಸಾರ್ವಜನಿಕರ ಖುಷಿಗೆ ಕಾರಣವಾಗುವ ರೀತಿಯಲ್ಲಿ ಇಲ್ಲ. ಎಸ್ಪಿ ಕಚೇರಿ ಇರುವ ಕಡೆಗಳಲ್ಲಿ ಕಮಾಂಡೆಂಟ್ ಘಟಕ ಕೂಡ ಇರಬೇಕು. ಇದರಿಂದಾಗಿ ಪೊಲೀಸರಿಗೆ ತುರ್ತು ಸಂದರ್ಭದಲ್ಲಿ ಗೃಹರಕ್ಷಕದಳದವರನ್ನು ನೀಡಲು ಸಾಧ್ಯವಾಗುತ್ತದೆ ಎಂದು ಮಾಜಿ ಕಮಾಂಡೆಂಟ್‌ ನಂದ ಹೇಳುತ್ತಾರೆ.

ಕೋಲಾರಕ್ಕೆ ಹೋಗಿ ಡ್ಯೂಟಿ ಕೇಳಬೇಕು. ಪರೇಡ್ ಭತ್ಯೆ ಸಿಗುವುದಿಲ್ಲ. ಅಧಿಕಾರಿಗಳ ಮತ್ತು ಗೃಹರಕ್ಷಕದಳದವರ ಮಧ್ಯೆ ಮೊದಲಿನ ಬಾಂಧವ್ಯ ಈಗ ಇಲ್ಲ. ಪುನಃ ಕೆಜಿಎಫ್‌ನಲ್ಲಿ ಘಟಕ ಪ್ರಾರಂಭ ಮಾಡಬೇಕು ಎಂದು ರಾಷ್ಟ್ರಪ್ರಶಸ್ತಿ ಪುರಸ್ಕೃತ ಕಮಾಂಡೆಂಟ್ ಆಗಿದ್ದ ಎನ್‌.ಆರ್.ಪುರುಷೋತ್ತಮ ಹೇಳಿದರು.

ಮೊದಲು ಇದ್ದ ಸಂಖ್ಯೆಯಲ್ಲಿ ಈಗ ಗೃಹರಕ್ಷಕದಳದವರು ಇಲ್ಲ. 218 ಹುದ್ದೆಗಳು ಖಾಲಿ ಇವೆ. ಅವುಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಕೆಜಿಎಫ್‌ನಲ್ಲಿ ಪುನಃ ಕಮಾಂಡೆಂಟ್ ಕಚೇರಿ ತೆರೆಯುವುದು ಸರ್ಕಾರಕ್ಕೆ ಬಿಟ್ಟಿದ್ದು ಎಂದು ಈಗಿನ ಕಮಾಂಡೆಂಟ್ ಕಿರಣ್‌ಕುಮಾರ್‌ ಹೇಳುತ್ತಾರೆ.

ಕೆಜಿಎಫ್‌ಗೆ ಬರಲಿರುವ ಗೃಹಮಂತ್ರಿಗಳಿಗೆ ಕಮಾಂಡೆಂಟ್ ಕಚೇರಿಯ ಪುನರ್ ಆರಂಭದ ಬಗ್ಗೆ ಕೋರಲಾಗುವುದು.
–ಎಂ.ರೂಪಕಲಾ, ಶಾಸಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT