ಶನಿವಾರ, ಅಕ್ಟೋಬರ್ 1, 2022
23 °C
ಮಾಲೂರಿನಲ್ಲಿ ಗ್ರಾಮ ಪಂಚಾಯಿತಿ ನೌಕರರ ಸಮಾವೇಶ

ವೇತನ ಪರಿಷ್ಕರಣೆಗೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಾಲೂರು: ಗ್ರಾಮ ಪಂಚಾಯಿತಿ ನೌಕರರಿಗೆ ಕನಿಷ್ಠ ವೇತನ ಹಾಗೂ ಸರ್ಕಾರದ ಸವಲತ್ತು ಸೇರಿದಂತೆ ವೇತನ ಹೆಚ್ಚಳದ ಬಗ್ಗೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾ.ಪಂ ನೌಕರರ ಸಂಘದ ಜಿಲ್ಲಾಧ್ಯಕ್ಷ ಗಾಂಧಿನಗರ ನಾರಾಯಣಸ್ವಾಮಿ ಹೇಳಿದರು.

ಪಟ್ಟಣದ ಭೋವಿ ವಿದ್ಯಾರ್ಥಿ ನಿಲಯದಲ್ಲಿ ಶನಿವಾರ ತಾಲ್ಲೂಕು ಮಟ್ಟದ ಗ್ರಾಮ ಪಂಚಾಯಿತಿ ನೌಕರರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಗ್ರಾಮ ಪಂಚಾಯಿತಿ ನೌಕರರಾದ ಬಿಲ್ ಕಲೆಕ್ಟರ್, ಗುಮಾಸ್ತ, ಕ್ಲರ್ಕ್, ಡಾಟಾ ಎಂಟ್ರಿ ಆಪರೇಟರ್, ಅಟೆಂಡರ್‌, ವಾಟರ್‌ಮ್ಯಾನ್ ನೌಕರರಿಗೆ ಸುಮಾರು ವರ್ಷಗಳಿಂದ ಸರ್ಕಾರ ಕನಿಷ್ಠ ವೇತನ ನಿಗದಿ ಮಾಡಿ ನೀಡಲಾಗುತ್ತಿದೆ. ಆದರೆ ಕಾನೂನಿನ ಅನ್ವಯ ನಿಗದಿಯಾದಂತೆ 5 ವರ್ಷಕ್ಕೆ ವೇತನ ಪರಿಷ್ಕರಣೆ ಮಾಡಬೇಕೆಂದು ನಿಯಮ ಇದೆ. ಅದರಂತೆ ಗ್ರಾಮ ಪಂಚಾಯಿತಿ ನೌಕರರ ಸಂಘದಿಂದ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಸೇವಾ ಅವಧಿಗೆ ಮಾನ್ಯತೆ ನೀಡುವ ರೀತಿಯಲ್ಲಿ ಅದೇ ನೌಕರರ ಪಂಚಾಯತಿಗಳಲ್ಲಿ ನಿಗದಿಪಡಿಸಲಾಗಿರುವ ಮೂಲ ವೇತನದಲ್ಲಿ ಹೆಚ್ಚಳವಾಗಬೇಕು. ಇಲ್ಲವಾದಲ್ಲಿ ಸರ್ಕಾರದ ವಿರುದ್ಧ ಉಗ್ರವಾದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವಿ.ಮುನೇಗೌಡ ಮಾತನಾಡಿ, ಹಣದುಬ್ಬರದಿಂದ ಬೆಲೆಗಳು ಹೆಚ್ಚಾಗಿ ಜೀವನ ನಡೆಸುವುದು ದುಸ್ತರವಾಗಿದೆ. ಕಾನೂನಾತ್ಮಕ ಅಂಶಗಳನ್ನು ಪರಿಗಣಿಸಿ ಗ್ರಾಮ ಪಂಚಾಯಿತಿ ನೌಕರರಿಗೆ ಹೆಚ್ಚಿನ ವೇತನ ನೀಡಬೇಕು. ಕಾರ್ಮಿಕ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಆಕ್ಷೇಪಣೆ ಸಲ್ಲಿಸಲಾಗಿದೆ. ಕನಿಷ್ಠ ವೇತನ ನಿಗದಿಯ ವಿಚಾರವಾಗಿ ಕಾರ್ಮಿಕ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ. ರಾಜ್ಯ ಕನಿಷ್ಠ ವೇತನ ಸಲಹ
ಮಂಡಳಿ ಸದಸ್ಯರ ಗಮನಕ್ಕೆ ತರಲಾಗಿದೆ ಎಂದರು

ರಾಜ್ಯ ಸರ್ಕಾರ ಕನಿಷ್ಠ ವೇತನ ನಿಗದಿ ಮಾಡಲು ಮೀನಮೇಷ ಅನುಸರಿಸುತ್ತಿರುವುದು ಖಂಡನೀಯ. ಸರ್ಕಾರ ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯಿತಿ ನೌಕರರಿಗೆ ಕನಿಷ್ಠ ವೇತನದ ಜತೆಗೆ ಸರ್ಕಾರದ ಎಲ್ಲ ಸೌಲಭ್ಯಗಳು ನೀಡಬೇಕು ಎಂದರು.

ತಾಪಂ ಇಒ ಎನ್.ಮುನಿರಾಜು, ರಾಜ್ಯ ಗ್ರಾ.ಪಂ ನೌಕರರ ಸಂಘದ ಜಿಲ್ಲಾ ಖಜಾಂಚಿ ಕೇಶವರಾವ್, ಗೌರವಾಧ್ಯಕ್ಷ ಟಿ.ವಿ.ನಾಗೇಶ್, ಸಿಐಟಿಯು ಜಿಲ್ಲಾ ಮುಖಂಡ ಎನ್.ಅಶೋಕ್, ಮುರಳಿಕೃಷ್ಣ, ಬಿ.ನಾರಾಯಣಸ್ವಾಮಿ, ನಂಜುಂಡಯ್ಯ, ನಾರಾಯಣ ರೆಡ್ಡಿ, ಚೆನ್ನರಾಜು, ರಾಮನ ಭೋವಿ ರಾಮು, ನಾಗರಾಜ್ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು