ಭಾನುವಾರ, ಸೆಪ್ಟೆಂಬರ್ 19, 2021
23 °C
ವ್ಯಸನಿಗಳು ಸಮಾಜಕ್ಕೆ ಕಂಟಕಪ್ರಾಯ: ಜಿಲ್ಲಾಧಿಕಾರಿ ಸೆಲ್ವಮಣಿ ಅಭಿಪ್ರಾಯ

ಮಾದಕ ವ್ಯಸನದಿಂದ ಭವಿಷ್ಯ ಸರ್ವ ನಾಶ: ಜಿಲ್ಲಾಧಿಕಾರಿ ಸೆಲ್ವಮಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಮಾದಕ ವ್ಯಸನದಿಂದ ಭವಿಷ್ಯವೇ ಸರ್ವ ನಾಶವಾಗುತ್ತದೆ. ಮಾದಕ ವಸ್ತುಗಳ ಸೇವನೆಯು ಜೀವಕ್ಕೆ ಅಪಾಯಕಾರಿ’ ಎಂದು ಜಿಲ್ಲಾಧಿಕಾರಿ ಆರ್.ಸೆಲ್ವಮಣಿ ಹೇಳಿದರು.

ನಶೆ ಮುಕ್ತ ಭಾರತ ಆಂದೋಲನ ಕುರಿತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಇಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿ, ‘ಮಾದಕ ವಸ್ತುಗಳ ಬಳಕೆ ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಪಿಡಿಒಗಳ ಹಾಗೂ ಗ್ರಾ.ಪಂ ಸದಸ್ಯರ ಸಹಕಾರ ಬೇಕು’ ಎಂದು ಮನವಿ ಮಾಡಿದರು.

‘ಮಾದಕ ವಸ್ತುಗಳು ಎಂಬುದು ವಿನಾಶನಾಕಾರಿ ವಸ್ತುಗಳು. ಯುವಕ ಯುವತಿಯರು ಬಹುಬೇಗನೆ ಮಾದಕ ವಸ್ತುಗಳಿಗೆ ಆಕರ್ಷಿತರಾಗಿ ಆರೋಗ್ಯ ಹಾಗೂ ಜೀವನ ಹಾಳು ಮಾಡಿಕೊಳ್ಳುತ್ತಾರೆ. ಮಾದಕ ವ್ಯಸನಿಗಳು ತಮ್ಮ ಕುಟುಂಬದ ನೆಮ್ಮದಿ ಕೆಡಿಸುತ್ತಾರೆ. ಜತೆಗೆ ಸಮಾಜಕ್ಕೂ ಕಂಟಕಪ್ರಾಯರಾಗುತ್ತಾರೆ’ ಎಂದು ಅಭಿಪ್ರಾಯಪಟ್ಟರು.

‘ದೇಶದ ಭವಿಷ್ಯ ಯುವಕ ಯುವತಿಯರ ಮೇಲೆ ಅವಲಂಬಿತವಾಗಿದೆ. ಆದರೆ, ಯುವಕ ಯುವತಿಯರು ಪಾಶ್ಚಿಮಾತ್ಯ ಸಂಸ್ಕೃತಿಯ ಅಂಧಾನುಕರಣೆಯಲ್ಲಿ ಮಾದಕ ವ್ಯಸನಿಗಳಾಗುತ್ತಿದ್ದಾರೆ. ಇದರಿಂದ ಕುಟುಂಬಗಳು ಬೀದಿ ಪಾಲಾಗುತ್ತಿವೆ ಮತ್ತು ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದೆ. ಇದು ಆತಂಕಕಾರಿ ಬೆಳವಣಿಗೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಮಾದಕ ವ್ಯಸನ ನಿರ್ಮೂಲನೆ ಮಾಡಬೇಕಾದರೆ ಮೊದಲು ವ್ಯಸನಿಗಳನ್ನು ಗುರುತಿಸಬೇಕು. ಅವರಿಗೆ ಯಾವ ಮೂಲಗಳಿಂದ ಮಾದಕ ವಸ್ತುಗಳು ಬರುತ್ತಿವೆ ಎಂಬುದನ್ನು ತಿಳಿಸಬೇಕು. ಮಾದಕ ವಸ್ತುಗಳನ್ನು ಮಾರುವ ಜಾಗಗಳ ಬಗ್ಗೆ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಬೇಕು. ಮಾದಕ ವ್ಯಸನಿಗಳಿಗೆ ಮಾನಸಿಕ ಚಿಕಿತ್ಸೆ ಕೊಡಿಸಿ ಅವರು ಜನಸಾಮಾನ್ಯರಂತೆ ಜೀವಿಸುವಂತೆ ಮಾಡಬೇಕು’ ಎಂದು ತಿಳಿಸಿದರು.

ಮಾರಕ ಪಿಡುಗು: ‘ಮಾದಕ ವ್ಯಸನವು ಮಾರಕ ಪಿಡುಗು. ಸುತ್ತಮುತ್ತಲಿನವರೇ ಈ ವ್ಯಸನಕ್ಕೆ ಒಳಗಾಗಿರಬಹುದು. ಅವರಿಗೆ ಮಾದಕ ವ್ಯಸನದ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಬೇಕು. ಮಾದಕ ವಸ್ತು ಸೇವನೆ, ಮಾರಾಟ ಮತ್ತು ಸಾಗಣೆ ಕಂಡುಬಂದಲ್ಲಿ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಬೇಕು’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಗದೀಶ್ ಹೇಳಿದರು.

‘ಪಿಡಿಒಗಳು ಸ್ವಲ್ಪ ಪ್ರಯತ್ನಪಟ್ಟರೆ ಮಾದಕ ವಸ್ತುಗಳು ಎಲ್ಲಿ ಮಾರಾಟವಾಗುತ್ತಿವೆ ಎಂದು ತಿಳಿದುಕೊಳ್ಳಬಹುದು. ಆರೋಗ್ಯ ಇಲಾಖೆಯು ಮಾದಕ ವ್ಯಸನಿಗಳಿಗೆ ಚಿಕಿತ್ಸೆ ಕೊಡುತ್ತಿದೆ. ಶಾಲಾ -ಕಾಲೇಜು ವಿದ್ಯಾರ್ಥಿಗಳ ಮೇಲೆ ಹೆಚ್ಚು ಗಮನ ಹರಿಸಬೇಕು. ಮೊದಲು ಗಂಡು ಮಕ್ಕಳು ಮಾತ್ರ ಮಾದಕ ವ್ಯಸನದ ಜಾಲದಲ್ಲಿ ಸಿಲುಕಿದ್ದರು. ಆದರೆ, ಈಗ ಹೆಣ್ಣು ಮಕ್ಕಳು ಸಹ ಈ ಜಾಲದಲ್ಲಿ ಸಿಲುಕಿದ್ದಾರೆ’ ಎಂದರು.

‘ಯಾರೋ ಗಾಂಜಾ ಬಳಕೆ ಮಾಡುತ್ತಿದ್ದಾರೆ ಎಂದು ನಿರ್ಲಕ್ಷಿಸಬಾರದು. ಮುಂದೊಂದು ದಿನ ನಮ್ಮ ಮನೆ ಬಾಗಿಲಿಗೆ ಬರುವ ಸಾಧ್ಯತೆಯಿದೆ. ಗ್ರಾಮ ಪಂಚಾಯಿತಿ ಮೊದಲಿಗೆ ನಶೆ ಮುಕ್ತವಾದರೆ ತಾಲ್ಲೂಕು ಮಟ್ಟ ನಂತರ ಜಿಲ್ಲೆಯನ್ನು ನಶೆ ಮುಕ್ತ ಮಾಡಬಹುದು’ ಎಂದು ಅಭಿಪ್ರಾಯಪಟ್ಟರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಎಂ.ಜಿ.ಪಾಲಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ರಾಮಚಂದ್ರ, ಮಾನಸಿಕ ಆರೋಗ್ಯ ಅಧಿಕಾರಿ ನಾರಾಯಣಸ್ವಾಮಿ, ಮನೋವೈದ್ಯೆ ಶಿಲ್ಪಶ್ರೀ, ವಿವಿಧ ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳು ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು