ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರ್ಕಂಡೇಯ ಡ್ಯಾಂ ಅಭಿವೃದ್ಧಿ ನಿರ್ಲಕ್ಷ್ಯ

ಜನಪ್ರತಿನಿಧಿಗಳ ನಡುವೆ ಹೊಂದಾಣಿಕೆ ಕೊರತೆ
Last Updated 11 ಅಕ್ಟೋಬರ್ 2021, 2:25 IST
ಅಕ್ಷರ ಗಾತ್ರ

ಬಂಗಾರಪೇಟೆ: ಜಿಲ್ಲೆಯ ಮುಖ್ಯ ಪ್ರವಾಸ ತಾಣವಾಗಬೇಕಿದ್ದ ಬೂದಿಕೋಟೆ ಸಮೀಪದ ಮಾರ್ಕಂಡೇಯ ಜಲಾಶಯ ರಾಜಕೀಯ ಹೊಂದಾಣಿಕೆ ಕೊರತೆಯಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದೆ.

ಈ ಜಲಾಶಯ ಮಾಲೂರು ತಾಲ್ಲೂಕಿನ ವ್ಯಾಪ್ತಿಗೆ ಒಳಪಟ್ಟಿದೆ. ಆದರೆ, ನೀರು ಸಂಗ್ರಹವಾದರೆ ಬಂಗಾರಪೇಟೆ ತಾಲ್ಲೂಕಿನ ಬೂದಿಕೋಟೆ ಜನರಿಗೆ ಹೆಚ್ಚು ಉಪಯೋಗವಾಗುತ್ತದೆ.

ಬೇರೆ ಕ್ಷೇತ್ರದ (ತಾಲ್ಲೂಕು) ವ್ಯಾಪ್ತಿಯಲ್ಲಿ ನಾವು ಹೇಗೆ ಅಭಿವೃದ್ಧಿ ಮಾಡಲು ಸಾಧ್ಯ ಎನ್ನುವುದು ಸ್ಥಳೀಯ ಜನಪ್ರತಿನಿಧಿಗಳ ಧೋರಣೆ. ಅದೇ ರೀತಿ ಡ್ಯಾಂ ಮಾಲೂರು ತಾಲ್ಲೂಕಿನ ವ್ಯಾಪ್ತಿಯಲ್ಲಿ ಇದ್ದರೂ ಡ್ಯಾಂ ನೀರು ಬಂಗಾರಪೇಟೆ ಕ್ಷೇತ್ರಕ್ಕೆ ಹೆಚ್ಚು ಅನುಕೂಲ ಎನ್ನುವುದು ಮಾಲೂರು ಕ್ಷೇತ್ರದ ಜನಪ್ರತಿನಿಧಿಗಳ ಭಾವನೆ. ಹಾಗಾಗಿ, ಎರಡೂ ಕ್ಷೇತ್ರದ ಜನಪ್ರತಿನಿಧಿಗಳು ಜಲಾಶಯವನ್ನು ಪ್ರವಾಸಿ ತಾಣವಾಗಿ ಮಾರ್ಪಡಿಸಲು ಕಾಳಜಿವಹಿಸುತ್ತಿಲ್ಲ ಎನ್ನುವುದು ಬೂದಿಕೋಟೆ ಗ್ರಾಮಸ್ಥರ ದೂರು.

ಮಾಲೂರು ಕ್ಷೇತ್ರದ ಶಾಸಕರಾಗಿದ್ದ ಕೃಷ್ಣಯ್ಯಶೆಟ್ಟಿ ಅವರು, ‘ಡ್ಯಾಂ ಮಾಲೂರು ಕ್ಷೇತ್ರಕ್ಕೆ ಸೇರಿದ್ದು, ಆ ನೀರನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ನಮಗೂ ಹಕ್ಕಿದೆ’ ಎಂದು ವಾದಿಸಿ ಮಾಲೂರು ತಾಲ್ಲೂಕಿನ ಹಳ್ಳಿಗಳಿಗೆ ಡ್ಯಾಂನ ನೀರನ್ನು ಪೂರೈಸುವ ವ್ಯವಸ್ಥೆ ಮಾಡಿದ್ದರು.

ಜಲಾಶಯಕ್ಕೆ ಸೇರಿದ ನೂರಾರು ಎಕರೆ ಜಾಗವಿದ್ದು, ಒಂದೂವರೆ ದಶಕದ ಹಿಂದೆ ಸುಂದರ ಉದ್ಯಾನವಿತ್ತು. ಜಿಂಕೆ ಪಾರ್ಕ್ ಕೂಡ ನಿರ್ವಹಣೆ ಮಾಡುತ್ತಿದ್ದು, ನಿತ್ಯ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಿದ್ದರು. ಪ್ರಸ್ತುತ ಅಲ್ಲಿನ ವಾತಾವರಣವೇ ಬದಲಾಗಿದೆ. ಉದ್ಯಾನದ ಜಾಗದಲ್ಲಿ ಮುಳ್ಳಿನ ಗಿಡಗಳು, ಪೊದೆಗಳು ಬೆಳೆದಿವೆ. ಡ್ಯಾಂ ಸಮೀಪ ಸಮರ್ಪಕ ರಸ್ತೆಯಿಲ್ಲ. ಇದ್ದ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಡ್ಯಾಂ ಬಳಿ ಅನೈತಿಕ ಚಟುವಟಿಕೆಗಳು ಹೆಚ್ಚಿವೆ.

ಆದಾಗ್ಯೂ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿಲ್ಲ. ಭಾನುವಾರ ಬಂತೆಂದರೆ ಪ್ರವಾಸಿಗರ ದಂಡೇ ಅಲ್ಲಿ ಇರುತ್ತದೆ. ಆದರೆ ಅಲ್ಲಿ ಯಾವುದೇ ಮೂಲಸೌಲಭ್ಯ ಇಲ್ಲ. ಸುರಕ್ಷತೆ ಹಾಗೂ ಭದ್ರತೆಯಿಲ್ಲ ಎನ್ನುವುದು ಅವರ ಕೊರಗು.‌

ಜಲಾಶಯದ ಕಟ್ಟಡ ಸದೃಢವಾಗಿದೆಯಾದರೂ ಉದ್ದಕ್ಕೂ ಅಲ್ಲಲ್ಲಿ ಗಿಡಗಳು ಬೆಳೆದು ಬೇರು ಬಿಟ್ಟಿವೆ. ಅದಕ್ಕೆ ರಾಸಾಯನಿಕ ಹಾಕಿ ತೆಗೆಯದಿದ್ದರೆ ಕಟ್ಟಡಕ್ಕೆ ಹಾನಿಯಾಗುವ ಸಾಧ್ಯತೆಯಿದೆ ಎನ್ನುತ್ತಾರೆ
ಸ್ಥಳೀಯರು.

ಆಗಿನ ಮೈಸೂರು ಸರ್ಕಾರ ₹ 4.35 ಲಕ್ಷ ವೆಚ್ಚದಲ್ಲಿ ಈ ಜಲಾಶಯ ನಿರ್ಮಿಸಿದ್ದು, ದಿವಾನ್ ಆಗಿದ್ದ ಮಿರ್ಜಾ ಇಸ್ಮಾಯಿಲ್ 1940ರಲ್ಲಿ ಡ್ಯಾಂ ಉದ್ಘಾಟಿಸಿದ್ದರು.ಜಲಾಶಯ ಭರ್ತಿಯಾದರೆ 847 ಎಕರೆಗೆ ನೀರು ಹರಿಸಬಹುದಾಗಿದೆ.

‘ಮಾಲೂರು ಮತ್ತು ಬಂಗಾರಪೇಟೆ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಪ್ರಮುಖ ಪ್ರವಾಸಿ ತಾಣವಾಗಬೇಕಿದ್ದ ಮಾರ್ಕಂಡೇಯ ಡ್ಯಾಂ ಅಭಿವೃದ್ಧಿ ಕಂಡಿಲ್ಲ’ ಎಂದು ಬೂದಿಕೋಟೆಯ ಚಂದ್ರಶೇಖರ್ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT