ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ: ಕೆಜಿಎಫ್‌ ಶಾಸಕಿ ರೂಪಕಲಾ ಸೂಚನೆ

Last Updated 28 ಜುಲೈ 2021, 14:03 IST
ಅಕ್ಷರ ಗಾತ್ರ

ಕೋಲಾರ: ‘ಕೆಜಿಎಫ್ ತಾಲ್ಲೂಕಿನ ಸಮಗ್ರ ಅಭಿವೃದ್ಧಿಗೆ ಮಂಜೂರಾಗಿರುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ’ ಎಂದು ಶಾಸಕಿ ಎಂ.ರೂಪಕಲಾ ಅಧಿಕಾರಿಗಳಿಗೆ ಸೂಚಿಸಿದರು.

ಕೆಜಿಎಫ್ ಕ್ಷೇತ್ರದ ಅಭಿವೃದ್ಧಿ ಸಂಬಂಧ ಇಲ್ಲಿ ಬುಧವಾರ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿ, ‘ಕೆಜಿಎಫ್ ತಾಲ್ಲೂಕಾಗಿ ಘೋಷಣೆಯಾಗಿದೆ. ಮಿನಿ ವಿಧಾನಸೌಧದ ಕಾಮಗಾರಿ ಪ್ರಗತಿಯಲ್ಲಿದೆ. ಎಪಿಎಂಸಿ ನಿರ್ಮಾಣಕ್ಕೆ ಸರ್ಕಾರದಿಂದ ಅನುಮೋದನೆ ದೊರೆತಿದ್ದು, ಕೂಡಲೇ ಜಾಗ ಗುರುತಿಸಿ’ ಎಂದು ಹೇಳಿದರು.

‘ಕೆಜಿಎಫ್‌ ತಾಲ್ಲೂಕು ಕೇಂದ್ರವಾಗಿದ್ದರೂ ಭೂದಾಖಲೆ ಸೇರಿದಂತೆ ಇತರೆ ಎಲ್ಲಾ ಕಂದಾಯ ಕೆಲಸಕ್ಕೂ ಜನತೆ ಬಂಗಾರಪೇಟೆ ತಾಲ್ಲೂಕು ಕಚೇರಿಗೆ ಹೋಗಬೇಕಾದ ದುಸ್ಥಿತಿ ಇದೆ. ಜನರ ಅನುಕೂಲಕ್ಕಾಗಿ ಕೆಜಿಎಫ್ ತಾಲ್ಲೂಕಿನಲ್ಲೇ ದಾಖಲೆ ಅಭಿಲೇಖಾಲಯ ತೆರೆಯಬೇಕು. ಇದಕ್ಕೆ ಸೂಕ್ತ ಕಟ್ಟಡ ಒದಗಿಸಬೇಕು’ ಎಂದರು.

‘ತಾಲ್ಲೂಕಿನ ಸಾಕಷ್ಟು ರೈತರು ವಿವಿಧ ತರಕಾರಿ ಬೆಳೆಯುತ್ತಿದ್ದಾರೆ. ಸರಿಯಾದ ಮಾರುಕಟ್ಟೆ ವ್ಯವಸ್ಥೆಯಿಲ್ಲದ ಕಾರಣ ಕೋಲಾರ, ಗಡಿ ರಾಜ್ಯಗಳಾದ ಆಂಧ್ರಪ್ರದೇಶ, ತಮಿಳುನಾಡಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಇಲ್ಲಿ ಎಪಿಎಂಸಿ ಸ್ಥಾಪನೆ ಮಾಡಿದರೆ ಬೇರೆ ರಾಜ್ಯಗಳಿಂದಲೂ ತರಕಾರಿ ತರುತ್ತಾರೆ. ತೆರಿಗೆ ಹಣ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಸೇರುತ್ತದೆ’ ಎಂದು ತಿಳಿಸಿದರು.

‘ಕೆಜಿಎಫ್‌ನಲ್ಲಿ ರೈಲು ಸಂಚಾರಕ್ಕೂ ಅವಕಾಶವಿದೆ. ಜತೆಗೆ ಚೆನ್ನೈ–ಬೆಂಗಳೂರು ಕಾರಿಡಾರ್ ನಿರ್ಮಾಣ ಶುರುವಾಗಿದೆ. ವಿ.ಕೋಟಾ ಮುಖ್ಯರಸ್ತೆಯಲ್ಲಿ ಕದರಿಗಾನಕುಪ್ಪ ಬಳಿ 40 ಎಕರೆ ಜಾರಿ ಗುರುತಿಸಲಾಗಿದೆ. ಇದಕ್ಕೆ ಶೀಘ್ರವೇ ಆಡಳಿತಾತ್ಮಕ ಅನುಮೋದನೆ ನೀಡಬೇಕು’ ಎಂದು ಕೋರಿದರು.

‘ಕಾರ್ಮಿಕ ಭವನ ನಿರ್ಮಾಣಕ್ಕೆ 2 ಎಕರೆ ಜಾಗ ಗುರುತಿಸಲಾಗಿದೆ. ಇದಕ್ಕೆ ಸಂಬಂಧಪಟ್ಟ ಕಡತ ಜಿಲ್ಲಾಧಿಕಾರಿ ಕಚೇರಿಯಲ್ಲಿದ್ದು, ವಿಲೇವಾರಿ ಮಾಡಬೇಕು. ತಾಲ್ಲೂಕಿನಾದ್ಯಂತ ಕೆಲ ಗ್ರಾಮಗಳಲ್ಲಿ ಸ್ಮಶಾನ ಜಾಗ ಹಾಗೂ ಸರ್ಕಾರಿ ಜಾಗ ಒತ್ತುವರಿಯಾಗಿದೆ. ಸರ್ವೆ ಮಾಡಿಸಿ ಬೇಲಿ ನಿರ್ಮಿಸಬೇಕು’ ಎಂದು ಸಲಹೆ ನೀಡಿದರು.

ಕಾಮಗಾರಿ ಪ್ರಗತಿಯಲ್ಲಿದೆ: ‘ಮಿನಿ ವಿಧಾನಸೌಧ ಕಾಮಗಾರಿ ಪ್ರಗತಿಯಲ್ಲಿದೆ. ಕಟ್ಟಡದ ಕೆಲಸ ಪೂರ್ಣಗೊಂಡ ನಂತರ ಪ್ರತ್ಯೇಕ ಒಂದು ಭದ್ರತಾ ಕೊಠಡಿ ಮೀಸಲು ಇಡಲಾಗುವುದು. ಆವರೆಗೆ ಬಂಗಾರಪೇಟೆ ತಾಲ್ಲೂಕು ಕಚೇರಿಯಲ್ಲೇ ಕಾರ್ಯ ನಿರ್ವಹಿಸಲಿ. ಈಗ ಸ್ಥಳಾಂತರ ಮಾಡಿದರೆ ದಾಖಲೆಗಳು ನಾಪತ್ತೆಯಾಗಬಹುದು’ ಎಂದು ಜಿಲ್ಲಾಧಿಕಾರಿ ಆರ್.ಸೆಲ್ವಮಣಿ ಅಭಿಪ್ರಾಯಪಟ್ಟರು.

‘ಒತ್ತುವರಿದಾರರು ಎಷ್ಟೇ ಪ್ರಬಲರಾಗಿರಲಿ, ಯಾರ ಒತ್ತಡಕ್ಕೂ ಮಣಿಯದೆ ತೆರವುಗೊಳಿಸಿ. ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನದ ಬಗ್ಗೆ ಪ್ರತಿನಿತ್ಯ ವರದಿ ನೀಡಬೇಕು’ ಎಂದು ಕೆಜಿಎಫ್‌ ತಹಶೀಲ್ದಾರ್ ಸುಜಾತಾ ಅವರಿಗೆ ಸೂಚಿಸಿದರು.

ಸಿಬ್ಬಂದಿ ಕೊರತೆ: ‘ಕಂದಾಯ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿದೆ. ತಾಲ್ಲೂಕಿಗೆ ಆಗಿರುವ ಭೂ ಮಂಜೂರಾತಿ ಸಂಬಂಧ ಕಡತಗಳು ನಾಪತ್ತೆಯಾಗಿದ್ದು, ಅವುಗಳನ್ನು ಹುಡುಕಿಸಬೇಕು. ಈಗಾಗಲೇ ವಿವಿಧ ಉದ್ದೇಶಕ್ಕೆ ಮಂಜೂರು ಮಾಡಿರುವ ಭೂಮಿಗೆ ಸಂಬಂಧಿಸಿದ ಮೂಲದಾಖಲೆಗಳನ್ನು ಪರಿಶೀಲಿಸಿ ಅನುಮೋದನೆ ನೀಡಬೇಕು’ ಎಂದು ರೂಪಕಲಾ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ‘ಇಲಾಖೆಯಲ್ಲಿ ಸಾಕಷ್ಟು ಹುದ್ದೆ ಖಾಲಿಯಿವೆ. ಕೆಲವರು ಮಾಡಬಾರದ ಕೆಲಸ ಮಾಡಿ ಜಿಲ್ಲೆಯಿಂದ ಹೊರ ಹೋಗಿದ್ದಾರೆ. ಇಂತಹ ಸಂದರ್ಭದಲ್ಲಿ ಬೇರೆಯವರನ್ನು ನಿಯೋಜನೆ ಮಾಡಲು ಸಿಬ್ಬಂದಿ ಕೊರತೆಯಿದೆ. ಭೂ ಮಂಜೂರಾತಿ ಕಡತಗಳು ನಾಪತ್ತೆಯಾಗಿರುವ ಬಗ್ಗೆ ದೂರು ಬಂದಿದೆ. ಹೆಚ್ಚುವರಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಶಿಸ್ತುಕ್ರಮ ಜರುಗಿಸುತ್ತೇವೆ’ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಸ್ನೇಹಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT