ಗುರುವಾರ , ಏಪ್ರಿಲ್ 22, 2021
22 °C
ಮನೆಯಲ್ಲೇ ಪುಸ್ತಕ ಓದಲು ಅವಕಾಶ

ಕೋವಿಡ್‌ ಆತಂಕ: ಡಿಜಿಟಲ್ ಗ್ರಂಥಾಲಯ ಸದಸ್ಯತ್ವ ಯೋಜನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಕೋವಿಡ್‌ ಆತಂಕದ ಹಿನ್ನೆಲೆಯಲ್ಲಿ ಮನೆಯಲ್ಲೇ ಪುಸ್ತಕ ಓದುವ ಹವ್ಯಾಸ ಮುಂದುವರಿಸಲು ಜಿಲ್ಲಾ ಕೇಂದ್ರ ಗ್ರಂಥಾಲಯವು ‘ಮನೆಗೊಬ್ಬ ಸದಸ್ಯ–ಸದಸ್ಯನಿಗೊಂದು ಪುಸ್ತಕ’ ಎಂಬ ಘೋಷ ವಾಕ್ಯದೊಂದಿಗೆ ಡಿಜಿಟಲ್ ಗ್ರಂಥಾಲಯ ಸದಸ್ಯತ್ವ ನೀಡಿಕೆಯ ವಿನೂತನ ಯೋಜನೆಗೆ ಚಾಲನೆ ನೀಡಿದೆ.

2020ರ ನವೆಂಬರ್‌ನಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದೊಂದಿಗೆ ಆರಂಭವಾಗಿರುವ ಡಿಜಿಟಲ್ ಗ್ರಂಥಾಲಯ ಪರಿಕಲ್ಪನೆಗೆ ಗ್ರಂಥಾಲಯದ ಸಿಬ್ಬಂದಿ ಸ್ಪಂದಿಸಿ, ಓದುಗರನ್ನು ಸದಸ್ಯರನ್ನಾಗಿಸಲು ಶ್ರಮಿಸುತ್ತಿದ್ದಾರೆ. ಪ್ರತಿಯೊಬ್ಬರೂ ಡಿಜಿಟಲ್ ಗ್ರಂಥಾಲಯದ ಸದಸ್ಯರಾಗಿ ಓದುವ ಹವ್ಯಾಸ ಮುಂದುವರಿಸಿ ಎಂದು ಸಿಬ್ಬಂದಿ ಸಾರ್ವಜನಿಕರ ಮನವೊಲಿಸುತ್ತಿದ್ದಾರೆ.

ಕೋವಿಡ್‌ ಆತಂಕದ ಕಾರಣಕ್ಕೆ ಗ್ರಂಥಾಲಯಕ್ಕೆ ಬರಲು ಹೆದರುವ ಓದುವ ಹವ್ಯಾಸವುಳ್ಳ ಹಿರಿಯರಿಗೆ ಈ ಯೋಜನೆ ಸಹಕಾರಿಯಾಗಿದೆ. ಮತ್ತೊಂದೆಡೆ ಪ್ರತಿಯೊಬ್ಬರೂ ಮನೆಯಲ್ಲೇ ಕುಳಿತು ಪುಸ್ತಕ ಓದುವ ಹವ್ಯಾಸ ಮುಂದುವರಿಸಲು ಯೋಜನೆ ಉಪಯುಕ್ತವಾಗಿದೆ.

ಎಲ್ಲಾ ಕ್ಷೇತ್ರಗಳಂತೆ ಗ್ರಂಥಾಲಯ ಕ್ಷೇತ್ರಕ್ಕೂ ಡಿಜಿಟಲ್ ಕ್ರಾಂತಿ ಕಾಲಿಟ್ಟಿದ್ದು, ಸಾರ್ವಜನಿಕರಲ್ಲಿ ಓದು ಹವ್ಯಾಸ ಮರೆಯಾಗದಂತೆ ಮಾಡುವ ನಿಟ್ಟಿನಲ್ಲಿ ಸಫಲತೆ ಕಾಣಲು ಗ್ರಂಥಾಲಯ ಸಿಬ್ಬಂದಿ ಪ್ರಯತ್ನ ಮುಂದುವರಿಸಿದ್ದಾರೆ.

ಮನೆಗಳಲ್ಲೇ ಮೊಬೈಲ್, ಕಂಪ್ಯೂಟರ್, ಲ್ಯಾಪ್‌ಟಾಪ್‌, ಟ್ಯಾಬ್‌ಗಳಲ್ಲಿ ಎಲ್ಲಾ ತರಹದ ಇ-ಪುಸ್ತಕಗಳು, ವಿಡಿಯೊ, ಇ-ನಿಯತಕಾಲಿಕೆಗಳು, ದಿನನಿತ್ಯದ ಕನ್ನಡ, ಆಂಗ್ಲ ಭಾಷೆಯ ಇ-ಪತ್ರಿಕೆಗಳು, ಮಕ್ಕಳಿಗೆ ನೀತಿ ಕಥೆಗಳನ್ನು ಒಳಗೊಂಡ ಇ–ವಿಡಿಯೊಗಳನ್ನು ಒದಗಿಸಲಾಗುತ್ತಿದೆ.

ಉಚಿತ ಸದಸ್ಯತ್ವ: ಡಿಜಿಟಲ್ ಗ್ರಂಥಾಲಯದ ಸದಸ್ಯತ್ವ ಉಚಿತವಾಗಿದ್ದು, ಓದುಗರು ಯಾವುದೇ ಶುಲ್ಕ ಪಾವತಿಸಬೇಕಿಲ್ಲ. ಆನ್‌ಲೈನ್ ಮೂಲಕ ಮೊಬೈಲ್ ಅಥವಾ ಕಂಪ್ಯೂಟರ್ ಸಹಾಯದಿಂದ ಸದಸ್ಯರಾಗಬಹುದು.

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆಯಲ್ಲಿರುವ ವಿದ್ಯಾರ್ಥಿಗಳು ಸಹ ಮನೆಯಿಂದಲೇ ಓದಲು ಕೆಪಿಎಸ್‌ಸಿ, ಯುಪಿಎಸ್‌ಸಿ, ಯುಜಿಸಿ, ನೆಟ್, ಸ್ಲೆಟ್ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಇ-ಪುಸ್ತಕಗಳು ಡಿಜಿಟಲ್ ಗ್ರಂಥಾಲಯದ ಪೋರ್ಟಲ್‌ನಲ್ಲಿ ಲಭ್ಯವಿದೆ. ಪುಸ್ತಕಗಳನ್ನು ಎರವಲು ಪಡೆಯಲಿಚ್ಛಿಸುವ ಓದುಗರು ಹತ್ತಿರದ ಜಿಲ್ಲಾ, ಶಾಖಾ, ನಗರಸಭೆ, ಗ್ರಾಮ ಪಂಚಾಯಿತಿ ಗ್ರಂಥಾಲಯಗಳಿಗೆ ತೆರಳಿ ಡಿಜಿಟಲ್ ಸದಸ್ಯತ್ವ ಪಡೆದುಕೊಳ್ಳಬಹುದು.

ಡಿಜಿಟಲ್ ಗ್ರಂಥಾಲಯ ಸದಸ್ವತ್ವ ಪಡೆಯ ಬಯಸುವ ಓದುಗರು ಹೆಚ್ಚಿನ ಮಾಹಿತಿಗೆ 08152 222821 ದೂರವಾಣಿ ಸಂಖ್ಯೆ, 9845228125 ಅಥವಾ 8105888313 ಮೊಬೈಲ್‌ ಸಂಪರ್ಕಿಸಬಹುದು ಎಂದು ಜಿಲ್ಲಾ ಗ್ರಂಥಾಲಯ ಅಧಿಕಾರಿಗಳು ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು