ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈನೈಡ್‌ ಗುಡ್ಡಕ್ಕೆ ನಿರ್ಬಂಧ: ಪ್ರವಾಸಿಗರಿಗೆ ನಿರಾಸೆ

ಚಿನ್ನದ ಗಣಿಯ ಆಕರ್ಷಕ ಗುಡ್ಡಗಳು, ಪ್ರವಾಸಿಗರಿಗೆ ಮೂಲ ಸೌಕರ್ಯ ಕೊರತೆ
Published 21 ಆಗಸ್ಟ್ 2023, 7:27 IST
Last Updated 21 ಆಗಸ್ಟ್ 2023, 7:27 IST
ಅಕ್ಷರ ಗಾತ್ರ

ಕೆಜಿಎಫ್: ಚಿನ್ನದ ಗಣಿಯ ಆಕರ್ಷಕ ಗುಡ್ಡಗಳನ್ನು ನೋಡಲು ಬರುವ ಪ್ರವಾಸಿಗರಿಗೆ ಮೂಲ ಸೌಕರ್ಯ ಕೊರತೆ ಇದೆ. ಅಲ್ಲದೆ, ಸೂಕ್ತ ಮಾರ್ಗದರ್ಶನ ಮತ್ತು ಗುಡ್ಡ ನೋಡಲು ನಿರ್ಬಂಧ ವಿಧಿಸಿರುವುದು ಪ್ರವಾಸಿಗರಿಗೆ ನಿರಾಸೆ ಮೂಡಿಸಿದೆ. 

ಒಂದು ಕಾಲದಲ್ಲಿ ವಿಶ್ವದ ಅತ್ಯಂತ ಆಳವಾದ ಗಣಿ ಎಂದು ಖ್ಯಾತಿ ಗಳಿಸಿದ್ದ ನಗರದ ಸೈನೈಡ್ ಗುಡ್ಡಗಳು ಕೆಜಿಎಫ್ ಚಲನಚಿತ್ರ ಬಂದ ಮೇಲೆ ಮತ್ತೊಂದು ರೀತಿಯಲ್ಲಿ ಪ್ರಖ್ಯಾತಿಗೊಂಡಿದೆ. ಕೋಟಲಿಂಗೇಶ್ವರ, ಗುಟ್ಟಹಳ್ಳಿ (ಬಂಗಾರುತಿರುಪತಿ) ಮೊದಲಾದ ಪ್ರೇಕ್ಷಣೀಯ ಮತ್ತು ಧಾರ್ಮಿಕ ಸ್ಥಳಗಳನ್ನು ವೀಕ್ಷಿಸಲು ಬರುತ್ತಿದ್ದ ಪ್ರವಾಸಿಗರು ಈಗ ಸೈನೈಡ್ ಗುಡ್ಡ ನೋಡಲು ಲಗ್ಗೆ ಇಡುತ್ತಿದ್ದಾರೆ. ಹಿಂದೆ ಮುಕ್ತ ಅವಕಾಶ ಇದ್ದ ಗುಡ್ಡಗಳಿಗೆ ಈಗ ನಿಯಂತ್ರಣ ಹೇರಿರುವುದು ದೂರದಿಂದ ಬರುವ ಪ್ರವಾಸಿಗರಿಗೆ ನಿರಾಸೆ ಉಂಟು ಮಾಡುತ್ತಿದೆ.

ಆಗಾಗ್ಗೆ ಪೊಲೀಸರು ಮತ್ತು ಗಣಿ ಭದ್ರತಾ ಸಿಬ್ಬಂದಿ ಗುಡ್ಡದ ಮೇಲೆ ಇರುವ ಪ್ರವಾಸಿಗರಿಗೆ ಎಚ್ಚರಿಕೆ ನೀಡುತ್ತಿದ್ದಾರೆ. ಇದು ಪ್ರವಾಸಿಗರಿಗೆ ಕಿರಿಕಿರಿ ಉಂಟು ಮಾಡುತ್ತಿದೆ. ಸೈನೈಡ್ ಗುಡ್ಡ ಪಿರಮಿಡ್ ರೀತಿಯಲ್ಲಿ ಇಳಿಜಾರು ಮುಖವಾಗಿದೆ. ಇದರ ಪ್ರವೇಶ ದ್ವಾರವನ್ನು ನಿಖರವಾಗಿ ಎಲ್ಲಿಯೂ ಗುರ್ತಿಸಿಲ್ಲ. ಸಿನಿಮಾ ಶೂಟಿಂಗ್ ಮಾಡುವವರು ಮಾಡಿಕೊಂಡ ದಾರಿಯನ್ನೇ ಕೆಲವರು ಗುಡ್ಡದ ಮೇಲೆ ಹೋಗುವ ದಾರಿ ಎಂದು ಪರಿಗಣಿಸುತ್ತಾರೆ. ಆದರೆ, ಬಹಳಷ್ಟು ಬಡಾವಣೆ ಮೂಲಕ ಗುಡ್ಡಹತ್ತಿ ಹೋಗಲು ಸ್ಥಳ ಇದೆ. ಆದರೆ, ಅದು ಕಠಿಣವಾಗಿದೆ. ಬೇರೆ ದಾರಿ ಕಾಣದ ಪ್ರವಾಸಿಗರು ಅಲ್ಲಿಯೇ ಹತ್ತಲು ಹೋಗುತ್ತಿದ್ದಾರೆ. ಜಾರಿ ಬಿದ್ದ ಘಟನೆಗಳು ನಡೆದಿವೆ.

ಗುಡ್ಡದ ಮೇಲೆ ಹೋಗಲು ಗಣಿಯ ಮಿಲ್ ಪಕ್ಕದ ರಸ್ತೆ ಇದೆ. ಇದರ ಮೂಲಕ ಹೋಗಬಹುದು. ಅದನ್ನು ಬಿಟ್ಟು ಎಲ್ಲೆಂದರಲ್ಲಿ ಹತ್ತುವುದು, ಅಲ್ಲಿಂದ ಸೆಲ್ಫಿ ತೆಗೆದುಕೊಳ್ಳುವುದನ್ನು  ಪೊಲೀಸರು ತಡೆಗಟ್ಟುತ್ತಿದ್ದಾರೆ. ಯಾವುದೇ ಅನಾಹುತವಾಗಬಾರದೆಂಬ ಮುನ್ನೆಚ್ಚರಿಕೆ ಇದೆ. ಯಾವುದೇ ಪ್ರವಾಸಿಗರನ್ನು ನಿಯಂತ್ರಿಸುತ್ತಿಲ್ಲ ಎಂದು ಪೊಲೀಸರು ಹೇಳುತ್ತಾರೆ.

ಆದರೆ, ಪ್ರವಾಸಿಗರಿಗೆ ತಡೆಯೊಡ್ಡುತ್ತಿರುವುದು ಬಿಜಿಎಂಎಲ್ ಭದ್ರತಾ ಸಿಬ್ಬಂದಿ. ಸೈನೈಡ್ ಗುಡ್ಡದ ಪ್ರವೇಶ ದಾರಿಯಲ್ಲಿ ಮುಳ್ಳು ಗಿಡಗಳನ್ನು ಹಾಕಿದ್ದಾರೆ. ಅಧಿಕೃತ ದಾರಿಯಲ್ಲಿ ಬಂದವರಿಗೆ ವಾಪಸ್ ಕಳುಹಿಸುತ್ತಿದ್ದಾರೆ. ಬೇರೆಡೆ ಹತ್ತಿ ಬಂದವರ ಬಳಿ ಅವರು ಸುಳಿಯುವುದಿಲ್ಲ. ಇದರಿಂದಾಗಿ ಅಪಾಯಕಾರಿ ಪ್ರದೇಶದಲ್ಲಿ ಗುಡ್ಡ ಹತ್ತುವವರ ಸಂಖ್ಯೆ ಜಾಸ್ತಿಯಾಗಿದೆ.

ಎನ್‌ಡಿ ಮಿಲ್ ಪಕ್ಕದಲ್ಲಿ ಬರುವ ಗುಡ್ಡದ ರಸ್ತೆಯನ್ನು ಕೇಳಿಕೊಂಡು ಪ್ರತಿನಿತ್ಯ ನೂರಾರು ಜನ ಬರುತ್ತಾರೆ. ರಜೆ ದಿನದಂದು ನೂರಾರು ಕಾರುಗಳು ಈ ಪ್ರದೇಶಕ್ಕೆ ಬರುತ್ತವೆ. ಆದರೆ, ದಾರಿಯಲ್ಲಿ ಬಯಲು ಶೌಚಾಲಯ ಇರುವುದರಿಂದ ಮೂಗು ಮುಚ್ಚಿಕೊಂಡು ಬರಬೇಕಾಗಿದೆ. ಸೈನೈಡ್ ಗುಡ್ಡ ನೋಡಲು ಹಿರಿಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಬಂದಾಗ ಮಾತ್ರ ಬಯಲು ಶೌಚಾಲಯವನ್ನು ಸ್ವಚ್ಛಗೊಳಿಸಲಾಗುತ್ತದೆ. ಉಳಿದ ವೇಳೆ ನಗರಸಭೆ ಅದರ ಗೊಡವೆಗೆ ಹೋಗುವುದಿಲ್ಲ.

ಸೈನೈಡ್ ಗುಡ್ಡ:  ನೂರಾರು ವರ್ಷಗಳ ಗಣಿ ಕಾರ್ಮಿಕರ ಶ್ರಮದಿಂದಾಗಿ ಭೂ ಒಡಲಿನಲ್ಲಿದ್ದ ಮಣ್ಣನ್ನು ಭೂಮಿ ಮೇಲೆ ತಂದು ಚಿನ್ನ ಸಂಸ್ಕರಿಸಿ, ಮಣ್ಣು ತ್ಯಾಜ್ಯವಾದಾಗ ಅದನ್ನು ಒಂದೆಡೆ ಸೇರಿಸಿ ಕೃತಕ ಗುಡ್ಡಗಳನ್ನಾಗಿ ಪರಿವರ್ತನೆ ಮಾಡಲಾಯಿತು. ಇಂತಹ ಸೈನೈಡ್ ಗುಡ್ಡಗಳು ಹಲವು ಚಿತ್ರ ತಂಡಗಳಿಗೆ ಮೆಚ್ಚಿನ ತಾಣವಾಗಿದೆ.

ದೂಳು ಮಿಶ್ರಿತ ಬಿಳಿ ಮಣ್ಣಿನಿಂದ ಆವೃತವಾದ ಗುಡ್ಡಗಳು ಸಾಕಷ್ಟು ಚಲನಚಿತ್ರಗಳಿಗೆ ಭೂಮಿಕೆಯಾಗಿದೆ. ಸುಮಾರು ನೂರ ಇಪ್ಪತ್ತು ವರ್ಷಗಳಿಂದ ಶೇಖರಣೆಯಾದ ಮಣ್ಣಿನ ಗುಡ್ಡದ ಮೇಲ್ಮೈ ಮಳೆ ನೀರಿನಿಂದಾಗಿ ಉಂಟಾಗಿರುವ ಕೊರಕುಗಳು ಕೂಡ ಆಕರ್ಷಣೀಯವಾಗಿವೆ. ಸಾಹಸಮಯ ದೃಶ್ಯಗಳಿಗೆ ಹೇಳಿ ಮಾಡಿಸಿದ ಸ್ಥಳವಾಗಿದೆ.
ಕೆಜಿಎಫ್, ಗಂಡುಗಲಿ, ನಟಸಾರ್ವಭೌಮ, ಕರಿಯ, ಶಿವ, ಸುಂಟರಗಾಳಿ, ಅಣ್ಣಾಬಾಂಡ್, ತೆಲುಗಿನ ಬಾಲಕೃಷ್ಣ ಅಭಿನಯದ ಲಕ್ಷ್ಮಿನರಸಿಂಹ, ತಮಿಳಿನ ಜನಪ್ರಿಯ ಚಿತ್ರ ತಿರುಡಾ ತಿರುಡಿ ಹೀಗೆ ಹಲವು ಭಾಷೆಗಳ ಚಿತ್ರಗಳು ಇಲ್ಲಿ ಚಿತ್ರೀಕರಣಗೊಂಡಿವೆ.

ಸೈನೈಡ್ ಗುಡ್ಡದ ಅಪಾಯಕಾರಿ ಸ್ಥಳದಿಂದ ಪ್ರವಾಸಿಗರು ಕೆಳಗೆ ಇಳಿಯುತ್ತಿರುವುದು
ಸೈನೈಡ್ ಗುಡ್ಡದ ಅಪಾಯಕಾರಿ ಸ್ಥಳದಿಂದ ಪ್ರವಾಸಿಗರು ಕೆಳಗೆ ಇಳಿಯುತ್ತಿರುವುದು
ಕೆಜಿಎಫ್ ಊರಿಗಾಂ ಪೊಲೀಸರು ಪ್ರವಾಸಿಗರಿಗೆ ತಿಳಿವಳಿಕೆ ನೀಡುತ್ತಿರುವುದು ( ಸಂಗ್ರಹ ಚಿತ್ರ)
ಕೆಜಿಎಫ್ ಊರಿಗಾಂ ಪೊಲೀಸರು ಪ್ರವಾಸಿಗರಿಗೆ ತಿಳಿವಳಿಕೆ ನೀಡುತ್ತಿರುವುದು ( ಸಂಗ್ರಹ ಚಿತ್ರ)
ದಾವಣಗೆರೆಯಿಂದ ಕುಟುಂಬ ಸಮೇತ ಬಂದರೆ ಮೂಲ ಸೌಕರ್ಯದ ಕೊರತೆಯಿಂದಾಗಿ ತೊಂದರೆ ಉಂಟಾಯಿತು. ಎಲ್ಲೆಡೆ ವಾಸನೆ.
-ದೇವರಾಜ್ ದಾವಣಗೆರೆ ನಿವಾಸಿ

ಗಣಿ ಅಧಿಕಾರಿಗಳು ಬಿಡುವುದಿಲ್ಲ ಬಿಜಿಎಂಎಲ್ ಗುಡ್ಡದ ಜಾಗ ಕೊಟ್ಟರೆ ಮೂಲ ಸೌಕರ್ಯ ಕಲ್ಪಿಸಲಾಗುವುದು. ಆದರೆ ಗಣಿ ಅಧಿಕಾರಿಗಳು ಗಣಿ ಪ್ರದೇಶದಲ್ಲಿ ಯಾವುದೇ ಕೆಲಸ ಮಾಡಲು ಅವಕಾಶ ಕೊಡುವುದಿಲ್ಲ. ಗಣಿ ಪ್ರದೇಶದಲ್ಲಿ ತೆರಿಗೆ ಬಾರದೆ ಇದ್ದರೂ ಕೆಲವು ಕೆಲಸವನ್ನು ನಗರಸಭೆಯಿಂದ ಮಾಡಲಾಗುತ್ತಿದೆ ಎಂದು ಆಯುಕ್ತ ಪವನ್‌ ಕುಮಾರ್ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT