ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದ್ಧತೆ ತೋರದಿದ್ದರೆ ಶಿಸ್ತು ಕ್ರಮ: ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಗೋವಿಂದಗೌಡ ಎಚ್ಚರ

Last Updated 11 ಜೂನ್ 2021, 12:35 IST
ಅಕ್ಷರ ಗಾತ್ರ

ಕೋಲಾರ: ‘ಕೋವಿಡ್‌ ಹಾಗೂ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕಳೆದೆರಡು ತಿಂಗಳಿಂದ ಬ್ಯಾಂಕ್ ನಿಷ್ಕ್ರಿಯವಾಗಿತ್ತು. ಇನ್ನಾದರೂ ಬದ್ಧತೆಯಿಂದ ಕೆಲಸ ಮಾಡಿ ಬ್ಯಾಂಕ್ ಉಳಿಸಬೇಕು. ಇಲ್ಲವಾದರೆ ಮುಲಾಜಿಲ್ಲದೆ ಶಿಸ್ತು ಕ್ರಮ ಜರುಗಿಸುತ್ತೇವೆ’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಅಧಿಕಾರಿ ಮತ್ತು ಸಿಬ್ಬಂದಿಗೆ ಎಚ್ಚರಿಕೆ ನೀಡಿದರು.

ಅವಿಭಜಿತ ಕೋಲಾರ ಜಿಲ್ಲೆಯ ಬ್ಯಾಂಕ್‌ನ ಎಲ್ಲಾ ಶಾಖೆಗಳ ಸಿಬ್ಬಂದಿಯೊಂದಿಗೆ ಇಲ್ಲಿ ಶುಕ್ರವಾರ ನಡೆದ ಆನ್‌ಲೈನ್ ಸಭೆಯಲ್ಲಿ ಮಾತನಾಡಿ, ‘ಏಪ್ರಿಲ್‌ ತಿಂಗಳ ಆರಂಭದಿಂದಲೂ ಕೋವಿಡ್ ಕಾಡುತ್ತಿದೆ. ಕೊರೊನಾ ಸೋಂಕು ಬ್ಯಾಂಕ್ ಸಿಬ್ಬಂದಿಗೂ ಕಷ್ಟ ತಂದೊಡ್ಡಿದೆ. ಈಗ ಪರಿಸ್ಥಿತಿ ಸುಧಾರಿಸಿದ್ದು, ಬ್ಯಾಂಕ್‌ನ ಕಾರ್ಯ ಚಟುವಟಿಕೆಗಳ ಕಡೆ ಗಮನಹರಿಸಿ’ ಎಂದು ಸೂಚಿಸಿದರು.

‘ಬ್ಯಾಂಕ್ ಉಳಿಸಲೇಬೇಕಾದ ಜವಾಬ್ದಾರಿ ಇದೆ. ಇಷ್ಟು ದಿನ ರಜೆಯ ಮಜಾ ಅನುಭವಿಸಿದ್ದು ಸಾಕು. ಇನ್ನು ರಜಾ ದಿನಗಳಲ್ಲೂ ಬ್ಯಾಂಕ್‌ನ ಕೆಲಸ ಮಾಡಿ. ನಿಗದಿತ ಗುರಿ ಸಾಧಿಸಬೇಕು. ತಪ್ಪಿದರೆ ವರ್ಗಾವಣೆ ಶಿಕ್ಷೆ ಖಚಿತ. ಯಾರು ಹೇಗೆ ಕೆಲಸ ಮಾಡುತ್ತಿದ್ದೀರಾ ಎಂಬುದನ್ನು ಗಮನಿಸುತ್ತಿದ್ದೇನೆ. ಹಲವರಿಗೆ ಬದ್ಧತೆ ಇಲ್ಲವಾಗಿದೆ. ಬ್ಯಾಂಕ್ ನಂಬಿದ ಮಹಿಳೆಯರು ಮತ್ತು ರೈತರ ಹಿತ ಕಾಯುವ ಹೊಣೆಯಿದೆ’ ಎಂದು ಕಿವಿಮಾತು ಹೇಳಿದರು.

‘ಅವಿಭಜಿತ ಜಿಲ್ಲೆಯ ಎಲ್ಲಾ ಶಾಖೆಗಳಿಗೂ ತಲಾ ₹ 10 ಕೋಟಿ ಠೇವಣಿ ಸಂಗ್ರಹದ ಗುರಿ ನೀಡಲಾಗಿದೆ. ಬ್ಯಾಂಕನ್ನು ಸಂಕಷ್ಟದಿಂದ ಪಾರು ಮಾಡಲು ಠೇವಣಿ ಸಂಗ್ರಹಕ್ಕೆ ಒತ್ತು ನೀಡಿ. ಜುಲೈ ಅಂತ್ಯದೊಳಗೆ ಪ್ರತಿ ಶಾಖೆಯೂ ಠೇವಣಿ ಗುರಿ ಸಾಧಿಸಲೇಬೇಕು’ ಎಂದು ತಾಕೀತು ಮಾಡಿದರು.

‘ಜೂನ್‌ 18ರಂದು ಲೆಕ್ಕಪರಿಶೋಧಕರು ಬರಲಿದ್ದಾರೆ. ಎಲ್ಲಾ ಶಾಖೆ, ಸೊಸೈಟಿಗಳ ಲೆಕ್ಕಪರಿಶೋಧನೆ ಪೂರ್ಣಗೊಳಿಸಬೇಕು. ಗೊಂದಲವಿದ್ದರೆ ಬ್ಯಾಂಕ್‌ನ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿ ಪರಿಹರಿಸಿಕೊಳ್ಳಿ. ಸೊಸೈಟಿಗಳ ಲೆಕ್ಕಪರಿಶೋಧನೆ ಮತ್ತು ಗಣಕೀಕರಣ ಪ್ರಕ್ರಿಯೆ ಸಕಾಲಕ್ಕೆ ಮುಗಿಸಿ. ಲೆಕ್ಕಪರಿಶೋಧನೆ ಸಂಬಂಧ ಸಮಸ್ಯೆಗಳನ್ನು 3 ದಿನದೊಳಗೆ ಪರಿಹರಿಸಿಕೊಳ್ಳಿ’ ಎಂದರು.

ಎತ್ತಂಗಡಿ ನಿಶ್ಚಿತ: ‘ಸಾಲ ವಸೂಲಾತಿಗೆ ಹೆಚ್ಚಿನ ಆದ್ಯತೆ ನೀಡಿ. ದಾಖಲೆಪತ್ರಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿ. ಸರಿಯಾಗಿ ಕೆಲಸ ಮಾಡಿ, ಇಲ್ಲವೇ ಕೆಲಸ ಬಿಡಿ. ಲೆಕ್ಕಪರಿಶೋಧಕರು ಯಾವ ಶಾಖೆಯಲ್ಲಿ ಸಮರ್ಪಕ ದಾಖಲೆಗಳ ನಿರ್ವಹಣೆ ಇಲ್ಲ ಎಂದು ತಿಳಿಸುತ್ತಾರೋ ಆ ಶಾಖೆ ಸಿಬ್ಬಂದಿಯನ್ನು ಎತ್ತಂಗಡಿ ಮಾಡುವುದು ನಿಶ್ಚಿತ’ ಎಂದು ಎಚ್ಚರಿಕೆ ನೀಡಿದರು.

‘ಕೋವಿಡ್‌ ಕಾರಣಕ್ಕೆ ಬ್ಯಾಂಕ್‌ನ ಕಾರ್ಯ ಚಟುವಟಿಕೆಗಳಿಗೆ ಹಿನ್ನಡೆಯಾಗಿದೆ. ಈಗ ಲಾಕ್‌ಡೌನ್‌ ತೆರವು ಆಗುತ್ತಿರುವುದರಿಂದ ಕೆಲಸಕ್ಕೆ ಚುರುಕು ಮುಟ್ಟಿಸಬೇಕು. ಶಾಖಾವಾರು ಪ್ರಗತಿ ಪರಿಶೀಲನೆ ಸಭೆ ನಡೆಸಬೇಕು’ ಎಂದು ಬ್ಯಾಂಕ್‌ನ ನಿರ್ದೇಶಕ ಹನುಮಂತರೆಡ್ಡಿ ಸಲಹೆ ನೀಡಿದರು.

ಬ್ಯಾಂಕ್‌ನ ಅಧಿಕಾರಿಗಳಾದ ಖಲೀಮ್‌ ಉಲ್ಲಾ, ನಾಗೇಶ್, ಶಿವಕುಮಾರ್, ದೊಡ್ಡಮುನಿ, ಅರುಣ್‌ಕುಮಾರ್, ಪದ್ಮಮ್ಮ, ಶುಭಾ, ತಿಮ್ಮಯ್ಯ, ಎರಡೂ ಜಿಲ್ಲೆಗಳ ಎಲ್ಲಾ ಶಾಖೆಗಳ ವ್ಯವಸ್ಥಾಪಕರು, ಸಿಬ್ಬಂದಿ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT