ಭಾನುವಾರ, ಏಪ್ರಿಲ್ 18, 2021
24 °C
ಬ್ಯಾಂಕ್‌ಗಳ ವಿರುದ್ಧ ಜಿ.ಪಂ ಸಿಇಒ ಜಗದೀಶ್‌ ಅಸಮಾಧಾನ

ರೈತರ ಅರ್ಜಿ ಸ್ವೀಕಾರಕ್ಕೆ ತಾರತಮ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ:‘ಫಸಲ್ ಭಿಮಾ ಯೋಜನೆಯಡಿ ರೈತರ ಅರ್ಜಿ ಸ್ವೀಕರಿಸಲು ಬ್ಯಾಂಕ್ ಅಧಿಕಾರಗಳು ತಾರತಮ್ಯ ಮಾಡುತ್ತಿದ್ದಾರೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಜಗದೀಶ್ ಅಸಮಾಧಾನ ವ್ಯಕ್ತಪಡಿಸಿದರು. 

ಇಲ್ಲಿ ಶುಕ್ರವಾರ ನಡೆದ ಬ್ಯಾಂಕ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ‘ಸರ್ಕಾರಿ ಯೋಜನೆಗಳನ್ನು ಕಾರ್ಯಗತಗೊಳಿಸಲು ಅಧಿಕಾರಿಗಳು ಯಾಕೆ ತಾತ್ಸರ ತೋರುತ್ತೀರಿ? ಜಿಲ್ಲೆಯ ರೈತರಿಂದ ಠೇವಣಿ ಪಡೆದುಕೊಂಡು ಸಾಹುಕಾರರಿಗೆ ಸಾಲ ಕೊಡುತ್ತೀರಾ?’ ಎಂದು ಪ್ರಶ್ನಿಸಿದರು.

‘ಫಸಲ್ ಭಿಮಾ ಯೋಜನೆಗೆ ಈವರೆಗೆ 70 ಮಂದಿ ರೈತರ ಅರ್ಜಿ ಮಾತ್ರ ದಾಖಲಾಗಿವೆ. ತೋಟಗಾರಿಕೆ ಬೆಳೆಗಳಿಗೆ ವಿಮೆ ಪಾವತಿಸಲು ಜುಲೈ 31 ಕಡೆಯ ದಿನವಾಗಿದ್ದು, ಬ್ಯಾಂಕ್ ಅಧಿಕಾರಿಗಳು ಅರ್ಜಿ ಸ್ವೀಕರಿಸಬೇಕು’ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ಗಾಯಿತ್ರಿ ಹೇಳಿದರು.

‘ತೋಟಗಾರಿಕೆ ಬೆಳೆಯಾದ ಮಾವಿಗೆ ರೈತರು ಶೇ 5ರಷ್ಟು ವಿಮೆ ಕಂತು ಅಂದರೆ ಪ್ರತಿ ಎಕರೆಗೆ ₹ 32 ಸಾವಿರ ಪಾವತಿಸಬೇಕು. ಬೆಳೆ ನಷ್ಟವಾದ ಸಂದರ್ಭದಲ್ಲಿ ರೈತರ ಬ್ಯಾಂಕ್ ಖಾತೆಗೆ ವಿಮೆ ಮೊತ್ತ ಜಮಾ ಆಗುತ್ತದೆ. ಬ್ಯಾಂಕ್‌ ಅಧಿಕಾರಿಗಳು ರೈತರಿಗೆ ಮೋಸ ಮಾಡಲು ಪ್ರಯತ್ನಿಸುತ್ತಿದ್ದೀರಿ. ಇದನ್ನು ಸಹಿಸುವುದಿಲ್ಲ. ಸಾಲ ಪಡೆದವರು ಹಾಗೂ ಪಡೆಯದಿದ್ದವರೆಂದು ತಾರತಮ್ಯ ಮಾಡುತ್ತೀರಾ?’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಿಸ್ತುಕ್ರಮ: ‘ರೈತರಿಂದ ಹಣ ಪಡೆದು ಆನ್‌ಲೈನ್‌ನಲ್ಲಿ ಅರ್ಜಿಯ ಮಾಹಿತಿ ದಾಖಲು ಮಾಡದಿರುವ ಪ್ರಕರಣಗಳು ಸಾಕಷ್ಟಿವೆ. ಬೆಳೆ ನಷ್ಟವಾದಾಗ ರೈತರಿಗೆ ವಿಮೆ ಕಂಪನಿಯಿಂದ ಪರಿಹಾರ ಪಡೆದುಕೊಳ್ಳಲು ಸಾಧ್ಯವಾಗದೆ ವಂಚನೆಗೆ ಒಳಗಾಗಿದ್ದಾರೆ. ಇದಕ್ಕೆ ಬ್ಯಾಂಕ್‌ ಅಧಿಕಾರಿಗಳೇ ನೇರ ಹೊಣೆ. ಅರ್ಜಿ ಸಲ್ಲಿಸಲು ಬ್ಯಾಂಕ್‌ಗೆ ಬಂದವರಿಗೆ ಸೌಕರ್ಯ ಸಿಗದಿದ್ದರೆ ನಿಮ್ಮ ವಿರುದ್ಧ ಶಿಸ್ತುಕ್ರಮ ಜರುಗಿಸುತ್ತೇವೆ’ ಎಂದು ಸಿಇಒ ಬ್ಯಾಂಕ್‌ ಅಧಿಕಾರಿಗಳಿಗೆ ಖಡಕ್‌ ಎಚ್ಚರಿಕೆ ನೀಡಿದರು.

‘ಸರ್ಕಾರದ ಯೋಜನೆಗಳ ಬಗ್ಗೆ ಪ್ರತಿ ಇಲಾಖೆಯಿಂದ ನಿಮಗೆ ಮಾಹಿತಿ ಬರುತ್ತದೆ. ಆದರೂ ಮಾಹಿತಿ ಬಂದಿಲ್ಲ ಎಂದು ಹೇಳಿದರೆ ನಂಬುವುದಿಲ್ಲ. ರೈತರಿಗೆ ಪ್ರಾಮಾಣಿಕವಾಗಿ ಸೌಕರ್ಯ ಕಲ್ಪಿಸುವ ಪ್ರಯತ್ನ ಮಾಡಿ’ ಎಂದು ಸೂಚಿಸಿದರು.

ಜಿಲ್ಲೆ ಹಿಂದುಳಿದಿದೆ: ‘ಪ್ರಕೃತಿ ವಿಕೋಪ, ಇತರೆ ಕಾರಣಕ್ಕೆ ಬೆಳೆ ಹಾನಿಯಾದರೆ ಪರಿಹಾರ ಕಲ್ಪಿಸಲು ಸರ್ಕಾರ ವಿಮಾ ಯೋಜನೆ ಜಾರಿಗೊಳಿಸಿದೆ. ಬ್ಯಾಂಕ್‌ ಅಧಿಕಾರಿಗಳು ರೈತರಿಗೆ ಕನಿಷ್ಠ ಸಹಾಯ ಮಾಡದಿದ್ದರೆ ಹೇಗೆ? ರೈತರಿಗೆ ನಿಮ್ಮ ಜೇಬಿನಿಂದ ಹಣ ತೆಗೆದು ಕೊಡುತ್ತೀರಾ’ ಎಂದು ಕೆಂಡಾಮಂಡಲರಾದರು.

‘ಬೇರೆ ಯೋಜನೆಗಳ ಅನುಷ್ಠಾನದಲ್ಲಿ ಜಿಲ್ಲೆ ಮುಂದಿದೆ. ಆದರೆ, ಬ್ಯಾಂಕ್‌ಗಳಿಂದ ಆಗಬೇಕಿರುವ ಕೆಲಸ ಬಾಕಿ ಇರುವುದರಿಂದ ಕೆಲ ಯೋಜನೆಗಳ ಅನುಷ್ಠಾನದಲ್ಲಿ ಜಿಲ್ಲೆ ಹಿಂದುಳಿದಿದೆ. ರಾಜ್ಯ ಮಟ್ಟದ ಸಭೆಗಳಲ್ಲಿ ಅಧಿಕಾರಿಗಳು ಕೋಲಾರ ಜಿಲ್ಲೆಯ ಹೆಸರು ಹೇಳಿದರೆ ಏನು ಉತ್ತರ ಕೊಡಬೇಕೆಂದು ತಿಳಿಯುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.