ಶುಕ್ರವಾರ, ಸೆಪ್ಟೆಂಬರ್ 24, 2021
21 °C
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ನಾಗಾನಂದ ಕೆಂಪರಾಜ್‌ ಮಾಹಿತಿ

ಕೋಲಾರ: 27ಕ್ಕೆ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ‘ಜಿಲ್ಲಾ ಕೇಂದ್ರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಜ.27ಮತ್ತು 28ರಂದು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಸಮ್ಮೇಳನದ ಯಶಸ್ಸಿಗೆ ಎಲ್ಲರೂ ಸಹಕರಿಸಬೇಕು’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಗಾನಂದ ಕೆಂಪರಾಜ್ ಮನವಿ ಮಾಡಿದರು.

ಇಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಸಾಹಿತಿ ವಿ.ಮುನಿವೆಂಕಟಪ್ಪ ಅವರನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಅವರ ಅಧ್ಯಕ್ಷತೆಯಲ್ಲಿ ಎರಡೂ ದಿನ ಜಿಲ್ಲೆಯ ಮತ್ತು ನಾಡಿನ ವಿಚಾರಗಳು, ಸಮಸ್ಯೆಗಳ ಬಗ್ಗೆ ವಿಚಾರಗೋಷ್ಠಿಗಳು ನಡೆಯಲಿವೆ’ ಎಂದರು.

‘ಸಮ್ಮೇಳನದ ಮಹಾದ್ವಾರಕ್ಕೆ ಶತಶೃಂಗ ಪರ್ವತ ಮಹಾದ್ವಾರವೆಂದು ಹಾಗೂ ವೇದಿಕೆಗೆ ಕನ್ನಡ ಹೋರಾಟಗಾರ ಚಿಕ್ಕಹನುಮಪ್ಪ ಅವರ ಹೆಸರಿಡಲಾಗಿದೆ. ಕೋವಿಡ್‌ ಹಿನ್ನೆಲೆಯಲ್ಲಿ ಸಮ್ಮೇಳನವನ್ನು ಸರಳವಾಗಿ ಆಚರಿಸಲಾಗುತ್ತಿದೆ. ಮೊದಲ ದಿನ ಬಂಗಾರಪೇಟೆ ವೃತ್ತದಲ್ಲಿನ ಅಂಬೇಡ್ಕರ್, ಗಾಂಧೀಜಿ ಹಾಗೂ ಸರ್ವಜ್ಞರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿದ ನಂತರ ಸಮ್ಮೇಳನಾಧ್ಯಕ್ಷರನ್ನು ವೇದಿಕೆಗೆ ಕರೆತರಲಾಗುವುದು. ಕರೊನಾ ಹಿನ್ನೆಲೆಯಲ್ಲಿ ಮೆರವಣಿಗೆ ಇರುವುದಿಲ್ಲ’ ಎಂದು ಮಾಹಿತಿ ನೀಡಿದರು.

‘ಕರ್ನಾಟಕ ಸಾಹಿತ್ಯ ಅಕಾಡಮಿ ಅಧ್ಯಕ್ಷ ಬಿ.ವಿ.ವಸಂತಕುಮಾರ್ ಸಮ್ಮೇಳನ ಉದ್ಘಾಟಿಸುತ್ತಾರೆ. ಸಮ್ಮೇಳನಾಧ್ಯಕ್ಷರ ‘ಬಹುಜನ ಚರಿತ್ರೆ’, ಕಾ.ಹು.ಚಾನ್‌ಪಾಷಾ ಅವರ ‘ಸಲೀಂರ ಕತೆಗಳು, ರವೀಂದ್ರ ಅವರ ‘ಯಕ್ಷ ಪ್ರಸಂಗ’ ಕೃತಿಗಳನ್ನು ಸಮ್ಮೇಳನ ಬಿಡುಗಡೆ ಮಾಡಲಾಗುತ್ತದೆ’ ಎಂದು ತಿಳಿಸಿದರು.

‘ಸಮ್ಮೇಳನದಲ್ಲಿ ವಿಚಾರಗೋಷ್ಠಿಗಳಿಗೆ ವಿಶೇಷ ಒತ್ತು ನೀಡಲಾಗಿದೆ. ಜಿಲ್ಲೆಯ ಕೃಷಿ ಸಂಸ್ಕೃತಿ ಕುರಿತು ಗೋಷ್ಠಿ ನಡೆಯಲಿದೆ. ರೈತ ಸಂಘಟನೆಗಳ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ‘ನವ ಮಾಧ್ಯಮದಲ್ಲಿ ದಲಿತ ಸಾಹಿತ್ಯ’ ಕುರಿತು ಉಪನ್ಯಾಸ, ಸನ್ಮಾನ, ವಾದ್ಯಗೋಷ್ಠಿ, ಗಿರೀಶ್ ಕಾರ್ನಾಡ್‌ರ ರಚನೆಯ ತುಘಲಕ್ ನಾಟಕ ಪ್ರದರ್ಶನ ನಡೆಯಲಿದೆ’ ಎಂದು ಹೇಳಿದರು.

ಸಮ್ಮೇಳನದ 2ನೇ ದಿನ ಸಮ್ಮೇಳನ ಅಧ್ಯಕ್ಷರೊಂದಿಗೆ ಸಂವಾದ, ವಿಚಾರಗೋಷ್ಠಿ, ಕವಿಗೋಷ್ಠಿ ನಡೆಯಲಿದೆ. ಜಿಲ್ಲೆಯ ಆಹಾರ ತಜ್ಞ ಆರ್.ರಾಜಶೇಖರ್ ಅವರ ವಿಶೇಷ ಉಪನ್ಯಾಸವಿದೆ. ಸಂಜೆ ಸಮಾರೋಪ ಸಮಾರಂಭ ನಡೆಯಲಿದೆ. ಕೇಂದ್ರ ಕನ್ನಡ ಸಾಹಿತ್ಯ ಪರಿಷತ್‌ ಗೌರವ ಕಾರ್ಯದರ್ಶಿ ಕೆ.ರಾಜಕುಮಾರ್ ಸಮಾರೋಪ ಭಾಷಣ ಮಾಡುತ್ತಾರೆ. ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಗುವುದು’ ಎಂದರು.

ಮೊದಲ ಸ್ಥಾನ: ‘ಈ ವರ್ಷ 6 ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಿ ಜಿಲ್ಲಾ ಸಮ್ಮೇಳನ ನಡೆಸುತ್ತಿರುವ ಕೋಲಾರ ಜಿಲ್ಲೆಯು ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ. ನಾನು ಪರಿಷತ್ತಿನ ಅಧ್ಯಕ್ಷನಾಗುವುದಕ್ಕೂ ಮುನ್ನ ಸದಸ್ಯತ್ವ ಸಂಖ್ಯೆ 3,700 ಇತ್ತು. ನನ್ನ ಅವಧಿಯಲ್ಲಿ 6,200 ಸದಸ್ಯರನ್ನು ನೋಂದಾಯಿಸಲಾಗಿದೆ. ಪ್ರಸ್ತುತ 10,100 ಸದಸ್ಯರಿದ್ದಾರೆ. ಮೇ ವೇಳೆಗೆ ಸದಸ್ಯರ ಸಂಖ್ಯೆ 10,500 ಆಗಬಹುದು’ ಎಂದು ಮಾಹಿತಿ ನೀಡಿದರು.

‘ಸಮ್ಮೇಳನದಲ್ಲಿ ಭಾಗವಹಿಸುವ ಪ್ರಾಥಮಿಕ, ಪ್ರೌಢ ಶಾಲೆ ಶಿಕ್ಷಕರು ಹಾಗೂ ಪಿಯುಸಿ ಉಪನ್ಯಾಸಕರಿಗೆ ಒಒಡಿ ಸೌಲಭ್ಯವಿದೆ. ಸಮ್ಮೇಳನದ ನೋಂದಣಿ ಶುಲ್ಕ ₹ 50 ಇದ್ದು, 400 ಮಂದಿಗಷ್ಟೇ ಸೀಮಿತಗೊಳಿಸಲಾಗಿದೆ. ರಂಗಮಂದಿರ ಮುಂಭಾಗದ ರಸ್ತೆ ಅಗಲೀಕರಣ ನಡೆಯುತ್ತಿರುವುದರಿಂದ ಜಿಲ್ಲೆಯ ಪುಸ್ತಕ ಮಳಿಗೆಗಳಿಗೆ ಮಾತ್ರ ಆದ್ಯತೆ ನೀಡಲಾಗಿದೆ. ಹಾಲಿಸ್ಟರ್ ಭವನದಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ’ ಎಂದು ವಿವರಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಕಾರ್ಯದರ್ಶಿಗಳಾದ ಎಂ.ಆರ್.ವೆಂಕಟಸ್ವಾಮಿ, ಆರ್.ಅಶ್ವತ್ಥ್, ಕೋಶಾಧ್ಯಕ್ಷ ರತ್ನಪ್ಪ ಮೇಲಾಗಾಣಿ, ತಾಲ್ಲೂಕು ಗೌರವಾಧ್ಯಕ್ಷ ಕೆ.ಎನ್.ಪರಮೇಶ್ವರನ್, ಗೌರವ ಕಾರ್ಯದರ್ಶಿ ಮುರಳಿ ಮೋಹನ್, ನಗರಾಧ್ಯಕ್ಷ ಬಿ.ಶಿವಕುಮಾರ್ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು