ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ; 47 ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ

Published 27 ನವೆಂಬರ್ 2023, 13:51 IST
Last Updated 27 ನವೆಂಬರ್ 2023, 13:51 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಸ್ಪರ್ಧಾ ಕಾರ್ಯಕ್ರಮದಲ್ಲಿ ಸೋಮವಾರ 282 ವಿದ್ಯಾರ್ಥಿಗಳು ಪಾಲ್ಗೊಂಡು ಗಮನ ಸೆಳೆದರು. 36 ಸ್ಪರ್ಧಾ ಪ್ರಕಾರಗಳು ನಡೆದವು.

ಜಾನಪದ ಗೀತೆ, ಅಭಿನಯ ಗೀತೆ, ಭಾವಗೀತೆ, ಮಣ್ಣಿನ ಕಲಾಕೃತಿ ನಿರ್ಮಾಣ, ರಸಪ್ರಶ್ನೆ, ಕಂಠಪಾಠ, ಭಾಷಣ, ಛದ್ಮವೇಶ, ಧಾರ್ಮಿಕ ಪಠಣ, ಚಿತ್ರಕಲೆ, ರಂಗೋಲಿ, ಚರ್ಚಾ ಸ್ಪರ್ಧೆಗಳಲ್ಲಿ ಪಾಲ್ಗೊಂಡು ತಮ್ಮ ಪ್ರತಿಭೆ ಪ್ರದರ್ಶಿಸಿದರು. 47 ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾದರು.

ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಶಾಲಾ ಶಿಕ್ಷಣ ಇಲಾಖೆಯಿಂದ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮಕ್ಕೆ‌ ವಿಧಾನ ಪರಿಷತ್ ಸದಸ್ಯರಾದ ಇಂಚರ ಗೋವಿಂದರಾಜು ಹಾಗೂ ಎಂ.ಎಲ್‌.ಅನಿಲ್‌ ಕುಮಾರ್‌ ಚಾಲನೆ ನೀಡಿದರು.

ರಂಗಮಂದಿರದಲ್ಲಿ ಅಲ್ಲದೇ, ಪಕ್ಕದ ಮೆಥೋಡಿಸ್ಟ್ ಶಾಲೆಯ 63 ಕೊಠಡಿಗಳಲ್ಲಿ ವಿವಿಧ ಸ್ಪರ್ಧೆಗಳು ನಡೆದವು. 108 ಮಂದಿ ತೀರ್ಪುಗಾರರು ಪಾಲ್ಗೊಂಡು ಉತ್ತಮ ಪ್ರದರ್ಶನ ನೀಡಿದ ಮಕ್ಕಳನ್ನು ಆಯ್ಕೆ ಮಾಡಿದರು.

ಇಂಚರ ಗೋವಿಂದರಾಜು ಮಾತನಾಡಿ, ‘ಪ್ರತಿಭಾ ಕಾರಂಜಿ ಸ್ಪರ್ಧೆಗಳಿಂದ ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಅನಾವರಣಗೊಳ್ಳಲು ಅವಕಾಶ ಸಿಗುತ್ತದೆ. ಮಕ್ಕಳನ್ನು ಕೇವಲ ಓದಿಗೆ ಸೀಮಿತಗೊಳಿಸದೆ ಅವರಲ್ಲಿನ ಆಸಕ್ತಿಗೆ ತಕ್ಕಂತೆ ಪ್ರೋತ್ಸಾಹ ನೀಡಬೇಕು’ ಎಂದರು.

‘ಪ್ರತಿಭಾ ಕಾರಂಜಿ ಹೆಸರೇ ಸೂಚಿಸುವಂತೆ ಮಕ್ಕಳಲ್ಲಿನ ಪ್ರತಿಭೆ ಚಿಲುಮೆಯಂತೆ ಹೊರ ಚಿಮ್ಮಲಿ, ನಮ್ಮ ಸಂಸ್ಕೃತಿ, ಸಂಪ್ರದಾಯ, ಸಂಸ್ಕಾರ ಎತ್ತಿಹಿಡಿಯುವ ಕಲೆಗಳಿಗೂ ಪ್ರೋತ್ಸಾಹ ನೀಡಿ. ಮಕ್ಕಳಲ್ಲಿ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು ಸಮಗ್ರ ಶಿಕ್ಷಣದ ಭಾಗವಾಗಲಿ’ ಎಂದು ಹೇಳಿದರು.

ಎಂ.ಎಲ್.ಅನಿಲ್‍ಕುಮಾರ್‌ ಮಾತನಾಡಿ, ‘ಸರ್ಕಾರಿ ಶಾಲೆಗಳ ಕುರಿತು ಕೀಳರಿಮೆ ಹೋಗಲಾಡಿಸಲು ಶಿಕ್ಷಕರ ಪ್ರಯತ್ನ ಅಗತ್ಯವಿದೆ. ಸರ್ಕಾರಿ ಶಾಲೆಗಳಲ್ಲಿ ಓದಿದವರೇ ದೇಶದ ಸಾಧಕರು ಎಂಬುದನ್ನು ತಳ್ಳಿಹಾಕಲಾಗದು. ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆ ಹೊರತನ್ನಿ, ರಾಜ್ಯಮಟ್ಟದಲ್ಲೂ ಕೋಲಾರ ಜಿಲ್ಲೆ ಮಕ್ಕಳು ಸಾಧನೆ ಮಾಡಿ ಕೀರ್ತಿ ತನ್ನಿ’ ಎಂದು ಹಾರೈಸಿದರು.

‘ಪ್ರತಿಭಾ ಕಾರಂಜಿಯನ್ನು 2000ನೇ ಇಸವಿಯಲ್ಲಿ ಆರಂಭಿಸುವ ಮೂಲಕ ಮಕ್ಕಳ ಪ್ರತಿಭೆಗೆ ವೇದಿಕೆ ಕಲ್ಪಿಸಿರುವ ಅಂದಿನ ಸರ್ಕಾರ ಹಾಗೂ ಶಿಕ್ಷಣ ಸಚಿವರ ದೂರದೃಷ್ಟಿ ಮೆಚ್ಚುವಂತದ್ದು. ಇದು ಗ್ರಾಮೀಣ ಮಕ್ಕಳಲ್ಲಿನ ಜಾನಪದ ಕಲೆಗಳು ಹೊರಬರಲು ಉತ್ತಮ ವೇದಿಕೆಯಾಗಲಿ’ ಎಂದರು.

ಡಿಡಿಪಿಐ ಕೃಷ್ಣಮೂರ್ತಿ ಮಾತನಾಡಿ, ‘23 ವರ್ಷಗಳ ಹಿಂದೆ ಪ್ರತಿಭಾ ಕಾರಂಜಿ ಆರಂಭವಾಯಿತು. ಕ್ಲಸ್ಟರ್ ಹಂತದಲ್ಲಿ ಆಯ್ಕೆಯಾದವರು ತಾಲ್ಲೂಕು ಹಂತಕ್ಕೆ ಮತ್ತು ನಂತರ ತಾಲ್ಲೂಕು ಹಂತದಲ್ಲಿ ಆಯ್ಕೆಯಾದವರು ಜಿಲ್ಲಾ ಹಂತಕ್ಕೆ ಬಂದಿದ್ದಾರೆ.ಈ ಮಕ್ಕಳು ರಾಜ್ಯಮಟ್ಟದಲ್ಲೂ ಉತ್ತಮ ಸಾಧನೆ ಮಾಡಿ ಜಿಲ್ಲೆಗೆ ಕೀರ್ತಿ ತರಲಿ’ ಎಂದು ಆಶಿಸಿದರು.

ಪ್ರತಿಭಾ ಕಾರಂಜಿ ನೋಡಲ್ ಅಧಿಕಾರಿ ಜಿ.ಆರ್.ಶಂಕರೇಗೌಡ ಸ್ವಾಗತಿಸಿದರು. ಡಯಟ್ ಹಿರಿಯ ಉಪನ್ಯಾಸಕ ಸಿ.ಆರ್.ಅಶೋಕ್, ಖಾಸಗಿ ಶಾಲೆಗಳ ರೂಪ್ಸಾ ಉಪಾಧ್ಯಕ್ಷ ಎಸ್.ಮುನಿಯಪ್ಪ, ಬಿಇಒ ಕನ್ನಯ್ಯ, ಬಿಆರ್‌ಸಿ ಪ್ರವೀಣ್, ವಿಷಯ ಪರಿವೀಕ್ಷಕರಾದ ಗಾಯತ್ರಿ, ಶಶಿವಧನ, ಕೃಷ್ಣಪ್ಪ, ವೆಂಕಟೇಶಬಾಬು, ಜಿಲ್ಲಾ ಹಿಂದಿ ಸಹಶಿಕ್ಷಕರ ಸಂಘದ ಅಧ್ಯಕ್ಷ ಎ.ಬಿ.ರಾಮಕೃಷ್ಣಪ್ಪ, ಖಾಸಗಿ ಶಾಲೆಗಳ ಸಂಘದ ಪಾಲ್ಗುಣ, ಸ್ಕೌಟ್‌ ಬಾಬು, ವಿವಿಧ ಶಿಕ್ಷಕ ಸಂಘಟನೆಗಳ ಶರಣಪ್ಪ, ಸುರೇಶ್‍ಕುಮಾರ್, ರಾಜಣ್ಣ ಇದ್ದರು.

ಶಾಲಾ ಶಿಕ್ಷಣ ಇಲಾಖೆಯಿಂದ ಆಯೋಜನೆ 282 ಮಕ್ಕಳು ಭಾಗಿ; 36 ಸ್ಪರ್ಧೆ, 108 ಮಂದಿ ತೀರ್ಪುಗಾರರು ಮಕ್ಕಳನ್ನು ಓದಿಗೆ ಸೀಮಿತಗೊಳಿಸದಿರಿ–ಎಂಎಲ್‌ಸಿ
ಯುವ ಜನತೆ ಮಾದಕ ವಸ್ತುಗಳ ದಾಸರಾಗಿ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆ. ನಿರಂತರವಾಗಿ ಜಾಗೃತಿ ಕಾರ್ಯಕ್ರಮಗಳ ಅಗತ್ಯವಿದೆ
ಎಂ.ಎಲ್‌.ಅನಿಲ್‌ ಕುಮಾರ್‌ ವಿಧಾನ ಪರಿಷತ್‌ ಸದಸ್ಯ
‘ಪತ್ರಿಕೆ ಓದು–ಸುತ್ತೋಲೆ ಹೊರಡಿಸಿ’
‘ಸಾಧಕರ ಕುರಿತು ಅರಿಯಲು ಹಾಗೂ ಜ್ಞಾನಾರ್ಜನೆಗಾಗಿ ಮಕ್ಕಳಲ್ಲಿ ಪತ್ರಿಕೆ ಓದುವ ಅಭ್ಯಾಸ ಬೆಳೆಸಿ. ನಿತ್ಯ ಶಾಲೆಗಳಲ್ಲಿ ಪ್ರಾರ್ಥನೆಯ ಸಂದರ್ಭದಲ್ಲಿ ಕಡ್ಡಾಯವಾಗಿ ಪತ್ರಿಕೆಯ ಮುಖ್ಯಾಂಶಗಳು ಕ್ರೀಡಾ ಸಾಂಸ್ಕೃತಿಕ ಸಾಧಕರ ಮಾಹಿತಿಯನ್ನು ಓದಿ ತಿಳಿಸಲು ಸುತ್ತೋಲೆ ಹೊರಡಿಸಿ’ ಎಂದು ವಿಧಾನ ಪರಿಷತ್‌ ಸದಸ್ಯ ಇಂಚರ ಗೋವಿಂದರಾಜು ಡಿಡಿಪಿಐಗೆ ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT