ಶನಿವಾರ, ಜನವರಿ 25, 2020
19 °C
ಚಿಂತನಾ ಮಂಥನದಲ್ಲಿ ಸಾಹಿತಿ ಚಂದ್ರಶೇಖರ ನಂಗಲಿ ಕಳವಳ

ಭವಿಷ್ಯದಲ್ಲಿ ಮರು ಭೂಮಿಯಾಗುವ ಜಿಲ್ಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಬರಪೀಡಿತ ಕೋಲಾರ ಜಿಲ್ಲೆಯು ಭವಿಷ್ಯದಲ್ಲಿ ಮರುಭೂಮಿಯಾಗುವ ಅಪಾಯವಿದೆ’ ಎಂದು ಸಾಹಿತಿ ಚಂದ್ರಶೇಖರ ನಂಗಲಿ ಆತಂಕ ವ್ಯಕ್ತಪಡಿಸಿದರು.

ಜಿಲ್ಲಾ ಪ್ರಗತಿಪರ ಮತ್ತು ಸಮಾನ ಮನಸ್ಕ ಚಿಂತಕರ ವೇದಿಕೆಯು ಇಲ್ಲಿ ಶನಿವಾರ ಹಮ್ಮಿಕೊಂಡಿದ್ದ ಚಿಂತನಾ ಮಂಥನ ಕಾರ್ಯಕ್ರಮದಲ್ಲಿ ಮಾತನಾಡಿ, ‘ಕೆಂಪು ವಲಯದಲ್ಲಿರುವ ಜಿಲ್ಲೆಯು ಮುಂದೆ ಮರುಭೂಮಿಯಾಗಲಿದೆ ಎಂದು ವಿಜ್ಞಾನಿಗಳು ಗುರುತಿಸಿದ್ದಾರೆ’ ಎಂದು ಹೇಳಿದರು.

‘ಕಲೆ ಮತ್ತು ಕ್ರೀಡೆಯು ಮನುಷ್ಯನ ಅಂತರಂಗದ ಕಣ್ಣುಗಳು. ಈ ಕಣ್ಣುಗಳು ಮುಚ್ಚಿರುವುದರಿಂದ ಸಂಕುಚಿತ ಮನೋಭಾವ ಬೆಳೆದಿದೆ. ಕಲೆಯು ಆತ್ಮದ ಮೇವು ಮತ್ತು ಕ್ರೀಡೆಯು ಒಡಲಿನ ಕಾವು. ಬಾಯ್ಲರ್‌ ಕೋಳಿಗಳಂತೆ ಬೆಳೆಯುತ್ತಿರುವ ಈಗಿನ ಮಕ್ಕಳಿಗೆ ಹಳ್ಳಿಗಾಡಿನ ಸ್ಪರ್ಶವೇ ಇಲ್ಲ. ಮಕ್ಕಳು ಸಮುದಾಯದ ಸಂಬಂಧ ಕಡಿದುಕೊಂಡು ಪ್ರತ್ಯೇಕ ದ್ವೀಪದಂತೆ ಆಗುತ್ತಿದ್ದಾರೆ. ಇದು ಅಪಾಯಕಾರಿ ಬೆಳವಣಿಗೆ’ ಎಂದು ವಿಷಾದಿಸಿದರು.

‘ಮರ ಗಿಡಗಳಿದ್ದ ಜಾಗದಲ್ಲಿ ಗಗನಚುಂಬಿ ಕಟ್ಟಡಗಳು ತಲೆ ಎತ್ತಿವೆ. ಉಸಿರಾಟಕ್ಕೆ ಶುದ್ಧ ಗಾಳಿ ಸಿಗುತ್ತಿಲ್ಲ. ಶುದ್ಧ ಗಾಳಿಗೆ ಆಮ್ಲಜನಕದ ಬಾರ್‌ ತೆಗೆಯಲು ಸಾಧ್ಯವೇ? ಜನ ಜಾಗೃತರಾಗಿ ಮುಂದಿನ ಪೀಳಿಗೆಗೆ ಹಸಿರು ವಾತಾವರಣ ಸೃಷ್ಟಿಸಬೇಕು. ಮಕ್ಕಳಲ್ಲಿ ಹಸಿರು ಪ್ರಜ್ಞೆ ಮೂಡಿಸಬೇಕು. ಜಿಲ್ಲೆಯಲ್ಲಿ ಹಸಿರೀಕರಣದ ಆಂದೋಲನ ನಡೆಯಬೇಕು’ ಎಂದು ಕಿವಿಮಾತು ಹೇಳಿದರು.

‘ಪರಿಸರ ಕೇಂದ್ರಿತ ಚಟುವಟಿಕೆ ನಡೆಸಬೇಕು. ಗುಂಡು ತೋಪುಗಳು ಹೆಚ್ಚಬೇಕು. ಮಕ್ಕಳಲ್ಲಿ ವ್ಯವಸ್ಥೆ ವಿರುದ್ಧ ಧ್ವನಿ ಎತ್ತುವ ಗುಣ ಬೆಳೆಸಬೇಕು. ಜನ ಸಂಕುಚಿತ ಸ್ವಭಾವ ಬದಿಗಿಟ್ಟು ದೂರದೃಷ್ಟಿಯಿಂದ ಜಿಲ್ಲೆಯನ್ನು ಅಭಿವೃದ್ಧಿಪಡಿಸಬೇಕು’ ಎಂದು ಸಲಹೆ ನೀಡಿದರು.

ದೊಡ್ಡ ಕೊಳೆಗೇರಿ: ‘ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ತುಂಬಾ ಹಿಂದುಳಿದಿರುವ ಕೋಲಾರ ಜಿಲ್ಲೆಯು ತೀವ್ರ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಇದಕ್ಕೆ ಬೇಜವಾಬ್ದಾರಿ ಜನಪ್ರತಿನಿಧಿಗಳು ಮುಖ್ಯ ಕಾರಣ. ಜಿಲ್ಲೆಯಲ್ಲಿ ಅಭಿವೃದ್ಧಿ ಸಂಪೂರ್ಣ ಕುಂಠಿತಗೊಂಡಿದ್ದು, ಕೋಲಾರ ದೊಡ್ಡ ಕೊಳೆಗೇರಿಯಂತಾಗಿದೆ’ ಎಂದು ಹೈಕೋರ್ಟ್‌ ವಕೀಲ ಎಂ.ಶಿವಪ್ರಕಾಶ್ ಕಿಡಿಕಾರಿದರು.

‘ಜಿಲ್ಲಾ ಕೇಂದ್ರದ ಅಭಿವೃದ್ಧಿಗಾಗಿ ರಚನೆಯಾಗಿರುವ ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರ ಸತ್ತಿದೆ. ಪ್ರಾಧಿಕಾರವು ಈವರೆಗೆ ಒಂದೇ ಒಂದು ಸುಸಜ್ಜಿತ ಲೇಔಟ್‌ ನಿರ್ಮಾಣ ಮಾಡಿಲ್ಲ. ಪ್ರಾಧಿಕಾರದ ಅಧ್ಯಕ್ಷರಾದವರು ಗೂಟದ ಕಾರಿನಲ್ಲಿ ಓಡಾಡಿದ್ದೆ ದೊಡ್ಡ ಸಾಧನೆ’ ಎಂದು ಟೀಕಿಸಿದರು.

‘ನಗರದ ಸುತ್ತಮುತ್ತ 50ಕ್ಕೂ ಹೆಚ್ಚು ಖಾಸಗಿ ಲೇಔಟ್‌ ನಿರ್ಮಾಣವಾಗಿವೆ. ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಖಾಸಗಿ ಲೇಔಟ್‌ ಮಾಲೀಕರಿಂದ ಲಂಚ ಪಡೆದು ಜೇಬು ತುಂಬಿಸಿಕೊಳ್ಳುತ್ತಿದ್ದಾರೆ. ಪ್ರಾಧಿಕಾರ ನಿರ್ಮಿಸಿದ ಅರಸು ಬಡಾವಣೆಯಲ್ಲಿ ಕನಿಷ್ಠ ಮೂಲಸೌಕರ್ಯಗಳಿಲ್ಲ. ನಗರದ ಅಭಿವೃದ್ಧಿ ವಿಚಾರದಲ್ಲಿ ನಗರಸಭೆ ಸಹ ವಿಫಲವಾಗಿದೆ. ನಗರಸಭಾ ಸದಸ್ಯರು ಜನಸೇವೆ ಮರೆತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವನ್ಯಜೀವಿ ತಜ್ಞ ತ್ಯಾಗರಾಜ್‌, ಬೆಮಲ್‌ ನಿವೃತ್ತ ನೌಕರ ಜಯಸಿಂಹ ಹಾಗೂ ಹಿರಿಯ ನಾಗರಿಕರು ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು