ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರ ಬೇಡ: ಜನಸೇವೆ ಅವಕಾಶ ಸಾಕು

ಉಮ್ರಾ ಚಾರಿಟಬಲ್‌ ಪ್ರತಿಷ್ಠಾನದ ಅಧ್ಯಕ್ಷ ಕೆಜಿಎಫ್ ಬಾಬು ಹೇಳಿಕೆ
Last Updated 21 ಸೆಪ್ಟೆಂಬರ್ 2021, 14:14 IST
ಅಕ್ಷರ ಗಾತ್ರ

ಕೋಲಾರ: ‘ಬಡ ಜನರ ಕಷ್ಟಕ್ಕೆ ಸ್ಪಂದಿಸಿ ಕೈಲಾದ ಸಹಾಯ ಮಾಡುವ ಸದುದ್ದೇಶಕ್ಕೆ ಕ್ಷೇತ್ರಕ್ಕೆ ಬಂದಿದ್ದೇನೆ. ನನ್ನ ಸೇವೆ ಹಿಂದೆ ರಾಜಕೀಯ ಲಾಭದ ಉದ್ದೇಶವಿಲ್ಲ’ ಎಂದು ಉಮ್ರಾ ಚಾರಿಟಬಲ್‌ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಸಮಾಜ ಸೇವಕ ಕೆಜಿಎಫ್ ಬಾಬು ಹೇಳಿದರು.

ಉಮ್ರಾ ಚಾರಿಟಬಲ್‌ ಪ್ರತಿಷ್ಠಾನದ ವತಿಯಿಂದ ಇಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಆಲ್‌ ಅಮೀನ್‌ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ವಿದ್ಯಾ ಪ್ರೋತ್ಸಾಹಧನ ವಿತರಿಸಿ ಮಾತನಾಡಿದರು.

‘ಯಾವುದೇ ಸ್ವಾರ್ಥವಿಲ್ಲದೆ ಎಲ್ಲಾ ಜಾತಿ, ವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಧನಸಹಾಯ ಮಾಡುತ್ತಿದ್ದೇನೆ. ನಾನು ಓದುವಾಗ ಆರ್ಥಿಕವಾಗಿ ತುಂಬಾ ಸಮಸ್ಯೆ ಎದುರಿಸಿದ್ದೆ. ಅಂತಹ ಕಷ್ಟ ವಿದ್ಯಾರ್ಥಿಗಳಿಗೆ ಬರಬಾರದೆಂದು ಕೈಲಾದ ಸಹಾಯ ಮಾಡುತ್ತಿದ್ದೇನೆ. ರಾಜಕೀಯ ಪ್ರವೇಶಿಸಿ ಶಾಸಕ ಅಥವಾ ಸಂಸದನಾಗುವ ಆಸೆಯಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಮೊದಲ ಹಂತದಲ್ಲಿ ತಾಲ್ಲೂಕಿನ 20 ಸಾವಿರ ವಿದ್ಯಾರ್ಥಿಗಳಿಗೆ ತಲಾ 2 ಸಾವಿರ ಪ್ರೋತ್ಸಾಹಧನ ನೀಡುತ್ತಿದ್ದೇನೆ. ಎರಡನೇ ಹಂತದಲ್ಲಿ ವಿದ್ಯಾರ್ಥಿಗಳಿಗೆ ಮತ್ತೆ ₹ 2 ಸಾವಿರ ಆರ್ಥಿಕ ನೆರವು ನೀಡುತ್ತೇನೆ. ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನವಾಗಿ ಒಟ್ಟಾರೆ ₹ 8 ಕೋಟಿ ಕೊಡುತ್ತೇನೆ’ ಎಂದು ಭರವಸೆ ನೀಡಿದರು.

‘ಕೋವಿಡ್‌ ಕಾರಣಕ್ಕೆ ತಾಲ್ಲೂಕಿನ ಜನರು ಸಂಕಷ್ಟದಲ್ಲಿದ್ದು, ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಆರ್ಥಿಕ ನೆರವು ನೀಡುತ್ತಿದ್ದೇನೆ. ಮುಂದೆ ಮತದಾರರ ಪಟ್ಟಿಯಲ್ಲಿನ ಪ್ರತಿ ವ್ಯಕ್ತಿಗೆ ಆಧಾರ್ ಕಾರ್ಡ್ ಮಾಹಿತಿ ಆಧರಿಸಿ ತಲಾ ₹ 2 ಸಾವಿರ ನೆರವನ್ನು ಪ್ರತಿ ಮನೆಗೆ ತಲುಪಿಸುತ್ತೇವೆ. ಈ ಉದ್ದೇಶಕ್ಕಾಗಿ ₹ 20 ಕೋಟಿ ವೆಚ್ಚವಾಗಲಿದೆ. ನಾನು ಜೀವಂತ ಇರುವವರೆಗೂ ಸೇವಾ ಕಾರ್ಯ ಮುಂದುವರಿಸುತ್ತೇನೆ’ ಎಂದು ಘೋಷಿಸಿದರು.

ಅಧಿಕಾರ ಬೇಡ: ‘ಹಿಂದೂ, ಮುಸ್ಲಿಂ ಎಂಬ ಭೇದ ಭಾವವಿಲ್ಲದೆ ನಾವೆಲ್ಲಾ ಒಂದೇ ಎಂಬ ಭಾವನೆಯೊಂದಿಗೆ ಜನರ ಸೇವೆ ಮಾಡುತ್ತಿದ್ದೇನೆ. ನಾವೆಲ್ಲ ಭಾರತೀಯರು ಎಂಬ ಭಾವನೆಯನ್ನು ಜನರಲ್ಲಿ ಬಲಗೊಳ್ಳಬೇಕು. ನನ್ನ ಸೇವಾ ಕಾರ್ಯ ಮತ್ತೊಬ್ಬರಿಗೆ ಪ್ರೇರಣೆಯಾಗಿ ಅವರು ಜನಸೇವೆಗೆ ಮುಂದೆ ಬರಬೇಕು. ನನಗೆ ಯಾವುದೇ ಅಧಿಕಾರ ಬೇಡ. ಜನರ ಸೇವೆ ಮಾಡಲು ಸಿಕ್ಕಿರುವ ಅವಕಾಶ ಮಾತ್ರ ಸಾಕು’ ಎಂದರು.

‘ಕೆಜಿಎಫ್‌ ಬಾಬು ಅವರು ವಿದ್ಯಾರ್ಥಿಗಳಿಗೆ ಮಾಡುತ್ತಿರುವ ಸೇವೆ ಶ್ಲಾಘನೀಯ. ಕ್ಷೇತ್ರದ ಅಭಿವೃದ್ಧಿಯ ಕನಸು ಕಂಡಿರುವ ಅವರಿಗೆ ನಾವು ಬೆಂಬಲವಾಗಿರುತ್ತೇವೆ. ಆರ್ಥಿಕ ಸ್ಥಿತಿವಂತರು ಬಾಬು ಅವರಂತೆ ಬಡ ಜನರಿಗೆ ನೆರವಾಗಬೇಕು’ ಎಂದು ದಲಿತ ಮುಖಂಡ ನಾರಾಯಣಸ್ವಾಮಿ ಮನವಿ ಮಾಡಿದರು.

ನಗರಸಭೆ ಮಾಜಿ ಸದಸ್ಯ ಜಾಫರ್, ಅಂಜುಮಾನ್ ಇಸ್ಲಾಮಿಯಾ ಸಂಘಟನೆ ಜಿಲ್ಲಾ ಉಪಾಧ್ಯಕ್ಷ ಇಲಿಯಾಸ್, ಆಲ್ ಅಮೀನ್ ಕಾಲೇಜಿನ ಪ್ರಾಂಶುಪಾಲೆ ಸಲ್ಮಾ, ಜನಪದ ಕಲಾವಿದ ಕೃಷ್ಣ, ವಿವಿಧ ಸಂಘಟನೆಗಳ ಮುಖಂಡರಾದ ಸುರೇಶ್, ಸಫೀರ್ ಅಹಮ್ಮದ್‌, ಶಾಹೀನ್ ತಾಜ್, ಅಫ್ಜರ್‌ ಖಾನ್ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT