ಗುರುವಾರ , ಆಗಸ್ಟ್ 5, 2021
24 °C

ಕೋಲಾರ | ಉಗುಳಿ ಸೋಂಕು ಹರಡಬೇಡಿ: ಕೆಎಸ್ಆರ್‌ಟಿಸಿ ಅಧಿಕಾರಿ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಇಡೀ ಜಗತ್ತನ್ನೇ ಕಾಡುತ್ತಿರುವ ಕೊರೊನಾ ಸೋಂಕು ಉಗುಳಿನಿಂದ ಹರಡುವ ಸಾಧ್ಯತೆ ಹೆಚ್ಚಿರುವುದರಿಂದ ಜನರು ಎಲ್ಲೆಂದರಲ್ಲಿ ಉಗುಳಿ ಸೋಂಕು ಹರಡಲು ಕಾರಣರಾಗಬೇಡಿ’ ಎಂದು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ಎಸ್.ಚಂದ್ರಶೇಖರ್ ಸಲಹೆ ನೀಡಿದರು.

ಸ್ವಾಮಿ ವಿವೇಕಾನಂದ ಯುವ ವೇದಿಕೆ ಹಾಗೂ ಕೆಎಸ್‌ಆರ್‌ಟಿಸಿ ಸಹಯೋಗದಲ್ಲಿ ನಗರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಉಗುಳಬೇಡಿ ಉಗುಳಿ ರೋಗ ಹರಡಬೇಡಿ’ ಅಭಿಯಾನ ಉದ್ಘಾಟಿಸಿ ಮಾತನಾಡಿ, ‘ಆರೋಗ್ಯಕ್ಕೆ ಮಾರಕವಾಗಿರುವ ತಂಬಾಕು ಉತ್ಪನ್ನಗಳನ್ನು ಜಿಗಿದು ಎಲ್ಲೆಂದರಲ್ಲಿ ಉಗುಳಿ ಪರಿಸರ ನಾಶ ಮಾಡಬೇಡಿ’ ಎಂದು ಕಿವಿಮಾತು ಹೇಳಿದರು.

‘ತಂಬಾಕು ಉತ್ಪನ್ನದಿಂದ ತಮ್ಮ ಆರೋಗ್ಯ ಹಾಳು ಮಾಡಿಕೊಂಡು ಇತರರಿಗೂ ರೋಗ ಹರಡುವುದು ಎಷ್ಟು ಸರಿ? ಸಾರ್ವಜನಿಕ ಸಾರಿಗೆ ಜನರ ಸೇವೆಗಾಗಿ ಇದೆ. ಆದರೆ, ಇಲ್ಲಿ ಬರುವ ಪ್ರಯಾಣಿಕರಲ್ಲಿ ಕೆಲವರು ಎಲ್ಲೆಂದರಲ್ಲಿ ಉಗಿಯುವ ಮೂಲಕ ಕೊರೊನಾ ಸೋಂಕು ಹೆಚ್ಚಲು ಕಾರಣವಾಗುತ್ತಿದ್ದಾರೆ. ಇದರ ವಿರುದ್ದ ಸರ್ಕಾರ ಕಠಿಣ ಕಾನೂನು ಜಾರಿಗೆ ತಂದಿದೆ’ ಎಂದು ಹೇಳಿದರು.

‘ಪ್ರತಿಯೊಂದನ್ನೂ ಕಾನೂನಿನಿಂದ ನಿಭಾಯಿಸಲು ಸಾಧ್ಯವಿಲ್ಲ. ಸಮಾಜದಲ್ಲಿ ಬದುಕುತ್ತಿರುವ ಪ್ರತಿಯೊಬ್ಬರಲ್ಲೂ ಸಾಮಾಜಿಕ ಅರಿವು ಇರಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಉಗುಳಿ ಮತ್ತೊಬ್ಬರ ಜೀವಕ್ಕೆ ಕುತ್ತು ತರಬೇಡಿ’ ಎಂದು ಮನವಿ ಮಾಡಿದರು.

ವೇಗವಾಗಿ ಹರಡುತ್ತಿದೆ: ‘ಕೊರೊನಾ ಸೋಂಕು ವೇಗವಾಗಿ ಹರಡುತ್ತಿದೆ. ಸೋಂಕು ತಡೆಯಲು ಪ್ರತಿಯೊಬ್ಬರೂ ಮಾಸ್ಕ್ ಧರಿಸಬೇಕು ಮತ್ತು ಕಡ್ಡಾಯವಾಗಿ ಕೋವಿಡ್ ಮಾರ್ಗಸೂಚಿ ಪಾಲಿಸಬೇಕು’ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಎಂ.ಚಾರಿಣಿ ಹೇಳಿದರು.

‘ಜನರನ್ನು ಕೊರೊನಾ ಸೋಂಕಿನಿಂದ ರಕ್ಷಿಸುವ ಕೆಲಸ ಮಾಡುತ್ತಿರುವ ಕೋವಿಡ್ ವಾರಿಯರ್ಸ್‌ಗೂ ಸೋಂಕು ತಗಲುತ್ತಿರುವುದು ಆತಂಕಕಾರಿ ಬೆಳವಣಿಗೆ. ಜನ ಮಾರುಕಟ್ಟೆ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಗುಂಪು ಸೇರಬಾರದು. ಆರೋಗ್ಯ ಇಲಾಖೆ ಮಾರ್ಗಸೂಚಿ ಪಾಲಿಸಬೇಕು. ಇಲ್ಲವಾದರೆ ಅಪಾಯ ಕಟ್ಟಿಟ್ಟ ಬುತ್ತಿ’ ಎಂದು ಎಚ್ಚರಿಕೆ ನೀಡಿದರು.

ವೇದಿಕೆ ಅಧ್ಯಕ್ಷ ಸ್ಪಂದನ್, ಉಪಾಧ್ಯಕ್ಷ ವರುಣ್, ಕೆಎಸ್‌ಆರ್‌ಟಿಸಿ ವಿಭಾಗೀಯ ಸಂಚಾರ ಅಧಿಕಾರಿ (ಡಿಟಿಒ) ಎಂ.ಬಿ.ಜಯಶಾಂತಕುಮಾರ್, ಘಟಕ ವ್ಯವಸ್ಥಾಪಕ ರಮೇಶ್, ನಿಲ್ದಾಣಾಧಿಕಾರಿ ನಾರಾಯಣಪ್ಪ, ಲಕ್ಷ್ಮಣಮೂರ್ತಿ ಪಾಲ್ಗೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು