ಭಾನುವಾರ, ಮೇ 22, 2022
28 °C
ಗ್ರಾಮೀಣಾಭಿವೃದ್ಧಿ–ಪಂಚಾಯತ್‌ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ಅತೀಕ್ ಹೇಳಿಕೆ

ಮನೆ ಮನೆಗೆ ಕುಡಿಯುವ ನೀರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ದೇಶದೆಲ್ಲೆಡೆ ಜಲಜೀವನ್ ಮಿಷನ್ ಜಾರಿಯಾಗಿದ್ದು, ಈ ಯೋಜನೆ 2024ಕ್ಕೆ ಪೂರ್ಣಗೊಳ್ಳಲಿದೆ. 2024ರೊಳಗೆ ಪ್ರತಿ ಮನೆಗೆ ಕುಡಿಯುವ ನೀರು ಪೂರೈಸಲಾಗುತ್ತದೆ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಕ್ ತಿಳಿಸಿದರು.

ಇಲ್ಲಿ ಮಂಗಳವಾರ ನಡೆದ ಜಲಜೀವನ್ ಮಿಷನ್ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ‘ಜಲಜೀವನ್ ಮಿಷನ್ ಯೋಜನೆಯಡಿ ಪ್ರತಿ ಹಳ್ಳಿಗೆ ಭೇಟಿ ಕೊಟ್ಟು ಜಲ ಮೂಲಗಳನ್ನು ಗುರುತಿಸಿ ಪ್ರತಿ ಮನೆಗೆ ಶುದ್ಧ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲು ಯೋಜನೆ ರೂಪಿಸಿಕೊಳ್ಳಿ’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

‘2019ರಲ್ಲೇ ಜಲಜೀವನ್‌ ಮಿಷನ್ ಆರಂಭವಾಗಿತ್ತು. ಆಗ ಪ್ರತಿ ಗ್ರಾಮಕ್ಕೆ ನೀರು ಒದಗಿಸುವ ಉದ್ದೇಶವಿತ್ತು. ಈಗ ಪ್ರತಿ ಮನೆಗೂ ನಲ್ಲಿ ನೀರು ಒದಗಿಸುವ ಗುರಿ ಹೊಂದಲಾಗಿದೆ. ವರ್ಷದ 365 ದಿನವೂ ನಲ್ಲಿ ನೀರು ಸರಬರಾಜು ಆಗಬೇಕು. ಗ್ರಾಮೀಣ ಭಾಗದಲ್ಲಿ ಜನರ ನೀರಿನ ಬೇಡಿಕೆಗೆ ಅನುಗುಣವಾಗಿ ಕ್ರಿಯಾಯೋಜನೆ ರೂಪಿಸಬೇಕು’ ಎಂದರು.

‘ನೀರು ಮುಗಿದು ಹೋಗುವ ಸಂಪನ್ಮೂಲವಾಗಿದ್ದು, ಮಿತವಾಗಿ ಬಳಸದಿದ್ದರೆ ಮುಂದೆ ಕಷ್ಟದ ದಿನಗಳನ್ನು ಎದುರಿಸಬೇಕಾಗುತ್ತದೆ. ಜಿಲ್ಲೆಯ ನೀರಿನ ಬವಣೆ ನೀಗಿಸಲು ಅನುಸರಿಸಬೇಕಾದ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಮಳೆ ನೀರು ಕೊಯ್ಲು, ಸಸಿ ನಾಟಿ, ಕೆರೆಗಳನ್ನು ತುಂಬಿಸುವುದು, ಕಲ್ಯಾಣಿಗಳಲ್ಲಿ ಹೂಳು ತೆಗೆಸುವ ಪ್ರಕ್ರಿಯೆಯು ಜನಾಂದೋಲನದಂತೆ ನಡೆಯಬೇಕು’ ಎಂದು ಹೇಳಿದರು.

‘ನೀರಿನ ಶುದ್ಧತೆ ಪರೀಕ್ಷಿಸಲು ಗ್ರಾಮ ಪಂಚಾಯಿತಿ ವತಿಯಿಂದ ವಾಲ್‌ಮನ್‌ಗಳಿಗೆ ತರಬೇತಿ ನೀಡಬೇಕು. ವಾಲ್‌ಮನ್‌ಗಳಿಗೆ 6 ಪ್ಯಾರಮೀಟರ್‌ ಪರೀಕ್ಷಿಸಲು ಬರಬೇಕು. ಜಿಲ್ಲೆಗೆ ಕೆ.ಸಿ ವ್ಯಾಲಿ ಯೋಜನೆ ನೀರು ಬರುತ್ತಿರುವುದರಿಂದ ನಿಯಮಿತವಾಗಿ ನೀರಿನ ಗುಣಮಟ್ಟ ಪರೀಕ್ಷಿಸಬೇಕು. ನರೇಗಾ ಯೋಜನೆಯಡಿ ಕಿಚನ್‌ ಗಾರ್ಡನ್, ಆಟದ ಮೈದಾನ, ಶಾಲಾ ಕಾಂಪೌಂಡ್‍ ನಿರ್ಮಿಸಿ. ಉದ್ಯಾನಗಳ ನಿರ್ಮಾಣ ವೆಚ್ಚ ಕಡಿಮೆ ಮಾಡಿ. ಹಸಿರು ಗಿಡಗಳನ್ನು ಹೆಚ್ಚಾಗಿ ಬೆಳಸಿ’ ಎಂದು ಸಲಹೆ ನೀಡಿದರು.
‘ಜಿಲ್ಲೆಯ 156 ಗ್ರಾಮ ಪಂಚಾಯಿತಿಗಳ ಗ್ರಂಥಾಲಯಗಳಲ್ಲಿ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಓದಲು ಉತ್ತಮ ಅವಕಾಶ ಕಲ್ಪಿಸಿ. ಪ್ರತಿ ಗ್ರಂಥಾಲಯಕ್ಕೆ ಓದುವ ಕೊಠಡಿಗಳನ್ನು ಒದಗಿಸಿ. ಗ್ರಂಥಾಲಯಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ಸಿದ್ಧತೆಗೆ ಪೂರಕವಾದ ಪುಸ್ತಕಗಳನ್ನು ಒದಗಿಸಿ' ಎಂದು ತಿಳಿಸಿದರು.

ತ್ಯಾಜ್ಯ ವಿಲೇವಾರಿ ಘಟಕ: ‘ಜಿಲ್ಲೆಯ 156 ಗ್ರಾ.ಪಂಗಳಿಗೆ ಘನ ತ್ಯಾಜ್ಯ ನಿರ್ವಹಣೆಗೆ ಜಾಗ ನೀಡಲಾಗಿದೆ. ಜತೆಗೆ ಘನ ತ್ಯಾಜ್ಯ ವಿಲೇವಾರಿ ಘಟಕಗಳನ್ನು ಸ್ಥಾಪಿಸಲಾಗಿದೆ’ ಎಂದು ಜಿಲ್ಲಾಧಿಕಾರಿ |ಆರ್.ಸೆಲ್ವಮಣಿ ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಉಕೇಶ್ ಕುಮಾರ್, ಉಪ ಕಾರ್ಯದರ್ಶಿ ಸಂಜೀವಪ್ಪ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಗಳು ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.