ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಗಾರಪೇಟೆ | ಬರ: ಮೇವು, ನೀರಿಗೆ ತತ್ತರ

ಮಂಜುನಾಥ ಎಸ್.
Published 1 ಮೇ 2024, 6:07 IST
Last Updated 1 ಮೇ 2024, 6:07 IST
ಅಕ್ಷರ ಗಾತ್ರ

ಬಂಗಾರಪೇಟೆ: ತಾಲ್ಲೂಕಿನಲ್ಲಿ ರಣಬಿಸಿಲು ಬಾಧಿಸುತ್ತಿದ್ದು, ಜನ–ಜಾನುವಾರುಗಳಿಗೆ ಮೇವು, ನೀರಿಗೆ ಆಹಾಕಾರ ಶುರುವಾಗಿದೆ.

ಮಳೆಯಲ್ಲಿದೆ ನೆಲ ಬಿರುಕು ಬಿಟ್ಟಿದ್ದು, ಜಾನುವಾರುಗಳು ಬಿಸಿಲ ತಾಪ ತಾಳಲಾರದೆ ಮರಗಳ ಆಶ್ರಯ ಪಡೆಯುತ್ತಿರುವ ದೃಶ್ಯಗಳು ಕಂಡುಬರುತ್ತಿವೆ. ಬಂಗಾರಪೇಟೆಯು ಈ ಬಾರಿ ಹಿಂಗಾರು ಮತ್ತು ಮುಂಗಾರು ಮಳೆ ಕೈಕೊಟ್ಟಿದ್ದು, ತಾಲ್ಲೂಕಿನ ಪರಿಸ್ಥಿತಿ ಹೇಳತೀರದಾಗಿದೆ.

ಇನ್ನೂ ತಾಪಮಾನ ಏರಿಕೆಯಾಗಿದ್ದು, 30 ರಿಂದ 40 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶ ದಾಖಲಾಗಿದೆ. ಆದರೆ ಬರ ನಿರ್ವಹಣೆ ಮಾಡಬೇಕಾದ ಅಧಿಕಾರಿಗಳಿಗೆ ಬರಗಾಲದ ಬಿಸಿಗಿಂತ ಚುನಾವಣಾ ಬಿಸಿಯಲ್ಲಿದ್ದಾರೆ. ಬರದಿಂದ ಜಾನುವಾರುಗಳು ತತ್ತರಿಸಿದ್ದು, ಕುಡಿಯುವ ನೀರು ಮತ್ತು ಮೇವಿನ ಸಮಸ್ಯೆ ಎದುರಾಗಿದೆ. ತೀವ್ರ ಬರದಿಂದ ಕೆರೆ, ಕುಂಟೆಗಳು ಬತ್ತಿದ್ದು, ಅಂತರ್ಜಲ ಮಟ್ಟ ಕುಸಿದಿದ್ದು ಜಾನುವಾರುಗಳು ಆಹಾರಕ್ಕಾಗಿ ಪರದಾಡುವ ಸ್ಥಿತಿ ಎದುರಾಗಿದೆ. 

ಅಂತರ್ಜಲ ಮಟ್ಟ ಕುಸಿತದಿಂದ ಸಾವಿರಾರು ಅಡಿ ಕೊಳವೆಬಾವಿ ಕೊರೆಸಿದರೂ ನೀರು ಸಿಗುತ್ತಿಲ್ಲ. ಇದರಿಂದ ಜಾನುವಾರುಗಳಿಗೆ ನೀರಿನ ಸಮಸ್ಯೆ ಎದುರಾಗಿದೆ. 

ಕೊಳವೆಬಾವಿ ನಂಬಿ ಕೃಷಿ ಮಾಡುತ್ತಿದ್ದ ರೈತರು ದಿನೇ ದಿನೇ ನೀರಿನ ಮಟ್ಟ ಕುಸಿತವಾಗುತ್ತಿರುವುದರಿಂದ ಪೈಪ್‌ಗಳನ್ನು ಬಿಡುತ್ತಿದ್ದಾರೆ. ಇನ್ನೂ ಕೆಲವರು ಕೆಲಸ ಇಲ್ಲದೆ ಬೆಂಗಳೂರಿಗೆ ವಲಸೆ ಬರುತ್ತಿದ್ದಾರೆ. ಒಂದೆಡೆ ಬಿಸಿಲಿನ ತಾಪವಾದರೆ, ಮತ್ತೊಂದೆಡೆ ಜನ–ಜಾನುವಾರುಗಳಿಗೆ ಅನಾರೋಗ್ಯ ಕಾಡುತ್ತಿದೆ. ಹಾಗಾಗಿ ಮಳೆಗಾಗಿ ರೈತರು ದಿನ ಆಕಾಶದತ್ತ ನೋಡುತ್ತಿದ್ದಾರೆ. 

ಶೀಘ್ರ ಮೇವಿನ ಕಿಟ್ ವಿತರಣೆ

ಬಂಗಾರಪೇಟೆ ತಾಲ್ಲೂಕಿನಲ್ಲಿ ಸಾವಿರಾರು ಜಾನುವಾರುಗಳಿದ್ದು, ಎಲ್ಲಾ ರೀತಿ ಜಾನುವಾರು ಹೊಂದಿರುವ ರೈತರಿಗೆ ಶೀಘ್ರವಾಗಿ ಮೇವಿನ ಕಿಟ್ ವಿತರಿಸಲಾಗುವುದು - ರಾಮು, ಸಹಾಯಕ ನಿರ್ದೇಶಕ, ಪಶು ಸಂಗೋಪನಾ ಇಲಾಖೆ

ಪೈಪ್‌ಲೈನ್ ಅಳವಡಿಕೆ ಬಂಗಾರಪೇಟೆ ತಾಲ್ಲೂಕಿನ ಬರ ಇದ್ದರೂ ಯರಗೋಳ್ ಡ್ಯಾಂನಲ್ಲಿ ನೀರಿರುವುದರಿಂದ ನೀರಿನ ಸಮಸ್ಯೆ ಎದುರಾಗಿಲ್ಲ. ನಗರ ಪ್ರದೇಶದ ಕೆಲ ವಾರ್ಡ್‌ಗಳಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಉಳಿದ ವಾರ್ಡ್‌ಗಳಿಗೆ ಪೈಪ್‌ಲೈನ್‌ ಅಳವಡಿಸಲು ಕ್ರಮ ವಹಿಸುತ್ತೇವೆ - ಮೀನಾಕ್ಷಿ, ಪುರಸಭೆ ಆಯುಕ್ತರು

ಬರ ನಿರ್ವಹಣೆಗೆ ಸೂಕ್ತ ಕ್ರಮ

ಬರ ನಿರ್ವಹಣಾ ಕಾರ್ಯ ಪಡೆಯನ್ನು ರಚಿಸಲಾಗಿದ್ದು, ಈ ಮೂಲಕ ಗ್ರಾಮೀಣ ಭಾಗದ ನೀರಿನ ಕೊರತೆ ನಿರ್ವಹಣೆ ಮಾಡಲಾಗುತ್ತಿದೆ. ಜತೆಗೆ ಬರ ನಿರ್ವಹಣೆಗೆ ಸೂಕ್ತ ಕ್ರಮ ವಹಿಸುತ್ತೇವೆ - ಯು.ರಶ್ಮಿ, ತಹಶೀಲ್ದಾರ್‌

ಸಮಸ್ಯೆ ಎದುರಾಗುವ ಭಯ

ತಾಲ್ಲೂಕಿನಲ್ಲಿ ಭೀಕರ ಬರಗಾಲ ಜನ– ಜಾನುವಾರುಗಳನ್ನು ಸುಡುತ್ತಿದೆ. ಬರ ಪರಿಸ್ಥಿತಿ ನಿರ್ವಹಣೆಗೆ ತಾಲ್ಲೂಕು ಆಡಳಿತ ಸಜ್ಜಾಗದಿದ್ದರೆ ಮತ್ತಷ್ಟು ಸಮಸ್ಯೆ ಎದುರಾಗುತ್ತದೆ - ಲಕ್ಷ್ಮಿ ನಾರಾಯಣ, ತೋಪ್ಪನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT