ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಸಿದ ಪೆಂಡಾಲ್‌ನಲ್ಲಿ ಕರ್ತವ್ಯ

ಗಡಿಭಾಗದಲ್ಲಿ ಚೆಕ್‌ಪೋಸ್ಟ್ ಸಿಬ್ಬಂದಿ ಪರದಾಟ
Last Updated 17 ಮೇ 2021, 3:33 IST
ಅಕ್ಷರ ಗಾತ್ರ

ಕೆಜಿಎಫ್: ಕೋವಿಡ್ ನಿರ್ಬಂಧದ ಅಂಗವಾಗಿ ತಾಲ್ಲೂಕಿನ ಮೂರು ಗಡಿ ಭಾಗದಲ್ಲಿ ಚೆಕ್ ಪೋಸ್ಟ್‌ ಗಳನ್ನು ನಿರ್ಮಾಣ ಮಾಡಲಾಗಿದ್ದು, ಅವುಗಳ ಪೈಕಿ ಕೆಂಪಾಪುರ ಚೆಕ್‌ಪೋಸ್ಟ್‌ನಲ್ಲಿ ಯಾವುದೇ ಮೂಲ ಸೌಕರ್ಯವಿಲ್ಲದೆ ಸಿಬ್ಬಂದಿ ಹಗಲಿರುಳು ಕೆಲಸ ನಿರ್ವಹಿಸುತ್ತಿದ್ದಾರೆ.

ಆಂಧ್ರಪ್ರದೇಶದ ಕುಪ್ಪಂ ವಿಧಾನಸಭಾ ಕ್ಷೇತ್ರಕ್ಕೆ ಗಡಿಯನ್ನು ಹೊಂದಿರುವ ಕೆಂಪಾಪುರ ಗ್ರಾಮದಲ್ಲಿ ಘಟ್ಟಮಾದಮಂಗಲ ಗ್ರಾಮ ಪಂಚಾಯಿತಿಯಿಂದ ಚೆಕ್ ಪೋಸ್ಟ್ ನಿರ್ಮಾಣ ಮಾಡಿಕೊಡಲಾಗಿದೆ. ಬಟ್ಟೆಯ ಪೆಂಡಾಲ್‌ ನಿಂದ ಚೆಕ್‌ ಪೋಸ್ಟ್‌ ನಿರ್ಮಾಣ ಮಾಡಲಾಗಿದೆ. ಎರಡು ದಿನಗಳಿಂದ ಬೀಳುತ್ತಿರುವ ಗಾಳಿ ಮಳೆಗೆ ಚೆಕ್ ಪೋಸ್ಟ್ ನೆಲಕ್ಕೆ ಬಾಗಿದೆ. ಯಾವಾಗ ತಲೆ ಮೇಲೆ ಬೀಳುತ್ತದೆಯೋ ಎಂಬ ಆತಂಕದಲ್ಲಿ ಸಿಬ್ಬಂದಿ ಇದ್ದಾರೆ.

ಆಂಧ್ರದಿಂದ ಬರುವ ಮತ್ತು ಹೋಗುವ ವಾಹನಗಳನ್ನು ಇದೇ ಚೆಕ್‌ ಪೋಸ್ಟ್‌ ಇದ್ದು ಪರಿಶೀಲಿಸಬೇಕಾಗಿದೆ.
ಈಗಿನ ಚೆಕ್‌ ಪೋಸ್ಟ್‌ನಲ್ಲಿ ಪಕ್ಕಾ ವಿದ್ಯುತ್ ಸಂಪರ್ಕ ಇಲ್ಲ. ಪಕ್ಕದ ವಿದ್ಯುತ ಕಂಬಕ್ಕೆ ತಂತಿಯನ್ನು ಸಿಲುಕಿಸಿ ವಿದ್ಯುತ್ ನೀಡಲಾಗಿದೆ. ಶೌಚಾಲಯ ವ್ಯವಸ್ಥೆ ಇಲ್ಲ. ಪುರುಷರಾದರೆ ಹತ್ತಿರದ ನೀಲಗಿರಿ ತೋಪಿಗೆ ಹೋಗುತ್ತಾರೆ. ಮಹಿಳಾ ಸಿಬ್ಬಂದಿಗೆ ಏನು ವ್ಯವಸ್ಥೆ ಎಂಬ ಪ್ರಶ್ನೆಗೆ ಉತ್ತರವಿಲ್ಲ.

‘ಕೋವಿಡ್ ಪ್ರಾರಂಭದ ದಿನದಲ್ಲಿ ಈ ಜಾಗದಲ್ಲಿ ಕಾಯಂ ಚೆಕ್‌ ಪೋಸ್ಟ್‌ ನಿರ್ಮಿಸಬೇಕು ಎಂದು ತೀರ್ಮಾನಿಸಲಾಗಿತ್ತು. ಆಗಿನ ಎಸ್ಪಿ ಕೋರಿಕೆ ಮೇರೆಗೆ ಜಿಲ್ಲಾಡಳಿತ ಸಮ್ಮತಿ ನೀಡಿತ್ತು. ಆದರೆ ಕೋವಿಡ್ ಕಡಿಮೆಯಾಗುತ್ತಲೇ ಬೇಡಿಕೆ ಯಾರ ಗಮನಕ್ಕೂ ಬರಲಿಲ್ಲ. ಪಕ್ಕದ ಆಂಧ್ರದ ಗಡಿಯಲ್ಲಿ ಅಲ್ಲಿನ ಸರ್ಕಾರ ಮಜಭೂತಾದ ಚೆಕ್ ಪೋಸ್ಟ್‌ ನಿರ್ಮಾಣ ಮಾಡಿದೆ. ಅದರೆ ರಾಜ್ಯ ಸರ್ಕಾರ ಬಟ್ಟೆ ಪೆಂಡಾಲ್‌ ನಲ್ಲಿ ನಮ್ಮನ್ನು ಕುಳ್ಳಿರಿಸಿದೆ’ ಎಂದು ಸಿಬ್ಬಂದಿ ವಿಷಾಧ ವ್ಯಕ್ತಪಡಿಸುತ್ತಾರೆ.

ಈಗಿನ ಚೆಕ್ ಪೋಸ್ಟ್‌ಗೆ ಜಿಲ್ಲಾಧಿಕಾರಿ ಆರ್.ಸೆಲ್ವಮಣಿ, ಎಸ್ಪಿ ಇಲಕ್ಕಿಯಾ ಕರುಣಾಗರನ್, ತಹಶೀಲ್ದಾರ್ ಕೆ.ಎನ್.ಸುಜಾತ ಸೇರಿದಂತೆ ಹಲವಾರು ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಆದರೆ ಅವರ‍್ಯಾರು ಮೂಲಸೌಕರ್ಯ ಒದಗಿಸಲು ಪ್ರಯತ್ನ ಮಾಡದೆ ಇರುವುದು ಇಂದಿನ ಪರಿಸ್ಥಿತಿ ನೋಡಿದರೆ ತಿಳಿಯುತ್ತದೆ.

ಚೆಕ್‌ ಪೋಸ್ಟ್‌ ನಿರ್ಮಾಣದ ಹೊಣೆಯನ್ನು ಘಟ್ಟಮಾದಮಂಗಲ ಗ್ರಾಮಪಂಚಾಯಿತಿಗೆ ನೀಡಲಾಗಿದೆ. ಆದರೆ ಪಂಚಾಯಿತಿ ಅಧಿಕಾರಿಗಳು ಅದನ್ನು ನಿರ್ವಹಿಸಲು ಹಿಂದೇಟು ಹಾಕಿದ್ದರು. ಕಳೆದ ಕೋವಿಡ್ ಸಂದರ್ಭದಲ್ಲಿ ನಾಲ್ಕು ತಿಂಗಳ ಕಾಲ ಪೆಂಡಾಲ್, ಊಟ, ತಿಂಡಿ, ಸ್ಯಾನಿಟೈಸರ್, ದೀಪ, ಕುರ್ಚಿಗಳ ವ್ಯವಸ್ಥೆಗೆ ಖರ್ಚು ಮಾಡಿದ್ದ ₹5.20 ಲಕ್ಷ ಜಿಲ್ಲಾಡಳಿತ ಇದುವರೆವಿಗೂ ಮಂಜೂರು ಮಾಡಿಲ್ಲ. ಆದ್ದರಿಂದ ಈ ಬಾರಿ ಕಂದಾಯ ಇಲಾಖೆಯೇ ಉಸ್ತುವಾರಿ ವಹಿಸಿಕೊಳ್ಳಬೇಕೆಂದು ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರು. ಆದರೆ ಪುನಃ ಅದರ ಹೊಣೆಯನ್ನು ಪಂಚಾಯಿತಿ ಹೆಗಲಿಗೆ ಹಾಕಲಾಗಿದೆ.

ಪಂಚಾಯಿತಿಯಲ್ಲಿ ತೆರಿಗೆ ಸಂಗ್ರಹವಾಗುತ್ತಿಲ್ಲ. ನರೇಗಾ ಮತ್ತು 15 ನೇ ಹಣಕಾಸು ಯೋಜನೆಯಲ್ಲಿ ನಿರ್ದಿಷ್ಟ ಕಾಮಗಾರಿಗೆ ಮಾತ್ರ ಹಣ ವಿನಿಯೋಗ ಮಾಡಬೇಕಾಗಿದೆ. ಈಗ ಚೆಕ್‌ ಪೋಸ್ಟ್‌ ನಿರ್ವಹಣೆಗೆ ಹಣ ಎಲ್ಲಿಂದ ತರಬೇಕು ಎಂಬುದು ಪಂಚಾಯಿತಿಯ ವಾದವಾಗಿದೆ. ಕಳೆದ ಬಾರಿ ಹಣವನ್ನೇ ನೀಡಿಲ್ಲ. ಈ ಬಾರಿ ಖರ್ಚನ್ನು ನಿಭಾಯಿಸುವುದು ಹೇಗೆ ಎಂಬುದು ಪಂಚಾಯಿತಿ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಪ್ರಶ್ನೆಯಾಗಿದೆ. ಇಲಾಖೆಗಳ ನಡುವಿನ ತಿಕ್ಕಾಟದಲ್ಲಿ ಸಿಬ್ಬಂದಿ ಮಾತ್ರ ಸಂಕಷ್ಟದಲ್ಲಿ ಕೆಲಸ ಮಾಡುತ್ತಿದ್ದಾರೆ. ಕಾಡುಪ್ರಾಣಿಗಳು ಮತ್ತು ಹಾವುಗಳ ಕಾಟ ಇದೆ. ಬೀಳುತ್ತಿರುವ ಮಳೆಗೆ ಚಳಿ ಹೆಚ್ಚುತ್ತಿದೆ. ಸುತ್ತಮುತ್ತ ಜನವಸತಿ ಕೂಡ ಇಲ್ಲ ಎಂಬುದು ಸಿಬ್ಬಂದಿಯ ಅಳಲಾಗಿದೆ.

ಶಾಶ್ವತ ಕಟ್ಟಡ: ‘ಕೆಂಪಾಪುರ ಚೆಕ್‌ ಪೋಸ್ಟ್‌ ನಲ್ಲಿ ಶಾಶ್ವತವಾಗಿ ಎರಡು ಕೊಠಡಿಗಳು ಮತ್ತು ಶೌಚಾಲಯವುಳ್ಳ ಅತಿಥಿ ಗೃಹ ಕಟ್ಟಬೇಕೆಂದು ತೀರ್ಮಾನಿಸಲಾಗಿದೆ. ಅದಕ್ಕೆ ಗುರುತಿಸಲಾಗಿರುವ ಸರ್ಕಾರಿ ಜಾಗ ತಕರಾರಿನಲ್ಲಿದೆ. ಈ ಜಾಗದ ಸರ್ವೆ ಮಾಡಿಕೊಡಲು ಕಂದಾಯ ಇಲಾಖೆಗೆ ಪತ್ರ ಬರೆಯಲಾಗಿದೆ. ಜಾಗ ಗುರುತಿಸಿಕೊಟ್ಟ ನಂತರ ಕಟ್ಟಡ ಕಟ್ಟಲಾಗುವುದು’ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚಂದ್ರಕಲಾ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT