ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆ ಸಾಲ ತೀರಿಸಲು ಹಣ ಲೂಟಿ : ಮುಖಂಡ ಬೆಗ್ಲಿ ಸೂರ್ಯಪ್ರಕಾಶ್‌ ಆರೋಪ

Last Updated 19 ಡಿಸೆಂಬರ್ 2019, 14:45 IST
ಅಕ್ಷರ ಗಾತ್ರ

ಕೋಲಾರ: ‘ಶಾಸಕ ಕೆ.ಶ್ರೀನಿವಾಸಗೌಡರು ಅಭಿವೃದ್ಧಿ ಕಡೆ ಗಮನ ಹರಿಸುವುದನ್ನು ಬಿಟ್ಟು ಚುನಾವಣೆಗೆ ಮಾಡಿದ ಸಾಲ ತೀರಿಸಲು ಸರ್ಕಾರ ಹಣ ಲೂಟಿ ಮಾಡುತ್ತಿದ್ದಾರೆ’ ಎಂದು ‘ನಮ್ಮ ಕಾಂಗ್ರೆಸ್‌’ ಪಕ್ಷದ ಮುಖಂಡ ಬೆಗ್ಲಿ ಸೂರ್ಯಪ್ರಕಾಶ್‌ ಗಂಭೀರ ಆರೋಪ ಮಾಡಿದರು.

ಇಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಮಾಜಿ ಶಾಸಕ ವರ್ತೂರು ಪ್ರಕಾಶ್ ಸ್ವಂತ ತಪ್ಪಿನಿಂದ ಚುನಾವಣೆಯಲ್ಲಿ ಸೋತಿದ್ದಾರೆ. ಆದರೂ ಕ್ಷೇತ್ರದ ಜನ ಅವರ ಜತೆಗಿದ್ದಾರೆ. ಶ್ರೀನಿವಾಸಗೌಡರು ತಮ್ಮ ಅಕ್ರಮ ಮರೆಮಾಚಲು ಜನರ ದಿಕ್ಕು ತಪ್ಪಿಸುತ್ತಿದ್ದಾರೆ’ ಎಂದು ದೂರಿದರು.

‘ಚುನಾವಣೆಯಲ್ಲಿ ಹಣಕ್ಕೆ ಮತ ಮಾರಿಕೊಳ್ಳಬೇಡಿ ಎಂದು ಜನಕ್ಕೆ ಕಿವಿಮಾತು ಹೇಳಿದ್ದ ಶ್ರೀನಿವಾಸಗೌಡರು ಹಿಂದಿನ ಚುನಾವಣೆಯಲ್ಲಿ ಹಣ ಕೊಡದೆ ಆಯ್ಕೆಯಾದರೆ ಎಂಬ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಚುನಾವಣೆಗೆ ಮಾಡಿದ ಸಾಲ ಇನ್ನೂ ತೀರಿಸಿಲ್ಲ ಎಂದು ಅವರೇ ಇತ್ತೀಚೆಗೆ ಹೇಳಿಕೆ ಕೊಟ್ಟಿದ್ದರು. ಗುತ್ತಿಗೆದಾರ ಗೋವಿಂದರಾಜು ಬಳಿ ಯಾಕೆ ಸಾಲ ಪಡೆದಿದ್ದಾರೆ ಎಂಬುದನ್ನು ಅವರು ಬಹಿರಂಗಪಡಿಸಲಿ’ ಎಂದು ಸವಾಲು ಹಾಕಿದರು.

‘ವರ್ತೂರು ಪ್ರಕಾಶ್ 10 ವರ್ಷಗಳ ಕಾಲ ದರೋಡೆ ಮಾಡಿದ್ದಾರೆ ಎಂದು ಶ್ರೀನಿವಾಸಗೌಡರು ಆರೋಪಿಸಿದ್ದಾರೆ. ದರೋಡೆ ಅಥವಾ ಕಳ್ಳತನ ಮಾಡಿದ್ದರೆ ವರ್ತೂರು ಪ್ರಕಾಶ್‌ ವಿರುದ್ಧ ಪ್ರಕರಣ ದಾಖಲಾಗಬೇಕಿತ್ತು. ಎಲ್ಲಿ ಎಫ್‌ಐಆರ್ ಆಗಿದೆ ಎಂಬುದಕ್ಕೆ ಶಾಸಕರೇ ಉತ್ತರಿಸಬೇಕು’ ಎಂದರು.

ದೊಡ್ಡ ನಾಟಕ: ‘ಶ್ರೀನಿವಾಸಗೌಡರು ಪ್ರಾಮಾಣಿಕರಾಗಿದ್ದರೆ ಬಿಜೆಪಿ ಮುಖಂಡರು ಅವರ ಮನೆಗೆ ₹ ೫ ಕೋಟಿ ತಂದಿಟ್ಟ ಕೂಡಲೇ ಪೊಲೀಸರನ್ನು ಕರೆಸಬೇಕಿತ್ತು. ಬದಲಿಗೆ ಆ ಹಣದಲ್ಲಿ ₹ 60 ಲಕ್ಷ ಮನೆಯಲ್ಲಿಟ್ಟುಕೊಂಡು ಲೂಟಿ ಹೊಡೆದಿದ್ದಾರೆ. ಎಸಿಬಿ ಅಧಿಕಾರಿಗಳ ಮುಂದೆ ಏನೂ ನಡೆದಿಲ್ಲವೆಂದು ಹೇಳಿಕೆ ಕೊಟ್ಟವರು ಸದನದಲ್ಲಿ ₹ ೫ ಕೋಟಿ ಹಣ ವಾಪಸ್ ಕೊಟ್ಟಿದ್ದಾಗಿ ಹೇಳಿ ದೊಡ್ಡ ನಾಟಕವಾಡಿದ್ದಾರೆ’ ಎಂದು ಟೀಕಿಸಿದರು.

‘ನಬಾರ್ಡ್, ಅಫೆಕ್ಸ್‌ ಬ್ಯಾಂಕ್‌ನಿಂದ ಡಿಸಿಸಿ ಬ್ಯಾಂಕ್‌ಗೆ ಬಂದ ಹಣದಲ್ಲಿ ಸ್ತ್ರೀಶಕ್ತಿ ಸಂಘಗಳಿಗೆ ಶೂನ್ಯ ಬಡ್ಡಿ ದರದ ಸಾಲ ನೀಡಲಾಗುತ್ತಿದೆ. ಸರ್ಕಾರ ಬಡ್ಡಿ ಹಣವನ್ನು ಬ್ಯಾಂಕ್‌ಗೆ ತುಂಬುತ್ತದೆಯೇ ವಿನಃ ಅಧ್ಯಕ್ಷರು ಕೈಯಿಂದ ಕೊಡುತ್ತಿಲ್ಲ. ಭಾರತೀಯ ರಿಸರ್ವ್‌ ಬ್ಯಾಂಕ್‌ ಮಾರ್ಗಸೂಚಿ ಅನ್ವಯ ಚೆಕ್ ಮೂಲಕವೇ ಸಾಲ ವಿತರಿಸಬೇಕು. ಆದರೆ, ಡಿಸಿಸಿ ಬ್ಯಾಂಕ್‌ ಸಾಲ ವಿತರಣೆಯಲ್ಲಿ ಆರ್‌ಬಿಐ ನಿಯಮಾವಳಿ ಉಲ್ಲಂಘನೆ ಆಗಿದೆ. ಟೇಬಲ್‌ ಮುಂದೆ ಹಣವಿಟ್ಟು ನೀಡಲು ಇದೇನು ಕುರಿ ವ್ಯಾಪಾರವೇ?’ ಎಂದು ಪ್ರಶ್ನಿಸಿದರು.

ಮಾತು ಹಿಡಿತದಲ್ಲಿರಲಿ: ‘ವರ್ತೂರು ಪ್ರಕಾಶ್ ಶಾಸಕರಾಗಿದ್ದ ಅವಧಿಯಲ್ಲಿ ಗ್ರಾಮ ವಿಕಾಸ ಯೋಜನೆಯಡಿ ಅರಹಳ್ಳಿ, ಕ್ಯಾಲನೂರು, ವಕ್ಕಲೇರಿ ಸೇರಿದಂತೆ ಹಲವು ಗ್ರಾಮಗಳ ಅಭಿವೃದ್ಧಿಗೆ ತಲಾ ₹ ೧ ಕೋಟಿ ಅನುದಾನ ಬಿಡುಗಡೆ ಮಾಡಿಸಿದ್ದರು. ಶ್ರೀನಿವಾಸಗೌಡರು ಕಾಮಗಾರಿಗಳ ಟೆಂಡರ್‌ನ ಕಮಿಷನ್ ಹಣದಲ್ಲಿ ಸಾಲ ತೀರಿಸುತ್ತಿದ್ದಾರೆ. ಶಾಸಕರಿಗೆ ಬುದ್ಧಿ ಭ್ರಮಣೆಯೇನೂ ಆಗಿಲ್ಲ. ಯಾರೂ ಸಾಚಾ ಅಲ್ಲ. ಮಾತು ಹಿಡಿತದಲ್ಲಿರಬೇಕು’ ಎಂದು ಗುಡುಗಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಎಸ್.ವೆಂಕಟೇಶ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಂ.ಆಂಜಿನಪ್ಪ, ನಗರಸಭೆ ಸದಸ್ಯ ವಿ.ಮಂಜುನಾಥ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT