ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಗಾರಪೇಟೆ | ಆನೆ ದಾಳಿಯಿಂದ ರೈತ ಸಾವು: ಜನರ ಆಕ್ರೋಶ

Published 14 ಏಪ್ರಿಲ್ 2024, 14:34 IST
Last Updated 14 ಏಪ್ರಿಲ್ 2024, 14:34 IST
ಅಕ್ಷರ ಗಾತ್ರ

ಬಂಗಾರಪೇಟೆ: ಕಾಡಾನೆಗಳ ಹಾವಳಿಗೆ ಸರ್ಕಾರ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಇಲ್ಲಿನ ರೈತ ಸಂಘ ಹಾಗೂ ಪೋಲೇನಹಳ್ಳಿ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ರೈತರು ಭಾನುವಾರ ಒತ್ತಾಯಿಸಿದ್ದಾರೆ. 

ಭಾನುವಾರ ಬೆಳಿಗ್ಗೆ ಕಾಡಾನೆ ದಾಳಿಯಿಂದ ರೈತ ನಾರಾಯಣಪ್ಪ ಮೃತಪಟ್ಟ ಸುದ್ದಿ ತಿಳಿದು, ಸೇರಿದ್ದ ಸುತ್ತಮುತ್ತಲ ಗ್ರಾಮಗಳ ನೂರಾರು ರೈತರು ಅರಣ್ಯಾಧಿಕಾರಿಗಳ ವಿರುದ್ಧ  ಆಕ್ರೋಶ ವ್ಯಕ್ತಪಡಿಸಿದರು.

ಇನ್ನೆಷ್ಟು ಬಡ ರೈತರು ಕಾಡಾನೆಗಳ ಹಾವಳಿಗೆ ಬಲಿಯಾಗಬೇಕು ಎಂದು ಪ್ರಶ್ನಿಸಿ ಜಿಲ್ಲಾಡಳಿತ, ಅರಣ್ಯ ಸಚಿವ ಸೇರಿದಂತೆ ಜನಪ್ರತಿನಿಧಿಗಳ ವಿರುದ್ಧ ದೂರಿದರು.

‘ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಬೆಳೆದ ಬೆಳೆಗಳು ಒಂದೆಡೆ ರೋಗದಿಂದ ನಾಶವಾದರೆ, ಮತ್ತೊಂದೆಡೆ ಕಾಡಾನೆಗಳು ಕೈಗೆ ಬರುವ ಮುನ್ನವೇ ಬೆಳೆಗಳನ್ನು ನಾಶ ಮಾಡುತ್ತಿವೆ. ನಾಲ್ಕು ದಶಕಗಳಿಂದ ಸರ್ಕಾರ, ಜಿಲ್ಲಾಧಿಕಾರಿ, ಅರಣ್ಯಾಧಿಕಾರಿಗಳು ಬದಲಾಗಿದ್ದಾರೆಯೇ ಹೊರತು, ಕಾಡಾನೆಗಳ  ಹಾವಳಿ ತಪ್ಪಿಸಿಲ್ಲ. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುವಲ್ಲಿ ಎಲ್ಲರೂ ವಿಫಲರಾಗಿದ್ದಾರೆ’ ಎಂದು ಕಿಡಿಕಾರಿದರು.

ರೈತ ಸಂಘದ ಮುಖಂಡ ಮರಗಲ್ ಶ್ರೀನಿವಾಸ್ ಮಾತನಾಡಿ,  ಕಾಡಾನೆ ಹಾವಳಿಯಿಂದ ಮೃತಪಟ್ಟಿರುವ ರೈತರ ಕುಟುಂಬದ ಸದಸ್ಯರ ಕಣ್ಣೀರಿಗೆ ಜಿಲ್ಲಾಧಿಕಾರಿ, ತಾಲ್ಲೂಕು ದಂಡಾಧಿಕಾರಿ, ಸ್ಥಳೀಯ ಶಾಸಕ ಸ್ಪಂದಿಸುವಲ್ಲಿ ವಿಫಲವಾಗಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಬರುವಂತೆ ಕರೆ ಮಾಡಿದರೆ ಚುನಾವಣೆ ನೆಪದಲ್ಲಿ ಜಿಲ್ಲಾಡಳಿತ ಸ್ಪಂದಿಸಿಲ್ಲ. ಇಂಥ ಸನ್ನಿವೇಶದಲ್ಲಿ ಅಧಿಕಾರಿಗಳಿದ್ದರೆ ಇದೇ ರೀತಿ ವರ್ತಿಸುತ್ತಿದ್ದರಾ ಎಂದು ಪ್ರಶ್ನಿಸಿದರು.

ಕೋಟ್ಯಂತರ ರೂಪಾಯಿ ಅನುದಾನದಲ್ಲಿ ಅಭಿವೃದ್ದಿಪಡಿಸಿರುವ ಸೋಲಾರ್ ಸಂಪೂರ್ಣ ಕಳಪೆಯಾಗಿದೆ. ಬ್ಯಾಟರಿ ಇದ್ದರೆ ಕಂಬವಿಲ್ಲ, ಕಂಬವಿದ್ದರೆ ತಂತಿ ಇಲ್ಲದ ಅತಂತ್ರ ಪರಿಸ್ಥಿತಿಯಲ್ಲಿ ಸೋಲಾರ್ ವ್ಯವಸ್ಥೆ ಇದೆ ಎಂದು ದೂರಿದರು.

ದೋಣಿಮಡಗು ಗ್ರಾಮ ಪಂಚಾಯಿತಿ ಅಧ್ಯಕ್ಷ ಜಯಣ್ಣ ಮಾತನಾಡಿ, ಗಡಿಭಾಗವನ್ನು ತಾಲ್ಲೂಕು ಆಡಳಿತ ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡುತ್ತಿದೆ. ರಸ್ತೆ, ಆಸ್ಪತ್ರೆ ಇಲ್ಲ, ಕುಡಿಯುವ ನೀರಿನ ಸಮಸ್ಯೆ ಇದೆ. ಇದರ ಮಧ್ಯೆ ಬೆಸ್ಕಾಂ ಕರೆಂಟು ನೀಡುತ್ತಿಲ್ಲ. ರಾತ್ರಿ ಅಥವಾ ಮುಂಜಾನೆ ರೈತರು ಬೆಳೆಗಳಿಗೆ ನೀರು ಹಾಯಿಸಲು ಹೋಗಿ ಕಾಡಾನೆಗಳ ದಾಳಿಗೆ ಬಲಿಯಾಗಬೇಕಿದೆ ಎಂದರು.

ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಕಾಮಸಮುದ್ರ ಹೋಬಳಿ ವೃತ್ತ ನೀರೀಕ್ಷಕ ಕೃಷ್ಣ, ಜಯಣ್ಣ ಎಸ್.ಕೆ. ಪ್ರಭಾಕರ್ ರೆಡ್ಡಿ, ಲಕ್ಷ್ಮಿನಾರಾಯಣ, ಶಂಕರ ವಿ., ಮುರಳಿ ಟಿ. ಎನ್., ಶ್ರೀರಾಮ್, ಗುಳ್ಳಹಟ್ಟಿ, ಲಕ್ಷಣ್, ಸುರೇಶ್, ನಾಗರಾಜ್, ಬಸಪ್ಪ, ಮುರಳಿ, ತಿಮ್ಮಾರೆಡ್ಡಿ ಹಾಗೂ ಸುತ್ತಮುತ್ತಲ ಗ್ರಾಮಗಳ ರೈತರು ಉಪಸ್ಥಿತರಿದ್ದರು.

ಬಂಗಾರಪೇಟೆಯಲ್ಲಿ ಭಾನುವಾರ ಕಾಡಾನೆ ಹಾವಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕೆಂದು ಆಗ್ರಹಿಸಿ ಪೋಲೇನಹಳ್ಳಿ ಗ್ರಾಮ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ಸರ್ಕಾರದ ವಿರುದ್ಧ ಪ್ರತಿಭಟಿಸಿದರು
ಬಂಗಾರಪೇಟೆಯಲ್ಲಿ ಭಾನುವಾರ ಕಾಡಾನೆ ಹಾವಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕೆಂದು ಆಗ್ರಹಿಸಿ ಪೋಲೇನಹಳ್ಳಿ ಗ್ರಾಮ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ಸರ್ಕಾರದ ವಿರುದ್ಧ ಪ್ರತಿಭಟಿಸಿದರು
ಆನೆ ದಾಳಿಯಿಂದ ಮೃತಪಟ್ಟ ರೈತರಿಗೆ ಕನಿಷ್ಠ ₹ 50 ಲಕ್ಷ ಪರಿಹಾರ ಧನವನ್ನು ನೀಡಬೇಕು
ಶಂಕರ್ ವಿ. ಬೊಗ್ಗಲಹಳ್ಳಿ ಅಧ್ಯಕ್ಷ ರೈತಸಂಘ ಕಾಮಸಮುದ್ರ ಹೋಬಳಿ
ಪ್ರಾಣಿ-ಮಾನವನ ಸಂಘರ್ಷವನ್ನು ತಪ್ಪಿಸಲು ವೈಜ್ಞಾನಿಕ ತಂತ್ರಜ್ಞಾನ ಬಳಸಬೇಕು. ಪ್ರಾಣ ಹಾನಿಯಾಗದ ರೀತಿಯಲ್ಲಿ ಸರ್ಕಾರ ಕ್ರಮ ವಹಿಸಬೇಕು
ಲಕ್ಷ್ಮಿನಾರಾಯಣ ಮಾಜಿ ಅಧ್ಯಕ್ಷ ಗ್ರಾಮ ಪಂಚಾಯಿತಿ
ರೈತನ ಕುಟುಂಬಕ್ಕೆ ₹ 15 ಲಕ್ಷ ಪರಿಹಾರ
ಕಾಡಾನೆ ದಾಳಿಯಿಂದ ಮೃತಪಟ್ಟ ನಾರಾಯಣಪ್ಪ ಅವರ ಕುಟುಂಬವನ್ನು ಭೇಟಿ ಮಾಡಿದ ಜಿಲ್ಲಾ ಅರಣ್ಯ ಉಪ ಸಂರಕ್ಷಣಾಧಿಕಾರಿ ಏಡುಕೊಂಡಲು ಹಾಗೂ ವಲಯ ಅರಣ್ಯಾಧಿಕಾರಿ ಶ್ರೀಲಕ್ಷ್ಮಿ ₹ 15 ಲಕ್ಷ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ. ಮೃತನ ಹೆಂಡತಿಗೆ ₹ 4 ಸಾವಿರ ಪಿಂಚಣಿ ಕುಟುಂಬದ ಸದಸ್ಯರೊಬ್ಬರಿಗೆ ಗುತ್ತಿಗೆ ಆಧಾರದಲ್ಲಿ ನೌಕರಿ ನೀಡುವುದಾಗಿಯೂ ತಿಳಿಸಿದ್ದಾರೆ.  ಗಡಿಭಾಗದ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಪರಿಹಾರದ ಮೊತ್ತ  ಹೆಚ್ಚಳ ಕುರಿ ಸರ್ಕಾರಕ್ಕೆ ವರದಿ ಸಲ್ಲಿಸುವಾಗ ಕಾಡಾನೆಗಳ ಹಾವಳಿ ತಡೆಯಲು ಆನೆ ಕಾರಿಡಾರ್ ರೂಪಿಸಲು ಕೋರಲಾಗುವುದು. ಹದಗೆಟ್ಟ ಸೋಲಾರ್ ವ್ಯವಸ್ಥೆಯನ್ನು ಸರಿಪಡಿಸಲಾಗುವುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT