ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆನೆ ಕಾರಿಡಾರ್‌ ಅಭಿವೃದ್ಧಿಪಡಿಸಿ’

ತಿರುಮಲಾಹಳ್ಳಿ ಜಮೀನಿಗೆ ಕಾಡಾನೆ ದಾಳಿ: ಸ್ಥಳಕ್ಕೆ ಶಾಸಕಿ ರೂಪಕಲಾ ಭೇಟಿ
Last Updated 30 ಅಕ್ಟೋಬರ್ 2020, 10:50 IST
ಅಕ್ಷರ ಗಾತ್ರ

ಕೆಜಿಎಫ್‌: ‘ನೆರೆಯ ಆಂಧ್ರ ಮತ್ತು ತಮಿಳುನಾಡು ಭಾಗದಿಂದ ಬರುವ ಕಾಡಾನೆಗಳಿಂದ ರಾಜ್ಯದ ಗಡಿಭಾಗದ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕೂಡಲೇ ರಾಜ್ಯ ಸರ್ಕಾರ ಆನೆ ಕಾರಿಡಾರ್ ಅಭಿವೃದ್ಧಿಗೆ ಒತ್ತು ನೀಡಿ ರೈತರಿಗೆ ಅನುಕೂಲ ಮಾಡಿಕೊಡಬೇಕು’ ಎಂದು ಶಾಸಕಿ ಎಂ. ರೂಪಕಲಾ ಒತ್ತಾಯಿಸಿದರು.

ಘಟ್ಟಮಾದಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಿರುಮಲಾಹಳ್ಳಿಗೆ ಗುರುವಾರ ಭೇಟಿ ನೀಡಿ ಮಾತನಾಡಿದ ಅವರು, ಆನೆ ಕಾರಿಡಾರ್‌ ಅಭಿವೃದ್ಧಿ ಸಂಬಂಧ ಅರಣ್ಯ ಅಧಿಕಾರಿಗಳು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಆದರೆ, ಇದುವರೆವಿಗೂ ಕಾರ್ಯಗತವಾಗಿಲ್ಲ. ಇದರ ಪರಿಣಾಮ ಅರಣ್ಯ ಸಿಬ್ಬಂದಿಗೆ ಆನೆ ಕಾಟ ತಪ್ಪಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.

ಕಳೆದ ಒಂದು ವಾರದಿಂದ ಇಪ್ಪತ್ತಕ್ಕೂ ಹೆಚ್ಚು ಆನೆಗಳು ತಿರುಮಲಾಹಳ್ಳಿ, ವಿರೂಪಾಕ್ಷಪುರ, ಕೋಡಿಗೇನಹಳ್ಳಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಚರಿಸುತ್ತಿವೆ. ಅಪಾರ ಪ್ರಮಾಣದ ಬೆಳೆ ನಾಶ ಮಾಡಿವೆ. ಅವುಗಳನ್ನು ಮೂಲ ಸ್ಥಾನಕ್ಕೆ ಓಡಿಸಲು ಅರಣ್ಯ ಸಿಬ್ಬಂದಿ ವಿಫಲರಾಗಿದ್ದಾರೆ. ಸಿಬ್ಬಂದಿಯು ಆನೆ ಕಾಟದಿಂದ ತಪ್ಪಿಸಿಕೊಳ್ಳುವ ಬಗ್ಗೆ ಗ್ರಾಮಸ್ಥರಿಗೆ ಅರಿವು ಮೂಡಿಸುವ ಕೆಲಸ ಮಾಡಿಲ್ಲ. ಬೆಳೆ ನಷ್ಟದ ಬಗ್ಗೆಯೂ ಸಮರ್ಪಕವಾಗಿ ಅಂದಾಜು ಮಾಡಿಲ್ಲ. ಹಿರಿಯ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಗ್ರಾಮಸ್ಥರಿಗೆ ಧೈರ್ಯ ತುಂಬಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇಷ್ಟು ದಿನಗಳ ಕಾಲ ಕಾಡುಹಂದಿ ಮತ್ತು ಜಿಂಕೆ ಕಾಟ ಇತ್ತು. ಈಗ ಆನೆ ಕಾಟ ಶುರುವಾಗಿದೆ. ಇದರಿಂದಾಗಿ ರಾತ್ರಿ ವೇಳೆ ಬೆಳೆ ಕಾಯಲು ಭಯವಾಗುತ್ತಿದೆ. ರಾತ್ರಿ ಹೊತ್ತು ಕೆಲಸ ಮುಗಿಸಿಕೊಂಡು ಹಳ್ಳಿಗೆ ಬರುವವರು ಕೈಯಲ್ಲಿ ಜೀವ ಹಿಡಿದುಕೊಂಡು ಬರುತ್ತಿದ್ದಾರೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು.

ಹಗಲಿನ ವೇಳೆ ಸಮೀಪದ ಕಾಡಿನಲ್ಲಿ ವಿಶ್ರಾಂತಿ ಪಡೆಯುವ ಆನೆಗಳು ರಾತ್ರಿಯಾಗುತ್ತಿದ್ದಂತೆ ಗ್ರಾಮದೊಳಕ್ಕೆ ಬರುತ್ತವೆ. ಕೊಳವೆಬಾವಿಗಳ ಪೈಪ್‌ಗಳಿಗೆ ಹಾನಿ ಮಾಡಿವೆ. ಅರಣ್ಯ ಇಲಾಖೆಯ ಸಿಬ್ಬಂದಿ ಆನೆಗಳನ್ನು ಓಡಿಸುವುದನ್ನು ಬಿಟ್ಟು ಜೀಪಿನಲ್ಲಿ ಕುಳಿತು ನೋಡುತ್ತಿರುತ್ತಾರೆ ಎಂದು ಗ್ರಾಮಸ್ಥರು ಆರೋಪಿಸಿದರು.

ಪ್ರಸ್ತುತ ಹಿಂಡಿನಲ್ಲಿ 11 ಆನೆಗಳು ಇವೆ. ಅವುಗಳಲ್ಲಿ ಎರಡು ಮರಿಗಳಿವೆ. ಅವುಗಳನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲು ಆನೆಗಳು ಪ್ರಯತ್ನ ಮಾಡುತ್ತಿವೆ. ಸ್ವಲ್ಪ ಕಾಲಾವಕಾಶ ಬೇಕು. ನಾವು ಆನೆಗಳನ್ನು ರಾಜ್ಯದ ಗಡಿಗೆ ಓಡಿಸಿದರೂ, ಆಂಧ್ರ ಮತ್ತು ತಮಿಳುನಾಡಿನ ಅರಣ್ಯ ಇಲಾಖೆ, ಪೊಲೀಸ್ ಸಿಬ್ಬಂದಿ ಅವುಗಳನ್ನು ಅವರ ರಾಜ್ಯಕ್ಕೆ ಬಿಟ್ಟುಕೊಳ್ಳಲು ತಯಾರಿಲ್ಲ. ಅವರು ಕೂಡ ಪಟಾಕಿ ಸಿಡಿಸಿ ತಮ್ಮ ರಾಜ್ಯಕ್ಕೆ ಪ್ರವೇಶಿಸದಂತೆ ತಡೆಯುತ್ತಿದ್ದಾರೆ ಎಂದು ಅರಣ್ಯ ಸಿಬ್ಬಂದಿ ಮಾಹಿತಿ ನೀಡಿದರು.

ಆನೆಗಳನ್ನು ಮೂಲಸ್ಥಾನಕ್ಕೆ ಓಡಿಸಲು ಅರಣ್ಯ ಇಲಾಖೆಯಿಂದ ಎರಡು ತಂಡಗಳನ್ನು ರಚಿಸಲಾಗಿದೆ. ಸಿಬ್ಬಂದಿ ಕೊರತೆಯೂ ಇದೆ. ಆದರೂ ಪ್ರಾಮಾಣಿಕವಾಗಿ ಕೆಲಸ ಮಾಡಲಾಗುತ್ತಿದೆ ಎಂದು ಅರಣ್ಯ ಸಿಬ್ಬಂದಿ ವೇಣು ಹೇಳಿದರು.

ತಹಶೀಲ್ದಾರ್ ಕೆ. ರಮೇಶ್‌, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಸುನಂದಮ್ಮ, ಮುಖಂಡರಾದ ನಾರಾಯಣಪ್ಪ, ಗೋಪಾಲಕೃಷ್ಣ, ಜನಾರ್ದನ, ಬಾಬು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT