ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇತ್ರದಾನದಿಂದ ಅಂಧಕಾರ ಹೋಗಲಾಡಿಸಿ

ಜಾಥಾದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕ ನಾರಾಯಣಸ್ವಾಮಿ ಕಿವಿಮಾತು
Last Updated 4 ಸೆಪ್ಟೆಂಬರ್ 2019, 11:02 IST
ಅಕ್ಷರ ಗಾತ್ರ

ಕೋಲಾರ: ‘ನೇತ್ರದಾನ ಮಹಾದಾನ. ಸಾವಿನ ನಂತರ ಮನುಷ್ಯನ ದೇಹದ ಜತೆ ಮಣ್ಣಾಗುವ ಕಣ್ಣುಗಳನ್ನು ದಾನ ಮಾಡುವ ಮೂಲಕ ಮತ್ತೊಬ್ಬರಿಗೆ ದೃಷ್ಟಿ ಭಾಗ್ಯ ಕಲ್ಪಿಸಬೇಕು’ ಎಂದು ಶ್ರೀ ನರಸಿಂಹರಾಜ (ಎಸ್‍ಎನ್‍ಆರ್) ಜಿಲ್ಲಾ ಆಸ್ಪತ್ರೆ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಜಿ.ನಾರಾಯಣಸ್ವಾಮಿ ಕಿವಿಮಾತು ಹೇಳಿದರು.

ಜಿಲ್ಲಾ ಅಂಧತ್ವ ನಿಯಂತ್ರಣಾಧಿಕಾರಿ ಕಚೇರಿ ಹಾಗೂ ನೇತ್ರದೀಪ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ರಾಷ್ಟ್ರೀಯ ಅಂಧತ್ವ ನಿಯಂತ್ರಣ ಕಾರ್ಯಕ್ರಮದಡಿ ಇಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿ, ‘ಮಾನವನ ಪಂಚೇಂದ್ರಿಯಗಳಲ್ಲಿ ಕಣ್ಣು ಪ್ರಮುಖವಾದದ್ದು. ಅತ್ಯಂತ ಜಾಗರೂಕತೆಯಿಂದ ಕಣ್ಣು ಕಾಪಾಡಿಕೊಳ್ಳುವುದು ನಮ್ಮ ಜವಾಬ್ದಾರಿ’ ಎಂದರು.

‘ದೇಹಕ್ಕೆ ಸಾವು ಬರುತ್ತದೆ. ಆದರೆ, ಕಣ್ಣಿಗೆ ಸಾವಿಲ್ಲ. ಸತ್ತ ನಂತರ ಕಣ್ಣುಗಳನ್ನು ಸಂರಕ್ಷಿಸಿ ಸಕಾಲದಲ್ಲಿ ದಾನ ಮಾಡಿದರೆ ಮತ್ತೊಬ್ಬರ ಬಾಳಿನ ಅಂಧಕಾರ ಹೋಗಲಾಡಿಸಿ ಅವರ ಬಾಳು ಸುಂದರವಾಗಿಸಬಹುದು. ನೇತ್ರದಾನಕ್ಕೆ ಮುಂದಾಗುವ ಜತೆಗೆ ಇತರರನ್ನೂ ಪ್ರೇರೇಪಿಸಿದರೆ ಅಂಧತ್ವ ನಿವಾರಿಸಬಹುದು’ ಎಂದು ಅಭಿಪ್ರಾಯಪಟ್ಟರು.

ನೇತ್ರ ತಪಾಸಣೆ: ‘ಜಿಲ್ಲೆಯಲ್ಲಿ ಹುಟ್ಟು ಕುರುಡುತನದಿಂದ ಶೇ 12ರಷ್ಟು ಮಂದಿಗೆ ಹಾಗೂ ವೃದ್ಧಾಪ್ಯದ ಕಾರಣದಿಂದ ಶೇ 5ರಷ್ಟು ಮಂದಿಗೆ ಅಂಧತ್ವ ಕಾಡುತ್ತಿದೆ. ಜಿಲ್ಲೆಯ ಇತರೆ ತಾಲ್ಲೂಕುಗಳಿಗೆ ಹೋಲಿಸಿದರೆ ಶ್ರೀನಿವಾಸಪುರ ಮತ್ತು ಕೆಜಿಎಫ್ ಭಾಗದಲ್ಲಿ ಅಂಧರ ಸಂಖ್ಯೆ ಹೆಚ್ಚಿದೆ’ ಎಂದು ಜಿಲ್ಲಾ ಅಂಧತ್ವ ನಿಯಂತ್ರಣಾಧಿಕಾರಿ ಡಾ.ಎನ್.ಸಿ.ನಾರಾಯಣಸ್ವಾಮಿ ವಿವರಿಸಿದರು.

‘ರಾಷ್ಟ್ರೀಯ ಅಂಧತ್ವ ನಿಯಂತ್ರಣ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ ಪ್ರಸಕ್ತ ವರ್ಷದಲ್ಲಿ ಸ್ವಯಂ ಸೇವಾ ಸಂಸ್ಥೆಗಳ ಮೂಲಕ 2 ಸಾವಿರ ಮಂದಿಯ ನೇತ್ರ ತಪಾಸಣೆ ಮಾಡುವ ಗುರಿ ನೀಡಲಾಗಿದೆ. ಪ್ರತಿ ಪ್ರಕರಣಕ್ಕೆ ₹ 2 ಸಾವಿರ ಗೌರವಧನ ನೀಡಲಾಗುವುದು. ಜಿಲ್ಲಾ ಆಸ್ಪತ್ರೆ ಮತ್ತು ತಾಲ್ಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಚಿಕಿತ್ಸಾ ವೆಚ್ಚವಾಗಿ ₹ 1 ಸಾವಿರ ನೀಡಲಾಗುವುದು’ ಎಂದು ಮಾಹಿತಿ ನೀಡಿದರು.

‘ಜಿಲ್ಲೆಯ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ 1ನೇ ತರಗತಿಯಿಂದ ಎಸ್ಸೆಸ್ಸೆಲ್ಸಿವರೆಗೆ ಮಕ್ಕಳ ನೇತ್ರ ತಪಾಸಣೆ ಕಾರ್ಯಕ್ರಮ ಪ್ರಗತಿಯಲ್ಲಿದೆ. ಜಿಲ್ಲೆಯ 1.14 ಲಕ್ಷ ಮಕ್ಕಳ ಪೈಕಿ 45 ಸಾವಿರ ಮಕ್ಕಳ ಕಣ್ಣು ತಪಾಸಣೆ ಮಾಡಲಾಗಿದೆ. 2020ರ ಮಾರ್ಚ್ ಅಂತ್ಯದೊಳಗೆ ಮಕ್ಕಳ ಕಣ್ಣು ತಪಾಸಣೆ ಕಾರ್ಯ ಪೂರ್ಣಗೊಳಿಸುತ್ತೇವೆ. ಸುಮಾರು 2 ಸಾವಿರ ಮಕ್ಕಳಿಗೆ ಕನ್ನಡಕ ನೀಡಬೇಕಿದೆ. ಶಸ್ತ್ರಚಿಕಿತ್ಸೆ ಅಗತ್ಯವಿದ್ದರೆ ಶಿಫಾರಸು ಮಾಡುತ್ತೇವೆ’ ಎಂದರು.

ಗ್ಲೋಬಲ್ ಐ ಪ್ರತಿಷ್ಠಾನದ ಟ್ರಸ್ಟಿ ಬಾಲಕೃಷ್ಣ, ಎಸ್‌ಎನ್‌ಆರ್‌ ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ತಂತ್ರಜ್ಞ ನಂದೀಶ್, ಆರೋಗ್ಯ ಶಿಕ್ಷಣಾಧಿಕಾರಿಗಳಾದ ಪ್ರಸನ್ನ, ಗೀತಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT