ಸೋಮವಾರ, ಮಾರ್ಚ್ 8, 2021
29 °C

ಗುಣಮಟ್ಟದ ಹಾಲು ಶೇಖರಣೆಗೆ ಒತ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ತಾಲ್ಲೂಕಿನಲ್ಲಿ ಹೆಚ್ಚು ಬಿಎಂಸಿ ಕೇಂದ್ರಗಳನ್ನು ಸ್ಥಾಪಿಸಿ ಶುದ್ಧ ಮತ್ತು ಗುಣಮಟ್ಟದ ಹಾಲು ಶೇಖರಣೆಗೆ ಒತ್ತು ನೀಡಲಾಗುತ್ತದೆ’ ಎಂದು ಕೋಚಿಮುಲ್‌ ನಿರ್ದೇಶಕ ಡಿ.ವಿ.ಹರೀಶ್‌ ಹೇಳಿದರು.

ತಾಲ್ಲೂಕಿನ ಹೊಳೇರಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ನಿರ್ಮಿಸಿರುವ 3 ಸಾವಿರ ಲೀಟರ್‌ ಸಾಮರ್ಥ್ಯದ ಬಿಎಂಸಿ ಘಟಕವನ್ನು ಇತ್ತೀಚೆಗೆ ಉದ್ಘಾಟಿಸಿ ಮಾತನಾಡಿ, ‘ಸಂಘಕ್ಕೆ ಬಿಎಂಸಿ ಘಟಕದ ಸ್ಥಾಪನೆಗೆ ₹ 14 ಲಕ್ಷ ಹಾಗೂ ಸಿವಿಲ್ ಕಾಮಗಾರಿಗೆ ₹ 1 ಲಕ್ಷ ನೀಡಲಾಗಿದೆ’ ಎಂದರು.

‘ಕೋಲಾರ ತಾಲ್ಲೂಕಿನಲ್ಲಿ ಅತಿ ಹೆಚ್ಚು ಹಾಲಿನ ಸಂಘಗಳಿವೆ. ತಾಲ್ಲೂಕಿನ 20 ಬಿಎಂಸಿ ಘಟಕ ಸ್ಥಾಪನೆಗೆ ಒಕ್ಕೂಟದ ಆಡಳಿತ ಮಂಡಳಿ ಸಭೆಯಲ್ಲಿ ಅನುಮೋದನೆ ಪಡೆಯಲಿದೆ. ಬಿಎಂಸಿ ಘಟಕಗಳ ಮೂಲಕ ಕಲಬೆರೆಕೆ ಇಲ್ಲದ ಹಾಲು ಪೂರೈಸಲು ಕ್ರಮ ಕೈಗೊಳ್ಳುತ್ತೇವೆ’ ಎಂದು ತಿಳಿಸಿದರು.

‘ತಾಲ್ಲೂಕಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಸ್ವಸಹಾಯ ಸಂಘಗಳನ್ನು ಸ್ಥಾಪಿಸಿ ಒಕ್ಕೂಟದ ವಿವಿಧ ಯೋಜನೆ ನೀಡಿ ಸಂಘಗಳ ಬಲವರ್ಧನೆಗೆ ಶ್ರಮಿಸುತ್ತೇವೆ. ಫೆ.24ರಿಂದ ಅನ್ವಯವಾಗುವಂತೆ ಹಾಲು ಖರೀದಿ ದರದಲ್ಲಿ ₹ 1 ಹೆಚ್ಚಳವಾಗಲಿದೆ. ರೈತರು ಗುಣಮಟ್ಟದ ಹಾಲು ಉತ್ಪಾದನೆಗೆ ಒತ್ತು ನೀಡಬೇಕು’ ಎಂದು ಕಿವಿಮಾತು ಹೇಳಿದರು.

‘ಬಿಎಂಸಿ ಘಟಕ ಸ್ಥಾಪನೆಯಿಂದ ಹಾಲಿನ ಗುಣಮಟ್ಟದ ಜತೆಗೆ ಜೈವಿಕ ಗುಣಮಟ್ಟ ಕಾಪಾಡಲು ಸಹಾಯವಾಗುತ್ತದೆ. ಒಕ್ಕೂಟದ ತುರ್ತು ಕರೆ, ಗುಂಪು ವಿಮೆ ಯೋಜನೆ, ವಿಮಾ ಯೋಜನೆ, ಲಸಿಕೆ ಕಾರ್ಯಕ್ರಮ, ಪಶು ಆಹಾರ ಖನಿಜ ಮಿಶ್ರಣ ಪಡೆಯಬೇಕು’ ಎಂದು ಕೋಚಿಮುಲ್‌ ಶಿಬಿರ ಉಪ ವ್ಯವಸ್ಥಾಪಕ ಡಾ.ಎ.ಸಿ.ಶ್ರೀನಿವಾಸಗೌಡ ಸಲಹೆ ನೀಡಿದರು.

ಹೊಳೇರಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ವಿ.ವೆಂಕಟೇಶಪ್ಪ, ಸದಸ್ಯರು, ಗ್ರಾ.ಪಂ ಸದಸ್ಯರು ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.