ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಷ್ಟಾಚಾರ ಉಲ್ಲಂಘನೆ: ಶಿಸ್ತುಕ್ರಮಕ್ಕೆ ಒತ್ತಾಯ

ಶಾಸಕ ನಾರಾಯಣಸ್ವಾಮಿ ಕೆಂಡಾಮಂಡಲ: ಸಭೆ ಬಹಿಷ್ಕರಿಸುವ ಎಚ್ಚರಿಕೆ
Last Updated 16 ಡಿಸೆಂಬರ್ 2019, 13:38 IST
ಅಕ್ಷರ ಗಾತ್ರ

ಕೋಲಾರ: ‘ನನ್ನ ಕ್ಷೇತ್ರದಲ್ಲಿ ಇತ್ತೀಚೆಗೆ ನಡೆದ ಸರ್ಕಾರಿ ಕಾರ್ಯಕ್ರಮಗಳಲ್ಲಿ ಶಿಷ್ಟಾಚಾರ ಪಾಲಿಸಿಲ್ಲ. ಅಧಿಕಾರಿಗಳು ನನ್ನನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ. ಈ ಬಗ್ಗೆ ದೂರು ನೀಡಿದರೂ ಜಿ.ಪಂ ಸಿಇಒ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಂಡಿಲ್ಲ’ ಎಂದು ಬಂಗಾರಪೇಟೆ ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ಇಲ್ಲಿ ಸೋಮವಾರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕೆಂಡಾಮಂಡಲರಾದರು.

ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ನಾಗೇಶ್‌ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ಆರಂಭದಲ್ಲೇ ಈ ವಿಚಾರ ಪ್ರಸ್ತಾಪಿಸಿದ ನಾರಾಯಣಸ್ವಾಮಿ, ‘ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಿ ಪ್ರಕರಣ ಇತ್ಯರ್ಥಗೊಳಿಸಬೇಕು. ಇಲ್ಲವಾದರೆ ಸಭೆ ಬಹಿಷ್ಕರಿಸುತ್ತೇನೆ’ ಎಂದು ಗುಡುಗಿದರು.

‘ನನ್ನ ಕ್ಷೇತ್ರದ ವ್ಯಾಪ್ತಿಯ ವಡಗೂರು ಗ್ರಾಮ ಪಂಚಾಯಿತಿಯಲ್ಲಿ ರಾಜೀವ್‌ಗಾಂಧಿ ಸೇವಾ ಕೇಂದ್ರ ಉದ್ಘಾಟನೆ ವೇಳೆ ಅಧಿಕಾರಿಗಳು ಶಿಷ್ಟಾಚಾರ ಉಲ್ಲಂಘಿಸಿದ್ದಾರೆ. ನನ್ನನ್ನು ಆಹ್ವಾನಿಸದೆ ಭಾನುವಾರ ಕಾರ್ಯಕ್ರಮ ಮಾಡಿದ್ದಾರೆ. ಅಧಿಕಾರಿಗಳಿಗೆ ಶಾಸಕರ ಬಗ್ಗೆ ಸ್ವಲ್ಪವೂ ಗೌರವವಿಲ್ಲ. ಸ್ಥಳೀಯ ಚೇಲಾಗಳ ಮಾತು ಕೇಳಿ ಈ ರೀತಿ ಮಾಡಿದ್ದಾರೆ. ಸಮಸ್ಯೆ ಇತ್ಯರ್ಥಪಡಿಸದಿದ್ದರೆ ಸಭೆ ಬಹಿಷ್ಕರಿಸಿ ಧಿಕ್ಕಾರ ಕೂಗಿ ಹೊರ ಹೋಗುತ್ತೇನೆ’ ಎಂದು ಎಚ್ಚರಿಕೆ ನೀಡಿದರು.

‘ಇತ್ತೀಚೆಗೆ ಬೆಂಗನೂರು ಗ್ರಾಮದಲ್ಲಿ ನಡೆದ ಕಾರ್ಯಕ್ರಮಕ್ಕೂ ನನ್ನನ್ನು ಆಹ್ವಾನವಿಲ್ಲ. ವಡಗೂರು ಕಾರ್ಯಕ್ರಮಕ್ಕೆ ಸಂಸದರು, ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಬಂದಿದ್ದಾರೆ. ಅಧಿಕಾರದಲ್ಲಿರದ ಬಿಜೆಪಿ ಮುಖಂಡರು ರಸ್ತೆ ಉದ್ಘಾಟಿಸುತ್ತಾರೆ ಎಂದರೆ ಏನು ಅರ್ಥ?’ ಎಂದು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿ.ಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ (ಸಿಇಒ) ಎಚ್.ವಿ.ದರ್ಶನ್, ‘ಅಧಿಕಾರಿಗಳು ಖಾಸಗಿಯಾಗಿ ಕಾರ್ಯಕ್ರಮ ಮಾಡಿದ್ದಾರೆ’ ಎಂದರು.

ಇದರಿಂದ ಮತ್ತಷ್ಟು ಕೆರಳಿದ ಶಾಸಕರು, ‘ಯಾರು ಬೇಕಾದರೂ ಸರ್ಕಾರಿ ಕಾರ್ಯಕ್ರಮ ಉದ್ಘಾಟಿಸಬಹುದೆಂಬುದು ನಿಮ್ಮ ಲೆಕ್ಕಾಚಾರವಾದರೆ ಜಿ.ಪಂ ಆವರಣದಲ್ಲಿ ನಿರ್ಮಾಣವಾಗುತ್ತಿರುವ ಹೊಸ ಕಟ್ಟಡವನ್ನು ನಾನು ಉದ್ಘಾಟಿಸುತ್ತೇನೆ. ನನ್ನನ್ನು ಯಾರೂ ತಡೆಯಬಾರದು. ಮುಂದೆ ಯಾವುದೇ ಸರ್ಕಾರಿ ಕಾರ್ಯಕ್ರಮವಾಗಲಿ ಬೆಂಬಲಿಗರಿಂದ ಉದ್ಘಾಟನೆ, ಶಂಕುಸ್ಥಾಪನೆ ಮಾಡಿಸುತ್ತೇನೆ. ನೀವು ಪುಡಾರಿಗಳ ಮಾತಿನಂತೆ ನಡೆಯುವುದಾದರೆ ಏನು ಮಾಡಬೇಕೆಂದು ನನಗೂ ಗೊತ್ತಿದೆ’ ಎಂದು ಹರಿಹಾಯ್ದರು.

ಹೆದರುವುದಿಲ್ಲ: ‘ಕಾರ್ಯಕ್ರಮದ ದಿನ ನಾನು ಸಿಇಒಗೆ ಕರೆ ಮಾಡಿ ಹೇಳಿದ್ದರೂ ಅವರು ತಪ್ಪಿತಸ್ಥರ ವಿರುದ್ಧ ಈವರೆಗೆ ಶಿಸ್ತುಕ್ರಮ ಕೈಗೊಂಡಿಲ್ಲ. ಆ ಕಾರ್ಯಕ್ರಮದ ಆಹ್ವಾನಪತ್ರಿಕೆ ಮುದ್ರಿಸಿದ್ದು ಯಾರು ಮತ್ತು ಎಲ್ಲಿ ಎಂಬ ಮಾಹಿತಿ ಕೊಡಿ. ನನ್ನನ್ನು ಸಭೆಯಿಂದ ಹೊರ ಹಾಕಿದರೂ ಹೆದರುವುದಿಲ್ಲ. ಆದರೆ, ತಪ್ಪಿತಸ್ಥರಿಗೆ ತಕ್ಕ ಶಾಸ್ತಿ ಆಗಲೇಬೇಕು’ ಎಂದು ಪಟ್ಟು ಹಿಡಿದರು.

‘ನಾವು ಕಾರ್ಯಕ್ರಮದ ಸ್ಥಳಕ್ಕೆ ಹೋಗುವವರೆಗೂ ಈ ಗೊಂದಲ ಇರಲಿಲ್ಲ. ಜಿಲ್ಲೆಯಲ್ಲಿ ಇಂತಹ ಪ್ರಕರಣಗಳು ಸಾಮಾನ್ಯವಾಗಿವೆ. ಇದಕ್ಕೆ ಕಡಿವಾಣ ಹಾಕಬೇಕು’ ಎಂದು ಜಿ.ಪಂ ಅಧ್ಯಕ್ಷ ಸಿ.ಎಸ್.ವೆಂಕಟೇಶ್ ಮತ್ತು ಉಪಾಧ್ಯಕ್ಷೆ ಯಶೋದಾ ಒತ್ತಾಯಿಸಿದರು.

‘ಶಿಷ್ಟಾಚಾರ ಉಲ್ಲಂಘಿಸಿ ಏಕಪಕ್ಷೀಯ ನಿರ್ಧಾರ ಕೈಗೊಂಡಿರುವ ಅಧಿಕಾರಿಗಳ ವಿರುದ್ಧ ಖಂಡಿತ ಕ್ರಮ ಜರುಗಿಸುತ್ತೇವೆ. ಮುಂದೆ ಯಾವುದೇ ಕಾರ್ಯಕ್ರಮವಿದ್ದರೂ ಜನಪ್ರತಿನಿಧಿಗಳ ಗಮನಕ್ಕೆ

ತಂದು ನಡೆಸಬೇಕು’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಅಧಿಕಾರಿಗಳಿಗೆ ಆದೇಶಿಸಿದರು. ಬಳಿಕ ಶಾಸಕ ನಾರಾಯಣಸ್ವಾಮಿ ಅವರು ಪಟ್ಟು ಸಡಿಲಿಸಿದ್ದರಿಂದ ಸಭೆ ಸುಸೂತ್ರವಾಗಿ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT