ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಹಿಡಿದ ಮುಂಗಾರು: ಬಿತ್ತನೆ ಜೋರು

ಜಿಲ್ಲೆಯ ರೈತರ ಮೊಗದಲ್ಲಿ ಸಂತಸ: ಉತ್ತಮ ಫಸಲಿನ ನಿರೀಕ್ಷೆ
Last Updated 8 ಆಗಸ್ಟ್ 2021, 15:14 IST
ಅಕ್ಷರ ಗಾತ್ರ

ಕೋಲಾರ: ಬರಪೀಡಿತ ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗಿದ್ದು, ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚಿನ ಬಿತ್ತನೆಯಾಗಿದೆ.

ಜಿಲ್ಲೆಯಲ್ಲಿ ಜೂನ್‌ ತಿಂಗಳಿಂದ ಸೆಪ್ಟೆಂಬರ್‌ ಅಂತ್ಯದವರೆಗಿನ ಅವಧಿಯನ್ನು ಮುಂಗಾರು ಹಂಗಾಮು ಎಂದು ಪರಿಗಣಿಸಲಾಗಿದ್ದು, ಸಾಮಾನ್ಯವಾಗಿ ಈ ಅವಧಿಯಲ್ಲಿ ಹೆಚ್ಚಿನ ಮಳೆಯಾಗುತ್ತದೆ. ಹೀಗಾಗಿ ಈ 4 ತಿಂಗಳಲ್ಲಿ ಬಿತ್ತನೆ ಚಟುವಟಿಕೆ ಬಿರುಸಾಗಿರುತ್ತದೆ.

ಮುಂಗಾರು ಹಂಗಾಮಿನಲ್ಲಿ ಪ್ರಮುಖವಾಗಿ ರಾಗಿ, ಮುಸುಕಿನ ಜೋಳ, ಮೇವಿನ ಜೋಳ, ತೊಗರಿ, ಹುರಳಿ, ಹೆಸರುಕಾಳು, ಅಲಸಂದೆ, ಅವರೆ, ಉದ್ದು, ನೆಲಗಡಲೆ, ಸೂರ್ಯಕಾಂತಿ, ಎಳ್ಳು, ಸಾಸಿವೆ, ಹರಳು, ಸೋಯಾ ಅವರೆ ಹಾಗೂ ಹುಚ್ಚೆಳ್ಳು ಬೆಳೆಯನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಅಲ್ಲದೇ, ವಾಣಿಜ್ಯ ಬೆಳೆಗಳಾದ ಭತ್ತ, ಕಬ್ಬು ಹಾಗೂ ಹತ್ತಿಯನ್ನು ಬೆಳೆಯಲಾಗುತ್ತದೆ.

ಜಿಲ್ಲೆಯಲ್ಲಿ ಜನವರಿಯಿಂದ ಜುಲೈ ಅಂತ್ಯದವರೆಗೆ ವಾಡಿಕೆ ಮಳೆ ಪ್ರಮಾಣ 276.8 ಮಿ.ಮೀ ಇದೆ. ಈ ಬಾರಿ ಆ.8ರವರೆಗಿನ ಅಂಕಿ ಸಂಖ್ಯೆ ಪ್ರಕಾರ ವಾಡಿಕೆಗಿಂತ ಹೆಚ್ಚು ಅಂದರೆ ಸರಾಸರಿ 435.6 ಮಿ.ಮೀ ಮಳೆಯಾಗಿದೆ. ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 6 ತಾಲ್ಲೂಕುಗಳಿಂದ 97,900 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮಾಡುವ ಗುರಿ ಇತ್ತು. ಇದರಲ್ಲಿ ಈಗಾಗಲೇ 75,068 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಶೇ 76.68ರಷ್ಟು ಬಿತ್ತನೆ ಗುರಿ ಸಾಧನೆಯಾಗಿದೆ.

ಮುಳಬಾಗಿಲು ತಾಲ್ಲೂಕಿನಲ್ಲಿ ಅತಿ ಹೆಚ್ಚು 18,420 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಕೆಜಿಎಫ್‌ ತಾಲ್ಲೂಕಿನಲ್ಲಿ ಅತಿ ಕಡಿಮೆ 7,124 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಉಳಿದಂತೆ ಬಂಗಾರಪೇಟೆ ತಾಲ್ಲೂಕಿನಲ್ಲಿ 13,703 ಹೆಕ್ಟೇರ್‌, ಕೋಲಾರ ತಾಲ್ಲೂಕಿನಲ್ಲಿ 14,949, ಮಾಲೂರು 11,814 ಹಾಗೂ ಶ್ರೀನಿವಾಸಪುರ ತಾಲ್ಲೂಕಿನಲ್ಲಿ 9,058 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ.

ರೈತರಿಗೆ ನಷ್ಟ: ಕಳೆದ ವರ್ಷ ಮುಂಗಾರು ಹಂಗಾಮಿನಲ್ಲಿ ಸುಮಾರು 1 ಲಕ್ಷ ಹೆಕ್ಟೇರ್‌ ಬಿತ್ತನೆ ಗುರಿ ಹೊಂದಲಾಗಿತ್ತು. ಆದರೆ, ಮುಂಗಾರು ಹಂಗಾಮಿನಲ್ಲಿ ಮಳೆ ಕೈಕೊಟ್ಟಿದ್ದರಿಂದ ನಿರೀಕ್ಷಿತ ಪ್ರಮಾಣದಲ್ಲಿ ಬಿತ್ತನೆ ಗುರಿ ಸಾಧನೆಯಾಗಲಿಲ್ಲ. ಮತ್ತೊಂದೆಡೆ ಬಿತ್ತನೆ ನಂತರ ಮಳೆ ಬಾರದಿದ್ದರಿಂದ ಬೆಳೆಗಳು ಒಣಗಿ ರೈತರಿಗೆ ಸಾಕಷ್ಟು ನಷ್ಟವಾಯಿತು.

ರಸಗೊಬ್ಬರ ದಾಸ್ತಾನು: ಜಿಲ್ಲೆಯಲ್ಲಿ ಈ ಮುಂಗಾರಿನಲ್ಲಿ ರಸಗೊಬ್ಬರದ ಬೇಡಿಕೆ 22,940 ಮೆಟ್ರಿಕ್‌ ಟನ್‌ ಇತ್ತು. ಆದರೆ, 20,335 ಮೆಟ್ರಿಕ್‌ ಟನ್‌ ಪೂರೈಕೆಯಾಗಿದೆ. ಇದರಲ್ಲಿ 15,327 ಮೆಟ್ರಿಕ್‌ ಟನ್‌ ಗೊಬ್ಬರವನ್ನು ರೈತರಿಗೆ ಮಾರಾಟ ಮಾಡಲಾಗಿದೆ. ಕರ್ನಾಟಕ ರಾಜ್ಯ ಸಹಕಾರ ಮಾರುಕಟ್ಟೆ ಒಕ್ಕೂಟದಲ್ಲಿ (ಕೆಎಸ್‌ಸಿಎಂಎಫ್‌) 1,508 ಮೆಟ್ರಿಕ್‌ ಟನ್‌ ಮತ್ತು ಖಾಸಗಿಯವರ ಬಳಿ 4,866 ಮೆಟ್ರಿಕ್‌ ಟನ್‌ ಸೇರಿದಂತೆ 6,374 ಮೆಟ್ರಿಕ್‌ ಟನ್‌ ರಸಗೊಬ್ಬರ ದಾಸ್ತಾನು ಇದೆ.

ಜಿಲ್ಲೆಯಾದ್ಯಂತ ಈ ಬಾರಿ ಉತ್ತಮ ಮಳೆಯಾಗಿರುವುದರಿಂದ ಕೆರೆ ಕುಂಟೆಗಳು, ಚೆಕ್‌ಡ್ಯಾಂ ಹಾಗೂ ರೈತರ ಜಮೀನುಗಳಲ್ಲಿನ ಕೃಷಿ ಹೊಂಡಗಳು ಭರ್ತಿಯಾಗಿವೆ. ಇದರಿಂದ ಬೆಳೆಗಳಿಗೆ ಹಲವು ತಿಂಗಳವರೆಗೆ ನೀರು ಸಾಕಾಗಲಿದ್ದು, ರೈತರ ಮೊಗದಲ್ಲಿ ಸಂತಸ ಮನೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT