ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ| ಜಿಲ್ಲಾ ಪಂಚಾಯಿತಿ ಆದಾಯ ಹೆಚ್ಚಳ ನಿರೀಕ್ಷೆ: ಯುಕೇಶ್ ಕುಮಾರ್

ಗ್ರಾ.ಪಂ ವ್ಯಾಪ್ತಿಯ ಆಸ್ತಿ ತೆರಿಗೆ ಪರಿಷ್ಕರಣೆ: ಜಿ.ಪಂ ಸಿಇಒ ಯುಕೇಶ್ ಕುಮಾರ್
Last Updated 23 ಫೆಬ್ರುವರಿ 2023, 4:00 IST
ಅಕ್ಷರ ಗಾತ್ರ

ಕೋಲಾರ: ‘ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಆಸ್ತಿಗಳ ತೆರಿಗೆ ಪರಿಷ್ಕರಣೆಯಾಗಿದ್ದು, ಜಿಲ್ಲಾ ಪಂಚಾಯಿತಿಗೆ ಈಗಿನದ್ದಕ್ಕಿಂತ ಮೂರು ಪಟ್ಟು ಹೆಚ್ಚು ಆದಾಯ ಬರಲಿದೆ. ಜೊತೆಗೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಬಹುತೇಕ ಪೂರ್ಣಗೊಳಿಸಲಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಯುಕೇಶ್ ಕುಮಾರ್ ತಿಳಿಸಿದರು.

‘ಆಸ್ತಿ ತೆರಿಗೆ ವ್ಯಾಪ್ತಿಯಿಂದ ಬಿಟ್ಟು ಹೋಗಿರುವಂತಹ ಆಸ್ತಿಗಳ ಪತ್ತೆ ಕಾರ್ಯ ನಡೆಯುತ್ತಿದೆ. ತಿಂಗಳಲ್ಲಿ ಸರ್ವೇ ಕಾರ್ಯ ಪೂರ್ಣಗೊಳ್ಳಲಿದೆ’ ಎಂದು ಬುಧವಾರ ನಗರದ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

‘ಜಿಲ್ಲೆಯ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಸುಮಾರು 4.5 ಲಕ್ಷ ಸ್ವತ್ತು ಇದ್ದು, ಸರ್ಕಾರ ಆಸ್ತಿ ತೆರಿಗೆ ಪರಿಷ್ಕರಣೆ ಮಾಡಿದ್ದರಿಂದ ಆದಾಯ ಹೆಚ್ಚಿದೆ. ಜತೆಗೆ ಶೇ 100ರಷ್ಟು ಆಸ್ತಿ ತೆರಿಗೆ ಸಂಗ್ರಹಕ್ಕೂ ಕ್ರಮ ವಹಿಸಲಾಗಿದೆ’ ಎಂದರು.

‘ನರೇಗಾ ಯೋಜನೆಯಡಿ ಈಗಾಗಲೇ ಕೆರೆಗಳ ಅಭಿವೃದ್ಧಿಗಾಗಿ ₹30 ಕೋಟಿ ಖರ್ಚು ಮಾಡಲಾಗಿದ್ದು, ಬಹುತೇಕ ಕೆರೆಗಳಲ್ಲಿ ಹೂಳು ತೆಗೆಯುವ ಕೆಲಸ ಪೂರ್ಣಗೊಂಡಿವೆ. ಉಳಿದಂತೆ ಜಿಲ್ಲಾ ಪಂಚಾಯಿತಿ ಬಂದಿರುವ ₹7 ಕೋಟಿ ಕಾರ್ಪೊರೇಟ್ ಖಾಸಗಿ ಸಹಭಾಗಿತ್ವದ (ಸಿಎಸ್ ಆರ್) ನಿಧಿಯಲ್ಲಿ 12 ಕೆರೆಗಳ ಅಭಿವೃದ್ಧಿಗೆ ಟೆಂಡರ್ ಕರೆಯಲಾಗಿದೆ. ಸರೋವರ ಯೋಜನೆಯಡಿ ₹7 ಕೋಟಿ ಬಂದಿದೆ’ ಎಂದು ತಿಳಿಸಿದರು.

‘ಅಮೃತ ಸರೋವರ ಯೋಜನೆಯಡಿ 130 ಕೆರೆಗಳಲ್ಲಿ ಹೂಳೆತ್ತುವ ಹಾಗೂ ಕಟ್ಟೆ ಅಭಿವೃದ್ಧಿ ಕೆಲಸಗಳಾಗಿದೆ. ಶ್ರೀನಿವಾಸಪುರದಲ್ಲಿ 5 ಪರಿಸರ ಸಂರಕ್ಷಣಾ ಘಟಕಗಳನ್ನು ನಿರ್ಮಾಣ ಮಾಡಲಾಗಿದೆ. ಉಳಿದಂತೆ ಜಿಲ್ಲೆಯಾದ್ಯಂತ 135 ಶಾಲೆಗಳಿಗೆ ಕಾಂಪೌಂಡ್ ನಿರ್ಮಿಸಿದ್ದು, 327 ಅಡುಗೆ ಕೋಣೆಗಳು, 460 ಶೌಚಾಲಯಗಳು, 488 ಕೈತೋಟಗಳು, 166 ಆಟದ ಮೈದಾನಗಳು, 477 ಮಳೆ ನೀರು ಕೊಯ್ಲು ಪರಿಕರಗಳನ್ನು ಅಳವಡಿಸಲಾಗಿದೆ’ ಎಂದರು.

‘ಜಿ.ಪಂ ಕಟ್ಟಡಗಳ ನಿರ್ವಹಣೆಗೆ ಬರುವಂತಹ ಅನುದಾನವನ್ನು ಈ ಹಿಂದೆ ತುಂಡು ಗುತ್ತಿಗೆ ನೀಡಲಾಗುತ್ತಿತ್ತು. ಆದರೆ, ಇದೇ ಮೊದಲ ಬಾರಿ ಟೆಂಡರ್ ಪ್ರಕ್ರಿಯೆ ನಡೆಸಿದ್ದು, ಸುಮಾರು ₹ 11 ಲಕ್ಷ ಉಳಿತಾಯವಾಗಿದೆ. ಯಾವುದೇ ರೀತಿಯ ಅಕ್ರಮಗಳಿಗೆ ಅವಕಾಶವನ್ನು ನೀಡಿಲ್ಲ. ಸಿಎಸ್‍ಆರ್ ಅನುದಾನವನ್ನು ಪಂಚಾಯತ್ ಎಂಜಿನಿಯರಿಂಗ್ ವಿಭಾಗದ ಮೂಲಕ ಟೆಂಡರ್ ಪ್ರಕ್ರಿಯೆ ನಡೆಸಲಾಗಿದೆ’ ಎಂದು ಹೇಳಿದರು.

‘ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿಯಿಂದ ಮತದಾರರ ನೋಂದಣಿ ಕುರಿತು ವ್ಯಾಪಕ ಪ್ರಚಾರ ನೀಡಿದ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಶೇ 2.38 ರಷ್ಟು ಯುವ ಮತದಾರರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ರಾಜ್ಯದಲ್ಲಿಯೇ ಅತಿ ಹೆಚ್ಚಿನ ಯುವಕರು ಸೇರ್ಪಡೆಯಾದ ಪಟ್ಟಿಯಲ್ಲಿ ಕೋಲಾರ 3ನೇ ಸ್ಥಾನದಲ್ಲಿದೆ’ ಎಂದರು.

‘ಜಿಲ್ಲೆಯಲ್ಲಿ 1,590 ಸುಸಜ್ಜಿತ ಮತಗಟ್ಟೆ ಗುರುತಿಸಲಾಗಿದೆ. ಕೆಲವು ಶಿಥಿಲಗೊಂಡು ಕಟ್ಟಡಗಳಲ್ಲಿರುವ ಮತಗಟ್ಟೆಗಳನ್ನು ಸಮೀಪದ ಸರಕಾರಿ ಕಟ್ಟಡಗಳಿಗೆ ವರ್ಗಾಯಿಸಲಾಗಿದೆ. ಪ್ರಸಕ್ತ ಚುನಾವಣಾ ಸಾಲಿನಲ್ಲಿ ಸ್ವೀಪ್‍ಗಾಗಿ ಸುಮಾರು ₹40 ಲಕ್ಷ ಅನುದಾನವನ್ನು ಪ್ರಚಾರ ಕಾರ್ಯಗಳಿಗಾಗಿ ಮೀಸಲಿರಿಸಲಾಗಿದೆ. ಮತದಾನ ಮಾಡುವ ಬಗ್ಗೆ ಜನರಲ್ಲಿ ಹೆಚ್ಚಿನ ಜಾಗೃತಿ ಉಂಟುಮಾಡಲಾಗುವುದು’ ಎಂದು ತಿಳಿಸಿದರು.

450 ಅಂಗನವಾಡಿ ಕೇಂದ್ರ ಅಭಿವೃದ್ಧಿ

‘ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ಹೊಸ ಅಂಗನವಾಡಿಗಳ ನಿರ್ಮಾಣ ಕಾರ್ಯ ನಡೆಸುತ್ತಿದ್ದು, ಶಿಥಿಲಗೊಂಡಿದ್ದ 450 ಅಂಗನವಾಡಿ ಕೇಂದ್ರಗಳನ್ನು ನವೀಕರಿಸಿ ಅಭಿವೃದ್ಧಿ ಮಾಡಲಾಗಿದೆ. ಕೆಜಿಎಫ್ ವ್ಯಾಪ್ತಿಯಲ್ಲಿ ಟಿ.ಗೊಲ್ಲಹಳ್ಳಿ, ಕ್ಯಾಸಂಬಳ್ಳಿ, ಮಲ್ಲಂಪಲ್ಲಿ, ರಾಮಸಾಗರ, ಬೇತಮಂಗಲದಲ್ಲಿ ಅಂಗನವಾಡಿಗಳಲ್ಲಿ ಖಾಸಗಿ ಮಾದರಿಯಲ್ಲಿ ಮಾಂಟೆಸ್ಸರಿ ಶಿಕ್ಷಣ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ಎಸ್ಎನ್ಆರ್ ಆಸ್ಪತ್ರೆ ಆವರಣದಲ್ಲಿರುವ ಶಿಶುಕೇಂದ್ರಗಳಿಗೂ ವಿಸ್ತರಿಸಲಾಗುವುದು’ ಎಂದು ಯುಕೇಶ್ ಕುಮಾರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT