ಸೋಮವಾರ, ಜೂನ್ 21, 2021
29 °C

ಸುಳ್ಳು ಮಾಹಿತಿಯಿಂದ ಸೋಂಕು ಹೆಚ್ಚಳಕ್ಕೆ ದಾರಿ: ಸಚಿವ ಅರವಿಂದ ಲಿಂಬಾವಳಿ ಕಳವಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಕೋವಿಡ್ ಪರೀಕ್ಷೆ ಮಾಡಿಸಿಕೊಂಡವರು ಸರಿಯಾದ ಮೊಬೈಲ್ ಸಂಖ್ಯೆ ಮತ್ತು ವಿಳಾಸ ಕೊಟ್ಟು ಸೋಂಕಿನ ನಿಯಂತ್ರಣಕ್ಕೆ ಸಹಕರಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಅರವಿಂದ ಲಿಂಬಾವಳಿ ಮನವಿ ಮಾಡಿದರು.

ಇಲ್ಲಿ ಬುಧವಾರ ಕೋವಿಡ್ ವಾರ್‌ರೂಮ್ ಮತ್ತು ಎಸ್‌ಎನ್‌ಆರ್‌ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿ, ‘ಕೋವಿಡ್‌ ಪರೀಕ್ಷೆ ಮಾಡಿಸಿಕೊಂಡವರು ತಪ್ಪು ಮೊಬೈಲ್‌ ಸಂಖ್ಯೆ ಮತ್ತು ವಿಳಾಸ ಕೊಟ್ಟು ವಂಚಿಸುತ್ತಿದ್ದಾರೆ. ಇದು ಸೋಂಕು ಹೆಚ್ಚಳಕ್ಕೆ ದಾರಿ ಮಾಡಿ ಕೊಡುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಕೋವಿಡ್ ಪರೀಕ್ಷೆ ಮಾಡಿಸಿಕೊಂಡವರಲ್ಲಿ ಶೇ 30ರಷ್ಟು ಮಂದಿಯನ್ನು ಕೋವಿಡ್ ವಾರ್ ರೂಮ್‌ನಿಂದ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ಪರೀಕ್ಷೆ ಮಾಡಿಸಿಕೊಂಡವರಲ್ಲಿ ಬಹುಪಾಲು ಮಂದಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿರುತ್ತಾರೆ. ಪರೀಕ್ಷೆ ಮಾಡಿಸಿಕೊಂಡವರಿಗೆ ವೈದ್ಯಕೀಯ ವರದಿ ತಿಳಿಸಲು ವಾರ್‌ರೂಮ್‌ನಿಂದ ಕರೆ ಮಾಡಿದಾಗ ಸರಿಯಾದ ವಿಳಾಸ, ಮೊಬೈಲ್ ಸಂಖ್ಯೆ ನೀಡಬೇಕು’ ಎಂದು ಕೋರಿದರು.

‘ವೈದ್ಯರು, ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಗ್ರಾಮ ಪಂಚಾಯಿತಿ ಕಾರ್ಯಪಡೆ ಸಮಿತಿ ಸದಸ್ಯರು ಸೋಂಕಿತರ ಮನೆ ಮನೆಗೆ ಭೇಟಿ ಕೊಟ್ಟು ಪರಿಶೀಲನೆ ಮಾಡಿ ಜೀವ ರಕ್ಷಣೆ ಮಾಡುತ್ತಾರೆ. ಸೋಂಕಿತರು ಹಾಗೂ ಕುಟುಂಬ ಸದಸ್ಯರು ಅವರಿಗೆ ಸಹಕಾರ ನೀಡಬೇಕು’ ಎಂದು ಹೇಳಿದರು.

100 ಬೆಡ್‌ ವ್ಯವಸ್ಥೆ: ‘ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಆಮ್ಲಜನಕದ ಸಂಪರ್ಕವುಳ್ಳ 100 ಬೆಡ್‌ಗಳ ವ್ಯವಸ್ಥೆ ಮಾಡುತ್ತೇವೆ. ಎಸ್‌ಎನ್‌ಆರ್‌ ಜಿಲ್ಲಾ ಆಸ್ಪತ್ರೆಯಲ್ಲಿನ ಆಮ್ಲಜನಕ ಸಮಸ್ಯೆಯನ್ನು ಶೀಘ್ರವೇ ಪರಿಹರಿಸುತ್ತೇವೆ. ಒಂದು ವಾರದೊಳಗೆ ಎಸ್‌ಎನ್‌ಆರ್‌ ಆಸ್ಪತ್ರೆ ಮತ್ತು ಕೆಜಿಎಫ್‌ ಆಸ್ಪತ್ರೆಯಲ್ಲಿ ಆಮ್ಲಜನಕ ಸೌಲಭ್ಯವುಳ್ಳ ತಲಾ 50 ಬೆಡ್‌ ವ್ಯವಸ್ಥೆ ಮಾಡಲಾಗುತ್ತದೆ’ ಎಂದು ಭರವಸೆ ನೀಡಿದರು.

‘ಜಿಲ್ಲಾಡಳಿತದ ಸುಪರ್ದಿಗೆ ಒಳಪಡುವ ಆಸ್ಪತ್ರೆಗಳಲ್ಲಿನ ಬೆಡ್‌ಗಳ ಲಭ್ಯತೆ ಬಗ್ಗೆ ಜಿಲ್ಲಾಧಿಕಾರಿ ಪ್ರತಿನಿತ್ಯ ಪ್ರಕಟಣೆ ನೀಡಬೇಕು. ಪ್ರತಿ ತಾಲ್ಲೂಕು ಆಸ್ಪತ್ರೆಯಲ್ಲಿ ವೈದ್ಯಕೀಯ ಆಮ್ಲಜನಕದ ಸಂಪರ್ಕವುಳ್ಳ ಬೆಡ್‌ನ ಸಂಖ್ಯೆ ಹೆಚ್ಚಿಸಲಾಗುತ್ತದೆ ಮತ್ತು ಆಮ್ಲಜನಕ ಘಟಕ ನಿರ್ಮಿಸಲಾಗುತ್ತದೆ’ ಎಂದು ಮಾಹಿತಿ ನೀಡಿದರು.

‘5 ದಿನಗಳ ಹಿಂದೆ ಕೊರೊನಾ ಸೋಂಕು ದೃಢಪಟ್ಟಿರುವವರ ಮನೆಗೆ ಔಷಧ ಮಾತ್ರೆಯ ಕಿಟ್ ಕೊಡಲಾಗುತ್ತಿದೆ. ಕಿಟ್‌ನ ಅಗತ್ಯವಿರುವ ಸೋಂಕಿತರು ತಾಲ್ಲೂಕು ವೈದ್ಯಾಧಿಕಾರಿಗಳನ್ನು ಸಂಪರ್ಕಿಸಿದರೆ ಗ್ರಾ.ಪಂ ಕಾರ್ಯಪಡೆ ಸದಸ್ಯರು ಕಿಟ್‌ ತಂದುಕೊಡುತ್ತಾರೆ. 45 ವರ್ಷ ದಾಟಿದವರಿಗೆ ಮತ್ತು ಸ್ಥಳೀಯರಿಗೆ ಕೋವಿಡ್‌ ಲಸಿಕೆ ಕೊಡಲು ಆದ್ಯತೆ ನೀಡಬೇಕು’ ಎಂದು ಸೂಚಿಸಿದರು.

ಪರೀಕ್ಷೆ ಮಾಡಿಸಿ: ‘ಕೋವಿಡ್‌ ಲಕ್ಷಣ ಕಾಣಿಸಿಕೊಂಡರೆ ಜನರು ಹೆದರದೆ ಶೀಘ್ರವೇ ಪರೀಕ್ಷೆ ಮಾಡಿಸಿ ವೈದ್ಯರ ಸಲಹೆಯಂತೆ ನಡೆದುಕೊಳ್ಳಬೇಕು. ವೈದ್ಯರು, ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಗ್ರಾಮೀಣ ಭಾಗದಲ್ಲಿ ಕೊರೊನಾ ಸೋಂಕಿತರನ್ನು ಪತ್ತೆ ಮಾಡಿ ಶೀಘ್ರವೇ ಕೋವಿಡ್ ಆರೈಕೆ ಕೇಂದ್ರಕ್ಕೆ ದಾಖಲಿಸಬೇಕು’ ಎಂದು ತಿಳಿಸಿದರು.

ಸಂಸದ ಎಸ್.ಮುನಿಸ್ವಾಮಿ, ಜಿಲ್ಲಾಧಿಕಾರಿ ಆರ್.ಸೆಲ್ವಮಣಿ, ಜಿ.ಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎನ್.ಎಂ.ನಾಗರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್‌ರೆಡ್ಡಿ, ತಹಶೀಲ್ದಾರ್‌ ಶೋಭಿತಾ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು