ಶನಿವಾರ, ಜೂಲೈ 11, 2020
22 °C
ಆನ್‌ಲೈನ್‌ ವಹಿವಾಟು ಆರಂಭ: ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಗೋವಿಂದಗೌಡ ಹೇಳಿಕೆ

ಕೋಲಾರ | ಫ್ಯಾಕ್ಸ್‌ ಗಣಕೀಕರಣ: ಜುಲೈ 8ರ ಗಡುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಜುಲೈ 8ರೊಳಗೆ 100 ಫ್ಯಾಕ್ಸ್‌ಗಳ ಗಣಕೀಕರಣ ಪ್ರಕ್ರಿಯೆ ಪೂರ್ಣಗೊಳಿಸಿ ಜುಲೈ 9ರಿಂದ ಆನ್‌ಲೈನ್‌ ವಹಿವಾಟು ಆರಂಭಿಸಲಾಗುತ್ತದೆ’ ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಎಂ.ಗೋವಿಂದಗೌಡ ತಿಳಿಸಿದರು.

ಇಲ್ಲಿ ಮಂಗಳವಾರ ನಡೆದ ಡಿಸಿಸಿ ಬ್ಯಾಂಕ್‌ನ ಜಿಲ್ಲಾ ಮಟ್ಟದ ಮೇಲ್ವಿಚಾರಣಾ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ‘ಈಗಾಗಲೇ 25 ಫ್ಯಾಕ್ಸ್‌ಗಳ ಗಣಕೀಕರಣ ಮುಗಿದಿದೆ. ಅಫೆಕ್ಸ್ ಬ್ಯಾಂಕ್ ನಿರ್ದೇಶಕರ ₹ 35 ಲಕ್ಷ ಅನುದಾನದಲ್ಲಿ ಫ್ಯಾಕ್ಸ್‌ಗಳಿಗೆ 100 ಕಂಪ್ಯೂಟರ್‌ ನೀಡಲಾಗುತ್ತಿದೆ’ ಎಂದು ಹೇಳಿದರು.

‘ಜುಲೈ ಅಂತ್ಯದೊಳಗೆ ಎರಡೂ ಜಿಲ್ಲೆಗಳ ಎಲ್ಲಾ 190 ಫ್ಯಾಕ್ಸ್‌ಗಳ ಗಣಕೀಕರಣ ಹಾಗೂ ಲೆಕ್ಕ ಪರಿಶೋಧನೆ ಪೂರ್ಣಗೊಳಿಸುತ್ತೇವೆ. ವರ್ಷಾಂತ್ಯಕ್ಕೆ ₹ 750 ಕೋಟಿ ಠೇವಣಿ ಸಂಗ್ರಹದ ಗುರಿ ಹೊಂದಲಾಗಿದೆ. ಬ್ಯಾಂಕ್‌ನ ಎನ್‌ಪಿಎ ಪ್ರಮಾಣವನ್ನು 1.5ಕ್ಕೆ ಇಳಿಸಲು ಪ್ರಯತ್ನ ಮಾಡುತ್ತಿದ್ದೇವೆ. ಸಾಲ ವಿತರಣಾ ವ್ಯವಸ್ಥೆ ಸುಧಾರಣೆ, ಆಂತರಿಕ ಸೋರಿಕೆ ತಡೆಗೆ ಕ್ರಮ ಕೈಗೊಂಡಿದ್ದೇವೆ’ ಎಂದು ಮಾಹಿತಿ ನೀಡಿದರು.

‘ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆ ವ್ಯಾಪ್ತಿಯಲ್ಲಿ ಹೊಸದಾಗಿ 10 ಶಾಖೆ ತೆರೆಯುತ್ತೇವೆ. ಬ್ಯಾಂಕ್‌ನ 10 ವರ್ಷಗಳ ಹಿಂದಿನ ಸ್ಥಿತಿ ನೆನೆದು ಕೆಲಸ ಮಾಡಬೇಕು. ರೈತರು, ಮಹಿಳೆಯರ ಆರ್ಥಿಕ ಸದೃಢತೆಗೆ ನೆರವಾಗುತ್ತೇವೆ’ ಎಂದು ಭರವಸೆ ನೀಡಿದರು.

ಅವಸಾನದಿಂದ ಉನ್ನತಿ: ‘ಡಿಸಿಸಿ ಬ್ಯಾಂಕ್ ಅವಸಾನದಿಂದ ಉನ್ನತಿಯತ್ತ ಸಾಗಿ ರಾಜ್ಯದ ಮೊದಲ ಬ್ಯಾಂಕ್ ಆಗಿದೆ. ಋಣಾತ್ಮಕ ಕ್ರಮಾಂಕ ಹೊಂದಿದ್ದ ಬ್ಯಾಂಕ್ ಇಂದು ₹ 108 ಕೋಟಿ ಧನಾತ್ಮಕ ಕ್ರಮಾಂಕದತ್ತ ಮುನ್ನಡೆದಿದೆ’ ಎಂದು ನಬಾರ್ಡ್ ಸಹಾಯಕ ಪ್ರಧಾನ ವ್ಯವಸ್ಥಾಪಕ ನಟರಾಜನ್ ಮೆಚ್ಚುಗೆ ವ್ಯಕ್ತಪಡಿಸಿದರು.

‘ರೈತರು ಸಂಕಷ್ಟದಲ್ಲಿದ್ದಾರೆ. ಹೈನುಗಾರಿಕೆಯಲ್ಲಿ ತೊಡಗಿರುವ ರೈತರಿಗೆ ಬ್ಯಾಂಕ್ ಬೆಳೆ ಸಾಲ ನೀಡಬೇಕು. ₹ 16 ಸಾವಿರ ನಿರ್ವಹಣಾ ವೆಚ್ಚವನ್ನು ಅವರು ಸಹಕಾರ ಸಂಘಕ್ಕೆ ಹಾಲು ಹಾಕುತ್ತಿರುವ ದಾಖಲೆ ಆಧಾರದ ಮೇಲೆ ಕೊಡಬಹುದು. ತೋಟಗಾರಿಕಾ ಬೆಳೆಗಳಿಗೆ ಸಾಲ ನೀಡಲು ಒತ್ತು ಕೊಡಿ. ಬೆಳಗಳ ನಿರ್ವಹಣೆಗೂ ₹ 16 ಸಾವಿರ ನಿರ್ವಹಣಾ ವೆಚ್ಚ ನೀಡಲು ಅವಕಾಶವಿದೆ’ ಎಂದರು.

ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ನಾಗರಾಜ್, ವ್ಯವಸ್ಥಾಪಕ ನಿರ್ದೇಶಕ ರವಿ, ಲೆಕ್ಕ ಪರಿಶೋಧನಾ ಇಲಾಖೆ ಚಿಕ್ಕಬಳ್ಳಾಪುರ ಜಿಲ್ಲೆ ಉಪ ನಿರ್ದೇಶಕಿ ಭಾವನಾ, ಕೋಲಾರ ಜಿಲ್ಲಾ ಉಪ ನಿರ್ದೇಶಕಿ ಶಾಂತಕುಮಾರಿ, ಸಹಾಯಕ ನಿರ್ದೇಶಕರಾದ ವೆಂಕಟೇಶ್, ಸುಬ್ರಮಣಿ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು