ಮಂಗಳವಾರ, ಏಪ್ರಿಲ್ 7, 2020
19 °C
ಎಂವಿಕೆ ಗೋಲ್ಡನ್ ಡೇರಿ ಟೆಂಡರ್‌ ರದ್ದು

ಎಂವಿಕೆ ಗೋಲ್ಡನ್ ಡೇರಿ ನಿರ್ಮಾಣಕ್ಕೆ ಸರ್ಕಾರ ಅಡ್ಡಿ: ಒಗ್ಗೂಡಿ ಹೋರಾಡುವ ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ‘ಎಂವಿಕೆ ಗೋಲ್ಡನ್ ಡೇರಿ ನಿರ್ಮಾಣಕ್ಕೆ ಅಡ್ಡಿಪಡಿಸಿ ಸರ್ಕಾರದಿಂದ ಹೊರಡಿಸಿರುವ ಆದೇಶ ಹಿಂಪಡೆಯದಿದ್ದರೆ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ಒಗ್ಗೂಡಿ ಹೋರಾಟ ನಡೆಸುತ್ತೇವೆ’ ಎಂದು ಕೋಚಿಮುಲ್‌ ಅಧ್ಯಕ್ಷ ಹಾಗೂ ಶಾಸಕ ಕೆ.ವೈ.ನಂಜೇಗೌಡ ಎಚ್ಚರಿಕೆ ನೀಡಿದರು.

ಇಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಕೋಚಿಮುಲ್‌ ವಿಭಜನೆ ಮಾಡಬೇಕೆಂದು ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸುಧಾಕರ್ ಒತ್ತಾಯಿಸಿದ್ದಾರೆ. ಆದರೆ, ಅವರು ಕೋಲಾರ ಜಿಲ್ಲೆಯ ಎಂವಿಕೆ ಗೋಲ್ಡನ್ ಡೇರಿ ಟೆಂಡರ್‌ ಪ್ರಕ್ರಿಯೆಗೆ ಅಡ್ಡಗಾಲು ಹಾಕಿರುವುದು ಸರಿಯಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಸುಧಾಕರ್ ಸಹಕಾರ ಸಚಿವರ ಮೇಲೆ ಒತ್ತಡ ತಂದು ಟೆಂಡರ್‌ ಸ್ಥಗಿತಗೊಳಿಸುವಂತೆ ಆದೇಶ ಮಾಡಿಸಿದ್ದಾರೆ, ಇದರಿಂದ ಬೇಸರವಾಗಿದೆ. ಈ ವಿಚಾರವಾಗಿ ಎಲ್ಲರೂ ಒಟ್ಟಿಗೆ ಹೋರಾಟ ನಡೆಸುತ್ತೇವೆ. ನಾವೇನೂ ಚಿಲ್ಲರೆ ರಾಜಕಾರಣಿಗಳಲ್ಲ. ಅಭಿವೃದ್ಧಿ ಕೆಲಸಕ್ಕೆ ಅಡ್ಡಿಪಡಿಸಿದರೆ ಹೋರಾಟ ಮಾಡುವುದು ಗೊತ್ತಿದೆ. ಟೆಂಡರ್ ಸ್ಥಗಿತಕ್ಕೆ ಆದೇಶ ಹೊರಡಿಸುವ ಮುನ್ನ ಜಿಲ್ಲೆಯ ಜನಪ್ರತಿನಿಧಿಗಳ ಗಮನಕ್ಕೂ ತರಬೇಕಿತ್ತು’ ಎಂದರು.

‘ಟೆಂಡರ್‌ ಸ್ಥಗಿತ ಆದೇಶದ ವಿಚಾರವಾಗಿ ಸಚಿವ ಸುಧಾಕರ್ ಜತೆಗೆ ಚರ್ಚಿಸಿದ್ದೇವೆ. ಸಹಕಾರ ಸಚಿವರೊಂದಿಗೆ ಚರ್ಚಿಸಿ ಆದೇಶ ರದ್ದು ಮಾಡಿಸುವುದಾಗಿ ಅವರು ಭರವಸೆ ಕೊಟ್ಟಿದ್ದಾರೆ. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಜನ ಅಣ್ಣ ತಮ್ಮಂದಿರಂತೆ ಇದ್ದಾರೆ. ಕೋಚಿಮುಲ್‌ನಿಂದ ಚಿಕ್ಕಬಳ್ಳಾಪುರ ಜಿಲ್ಲೆಗೆ ಹೋಗಬೇಕಾದ ಭಾಗವನ್ನು ವಿಂಗಡಣೆ ಮಾಡಲಿ. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ತೀರ್ಮಾನ ಆಗಬೇಕು’ ಎಂದು ಹೇಳಿದರು.

‘ಕೋಚಿಮುಲ್ ವಿಭಜನೆ ಕುರಿತು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅಧ್ಯಕ್ಷತೆಯಲ್ಲಿ ಸಭೆ ನಡೆದಿದೆ. ಆದರೆ, ಚಿಕ್ಕಬಳ್ಳಾಪುರ ಜಿಲ್ಲೆಯ ಕೆಲ ಜನಪ್ರತಿನಿಧಿಗಳು ಸಭೆಗೆ ಗೈರಾಗಿದ್ದರು. ಈ ಸಂಗತಿಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಗಮನಕ್ಕೆ ತಂದು ಮೂರ್ನಾಲ್ಕು ದಿನದಲ್ಲಿ ಸಮಸ್ಯೆ ಇತ್ಯರ್ಥಪಡಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ವಿವರಿಸಿದರು.

ಒಗ್ಗಟ್ಟಿನಿಂದ ಇದ್ದೇವೆ: ‘ಕೋಚಿಮುಲ್‌ ವಿಚಾರದಲ್ಲಿ ಕೆಲ ಕಾಣದ ಕೈಗಳು ಅವಿಭಜಿತ ಕೋಲಾರ ಜಿಲ್ಲೆಯ ಜನರ ಮಧ್ಯೆ ಬೆಂಕಿ ಹಚ್ಚುವ ಕೆಲಸಕ್ಕೆ ಮುಂದಾಗಿವೆ. ಇದಕ್ಕೆ ಅವಕಾಶ ಕೊಡುವುದಿಲ್ಲ. ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ಒಗ್ಗಟ್ಟಿನಿಂದ ಇದ್ದೇವೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ನಾಗೇಶ್ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು