ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮಗಾರಿ ಸ್ಥಗಿತ: ಪ್ರಕರಣ ದಾಖಲಿಸಿ

ಕೆಆರ್‌ಐಡಿಎಲ್‌ ಅಧಿಕಾರಿಗಳ ವಿರುದ್ಧ ಸಭೆಯಲ್ಲಿ ಅಸಮಾಧಾನ
Last Updated 16 ಸೆಪ್ಟೆಂಬರ್ 2020, 14:40 IST
ಅಕ್ಷರ ಗಾತ್ರ

ಕೋಲಾರ: ‘ಜಿಲ್ಲೆಯ ಮಾಸ್ತಿಯಲ್ಲಿ ಅಂಬೇಡ್ಕರ್‌ ವಿದ್ಯಾರ್ಥಿನಿಲಯದ ಕಾಮಗಾರಿ ಅರ್ಧಕ್ಕೆ ನಿಲ್ಲಿಸಿರುವ ಕೆಆರ್‌ಐಡಿಎಲ್‌ ಅಧಿಕಾರಿಗಳ ಮೇಲೆ ದಲಿತರ ವಿರುದ್ಧದ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿ’ ಎಂದು ಎಸ್ಸಿ–ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಜಿಲ್ಲಾ ಮೇಲ್ವಿಚಾರಣಾ ಮತ್ತು ಬಲವರ್ಧನಾ ಸಮಿತಿ ಅಧ್ಯಕ್ಷರೂ ಆದ ಉಪ ವಿಭಾಗಾಧಿಕಾರಿ ವಿ.ಸೋಮಶೇಖರ್‌ ಆದೇಶಿಸಿದರು.

ಇಲ್ಲಿ ಬುಧವಾರ ನಡೆದ ಸಮಿತಿ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಶ್ರೀನಿವಾಸ್‌, ‘ಮಾಸ್ತಿಯಲ್ಲಿನ ಅಂಬೇಡ್ಕರ್‌ ವಿದ್ಯಾರ್ಥಿನಿಲಯಕ್ಕೆ ಕೆಆರ್‌ಐಡಿಎಲ್‌ಗೆ ₹ 1 ಕೋಟಿ ಬಿಡುಗಡೆ 8 ವರ್ಷ ಕಳೆದರೂ ಅಧಿಕಾರಿಗಳು ಹಾಸ್ಟೆಲ್‌ ನಿರ್ಮಿಸಿಲ್ಲ. ಅವರ ವಿರುದ್ಧ ಅಟ್ರಾಸಿಟಿ ಪ್ರಕರಣ ದಾಖಲಿಸಿ ತಕ್ಕ ಶಾಸ್ತಿ ಮಾಡಬೇಕು’ ಎಂದು ಗುಡುಗಿದರು.

‘ಉದ್ಘಾಟನೆಗೂ ಮುನ್ನವೇ ಹಾಸ್ಟೆಲ್‌ ಗೋಡೆಗಳು ಶಿಥಿಲಗೊಂಡಿವೆ. ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ (ಕೆಆರ್‌ಐಡಿಎಲ್) ಅಧಿಕಾರಿಗಳು ಹಾಸ್ಟೆಲ್‌ನ ಉಳಿಕೆ ಕಾಮಗಾರಿಗೆ ಹೆಚ್ಚುವರಿಯಾಗಿ ₹ 80 ಲಕ್ಷ ಕೇಳಿದ್ದಾರೆ. ಅಧಿಕಾರಿಗಳ ದುರಾಡಳಿತದ ಸಂಬಂಧ ಜಿ.ಪಂ ಸಭೆಯಲ್ಲಿ ಧ್ವನಿ ಎತ್ತಿದ್ದೇನೆ. ಆದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಅಧಿಕಾರಿಗಳ ವಿರುದ್ಧ ಅಟ್ರಾಸಿಟಿ ಪ್ರಕರಣ ದಾಖಲಿಸದಿದ್ದರೆ ಜನಪ್ರತಿನಿಧಿಗಳಿಗೆ ಕಪ್ಪು ಬಾವುಟ ಪ್ರದರ್ಶಿಸುತ್ತೇನೆ’ ಎಂದು ಎಚ್ಚರಿಕೆ ನೀಡಿದರು.

ಸೋಮಶೇಖರ್‌ ಅವರು ಸಭೆ ಮಧ್ಯೆ ಕೆಆರ್‌ಐಡಿಎಲ್‌ ಕಾರ್ಯ ನಿರ್ವಾಹಕ ಎಂಜಿನಿಯರ್ ರಾಮು ಅವರಿಗೆ ಕರೆ ಮಾಡಿ ಹಾಸ್ಟೆಲ್‌ ಕಾಮಗಾರಿ ಬಗ್ಗೆ ಪ್ರಶ್ನೆ ಮಾಡಿದರು. ಆದರೆ, ರಾಮು ಅವರು ಸಕಾರಾತ್ಮಕವಾಗಿ ಸ್ಪಂದಿಸದ ಕಾರಣ ಸೋಮಶೇಖರ್‌ ಅವರು ಕೆಆರ್‌ಐಡಿಎಲ್‌ ಅಧಿಕಾರಿಗಳ ವಿರುದ್ಧ ತಕ್ಷಣವೇ ಅಟ್ರಾಸಿಟಿ ಪ್ರಕರಣ ದಾಖಲಿಸಿ ಎಂದು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರಿಗೆ ಆದೇಶಿಸಿದರು.

ರೋಲ್‌ಕಾಲ್‌: ‘ಪರಿಶಿಷ್ಟರ ಮೇಲೆ ಮೇಲ್ಜಾತಿಯವರು ದೌರ್ಜನ್ಯ ನಡೆಸಿದರೂ ಅಧಿಕಾರಿಗಳು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡುವುದಿಲ್ಲ. ಬದಲಿಗೆ ರೋಲ್‌ಕಾಲ್‌ ಮಾಡುತ್ತಾ ಕಾಲ ಕಳೆಯುತ್ತಾರೆ. ಇಂತಹ ಅಧಿಕಾರಿಗಳನ್ನು ಅಮಾನತು ಮಾಡಿ ಬುದ್ಧಿ ಕಲಿಸಬೇಕು’ ಎಂದು ಶ್ರೀನಿವಾಸ್ ಕಿಡಿಕಾರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸೋಮಶೇಖರ್‌, ‘ಎಲ್ಲಾ ಪ್ರಕರಣಗಳು ಸತ್ಯ ಆಗಿರುವುದಿಲ್ಲ. ಆದರೆ, ಸತ್ಯವೆಂದು ಕಂಡುಬಂದ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಕೆಲಸ ಮಾಡಬೇಕು. ದೂರು ದಾಖಲಾದ 24 ತಾಸಿನಲ್ಲಿ ಆರೋಪಿಗಳನ್ನು ಬಂಧಿಸಬೇಕು’ ಎಂದು ತಾಕೀತು ಮಾಡಿದರು.

ಕೊಳವೆ ಬಾವಿಗೆ ಲಂಚ: ‘ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧಿಕಾರಿಗಳು ಕೊಳವೆ ಬಾವಿ ಕೊರೆಸಲು ಪ್ರತಿ ಫಲಾನುಭವಿಯಿಂದ ₹ 15 ಸಾವಿರ ಲಂಚ ಪಡೆಯುತ್ತಾರೆ. ಗುತ್ತಿಗೆದಾರರು 3 ವರ್ಷದಿಂದ ಕೊಳವೆ ಬಾವಿ ಕೊರೆಯದಿದ್ದರೂ ಅಧಿಕಾರಿಗಳು ಅವರ ವಿರುದ್ಧ ಕ್ರಮ ಜರುಗಿಸಿಲ್ಲ’ ಎಂದು ಸಮಿತಿ ಸದಸ್ಯರು ಆರೋಪಿಸಿದರು.

ಈ ಆರೋಪಕ್ಕೆ ಸ್ಪಷ್ಟನೆ ನೀಡಿದ ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ಅಧಿಕಾರಿ ನಾರಾಯಣಸ್ವಾಮಿ, ‘ಮುನಿರಾಜು ಎಂಬುವರಿಗೆ ಕೊಳವೆ ಬಾವಿ ಕೊರೆಯುವ ಟೆಂಡರ್ ನೀಡಲಾಗಿದೆ. ಆದರೆ, ಅವರು ಕೊಳವೆ ಬಾವಿ ಕೊರೆಸಿಲ್ಲ. ಈ ಸಂಬಂಧ 4 ಬಾರಿ ನೋಟಿಸ್ ನೀಡಿದ್ದೇವೆ’ ಎಂದು ಹೇಳಿದರು.

ಇದಕ್ಕೆ ಅಸಮಾಧಾನಗೊಂಡ ಸೋಮಶೇಖರ್, ‘3 ವರ್ಷಗಳಿಂದ ಮರು ಟೆಂಡರ್ ಕರೆಯದೆ ಏನು ಮಾಡುತ್ತಿದ್ದೀರಿ? ಆ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿದೆ. ನಿಗಮದ ಅಧಿಕಾರಿಗಳು ಸೇರಿದಂತೆ ಟೆಂಡರ್‌ದಾರರ ವಿರುದ್ಧ ಅಟ್ರಾಸಿಟಿ ಪ್ರಕರಣ ದಾಖಲಿಸಿ’ ಎಂದು ಸೂಚನೆ ನೀಡಿದರು.

ತಹಶೀಲ್ದಾರ್‌ಗಳಾದ ಶ್ರೀನಿವಾಸ್, ರಾಜಶೇಖರ್‌, ಶೋಭಿತಾ, ಮಂಜುನಾಥ್ ಹಾಗೂ ಸಮಿತಿ ಸದಸ್ಯರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT