ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೋಲಾರ | ಸೇವಂತಿ ಬೆಲೆ ಕುಸಿತ: ರೈತ ಕಂಗಾಲು; ಕೂಲಿ-ಸಾಗಣೆ ವೆಚ್ಚವೂ ವಾಪಸ್ ಬರಲ್ಲ

ತೋಟದಲ್ಲೇ ನಾಶಕ್ಕೆ ಮುಂದಾದ ಬೆಳೆಗಾರರು
Published : 23 ಸೆಪ್ಟೆಂಬರ್ 2024, 6:14 IST
Last Updated : 23 ಸೆಪ್ಟೆಂಬರ್ 2024, 6:14 IST
ಫಾಲೋ ಮಾಡಿ
Comments

ಕೋಲಾರ: ಜಿಲ್ಲೆಯ ವಿವಿಧೆಡೆ ರೈತರು ಸೇವಂತಿ ಹೂವು ಬೆಳೆದಿದ್ದು, ಮಾರುಕಟ್ಟೆಯಲ್ಲಿ ಬೆಲೆ ಕುಸಿತದಿಂದ ಕಂಗಾಲಾಗಿದ್ದಾರೆ.

ಹೂವು ಕಟಾವಿಗೆ ಕೂಲಿ ಹಾಗೂ ಮಾರುಕಟ್ಟೆಗೆ ಸಾಗಣೆ ಮಾಡುವ ವೆಚ್ಚವೂ ವಾಪಸ್‌ ಬರುತ್ತಿಲ್ಲ. ಹೀಗಾಗಿ, ತೋಟದಲ್ಲೇ ನಾಶಕ್ಕೆ ಮುಂದಾಗಿದ್ದಾರೆ. ಹಾಕಿದ ಬಂಡವಾಳವೂ ಬಾರದೆ ತಲೆಮೇಲೆ ಕೈಹೊತ್ತು ಕುಳಿತ್ತಿದ್ದಾರೆ.

ಎರಡು ದಿನಗಳ ಹಿಂದೆ ಬಂಗಾರಪೇಟೆ ತಾಲ್ಲೂಕಿನ ಮಾರಾಂಡಹಳ್ಳಿ ರೈತ ಕೃಷ್ಣಮೂರ್ತಿ ಎರಡು ಎಕರೆ ಸೇವಂತಿ ಹೂವಿನ ಬೆಳೆಯನ್ನು ಟ್ರ್ಯಾಕ್ಟರ್‌ ಹತ್ತಿಸಿ ನಾಶ ಮಾಡಿದ್ದರು.

ಕೆ.ಜಿ ಸೇವಂತಿ ಹೂವಿಗೆ ಈಗ ಕೆಲ ಮಾರುಕಟ್ಟೆಯಲ್ಲಿ ಕೇವಲ ₹10 ರಿಂದ ₹30 ಇದೆ. ಹೀಗಾಗಿ, ಹೆಚ್ಚಿನ ರೈತರು ಹೂವು ಕಟಾವು ಮಾಡದೆ ತೋಟದಲ್ಲಿ ಬಿಡುತ್ತಿದ್ದಾರೆ.

ಕೆಲವರು ಟೊಮೆಟೊಗೆ ಸರಿಯಾಗಿ ಬೆಲೆ ಸಿಗುತ್ತಿಲ್ಲವೆಂದು ಹೂವು ಬೆಳೆದಿದ್ದಾರೆ. ಈಗ ನೋಡಿದರೆ ಹೂವಿಗೂ ಬೆಲೆ ಇಲ್ಲದಂತಾಗಿದೆ. ಹೀಗಾಗಿ, ಪುಷ್ಪೋ‌ದ್ಯಮಕ್ಕೂ ಕಂಠಕ ಎದುರಾಗಿದೆ.

ಕೋಲಾರ ತಾಲ್ಲೂಕಿನ ತೊಟ್ಲಿ ಗ್ರಾಮದ ಸಮೀಪ ರೈತ ಹರೀಶ್‌ ಸುಮಾರು ಎರಡು ಎಕರೆಯಲ್ಲಿ ಸೇವಂತಿ ಹೂವು ಬೆಳೆದಿದ್ದಾರೆ. ಫಸಲೇನೋ ಉತ್ತಮವಾಗಿ ಬಂದಿದೆ. ದರ ಕುಸಿತದ ಕಾರಣ ಕಟಾವು ಕೂಡ ಮಾಡದೆ ಹಾಗೆಯೇ ಬಿಟ್ಟಿದ್ದಾರೆ.

‘ನಾನು ಐಶ್ವರ್ಯಾ ತಳಿ ಬೆಳೆದಿದ್ದೇನೆ. ಎರಡು ಎಕರೆ ಸೇವಂತಿ ಹೂವು ಬೆಳೆಯಲು ₹4 ಲಕ್ಷ ಬಂಡವಾಳ ಹೂಡಿದ್ದೇನೆ. ಆದರೆ, ಗೌರಿ ಗಣೇಶ ಹಬ್ಬದವರೆಗೆ ಉತ್ತಮ ದರ ಸಿಕ್ಕಿತು. ಕೆ.ಜಿಗೆ ₹130 ರವರೆಗೆ ಇತ್ತು. ಆನಂತರ ಕುಸಿಯಲು ಆರಂಭವಾಯಿತು’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

‘ಹೂವು ಕಟಾವಿಗೆ ದಿನಕ್ಕೆ ಒಬ್ಬರಿಗೆ ₹450 ಕೂಲಿ ಕೊಡಬೇಕಾಗುತ್ತದೆ. ಜೊತೆಗೆ ಸಾಗಣೆ ವೆಚ್ಚ‌, ಕಮಿಷನ್‌ ಭರಿಸಬೇಕಾಗುತ್ತದೆ. ಈಗ ಒಂದು ಬ್ಯಾಗ್‌ ಹೂವು (45 ಕೆ.ಜಿ) ಮಾರಾಟ ಮಾಡಿದರೆ ಕೇವಲ ₹ 450 ಸಿಗುತ್ತದೆ. ನಮಗೆ ಏನೂ ಉಳಿಯುವುದಿಲ್ಲ. ಹೀಗಾಗಿ, ಕಟಾವು ಮಾಡದೆ ಹಾಗೆಯೇ ಬಿಟ್ಟಿದ್ದೇನೆ. ಮುಂದೆ ಲಾಭ ಸಿಗಬಹುದೆಂದು ಹಾಗೆಯೇ ಬಿಟ್ಟರೆ ನಿರ್ವಹಣೆಗೆ ಮತ್ತಷ್ಟು ವೆಚ್ಚ ಮಾಡಬೇಕಾಗುತ್ತದೆ. ಸ್ವಲ್ಪ ದಿನ ನೋಡಿ ಟ್ರ್ಯಾಕ್ಟರ್‌ ಹತ್ತಿಸಿ ನಾಶ ಮಾಡಲಾಗುವುದು’ ಎಂದರು.

ಬೆಂಗಳೂರಿಗೆ ಮಾರುಕಟ್ಟೆಗೆ ವಿವಿಧೆಡೆಯಿಂದ ವಿಪರೀತ ಹೂವುಗಳು ಬರುತ್ತಿವೆ. ಹೀಗಾಗಿ, ಅಲ್ಲೂ ಬೇಡಿಕೆ ಇಲ್ಲವಾಗಿದೆ. ಇನ್ನು ತಮಿಳುನಾಡು ಹಾಗೂ ಆಂಧ್ರಪ್ರದೇಶದಲ್ಲೂ ಹೆಚ್ಚು ಹೂವು ಬೆಳೆದಿದ್ದು, ಅಲ್ಲಿನ ವರ್ತಕರಿಂದಲೂ ಬೇಡಿಕೆ ಇಲ್ಲವಾಗಿದೆ.

‘ಪಿತೃ ಪಕ್ಷ ಕಾರಣ ಈಗ ಕಾರ್ಯಕ್ರಮಗಳು ಕಡಿಮೆ. ಹೀಗಾಗಿ, ಹೂವಿಗೆ ಬೇಡಿಕೆ ಕುಸಿದಿದೆ’ ಎನ್ನುತ್ತಾರೆ ತೊಟ್ಲಿ ಗ್ರಾಮದ ರಮೇಶ್‌.

ಇತ್ತ ತೋಟಗಾರಿಕೆ ಇಲಾಖೆ ಸೇರಿದಂತೆ ಯಾರೂ ಸ್ಪಂದಿಸುತ್ತಿಲ್ಲವೆಂದು ಹೂವು ಬೆಳೆಗಾರರು ದೂರುತ್ತಿದ್ದಾರೆ. ಕೂಡಲೇ ಸರ್ಕಾರ ಹೂವು ಬೆಳೆಗಾರರ ನೆರವಿಗೆ ಬರಬೇಕೆಂದು ಮನವಿ ಮಾಡಿದ್ದಾರೆ.

ಮುಂದೆ ಮಹಾಲಯ ಅಮಾವಾಸ್ಯೆ, ಆಯಧಪೂಜೆ, ದೀಪಾವಳಿ ಸೇರಿದಂತೆ ಸಾಲುಸಾಲು ಹಬ್ಬ ಬರಲಿದ್ದು, ಆಗ ದರದಲ್ಲಿ ಏರಿಕೆ ಕಾಣುವ ಆಶಾವಾದದಲ್ಲಿ ಇದ್ದಾರೆ.

ಕೋಲಾರ ತಾಲ್ಲೂಕಿನ ತೊಟ್ಲಿ ಬಳಿ ಸೇವಂತಿಗೆ ಹೂವು ಬೆಳೆದಿರುವ ರೈತರು ಮಾರುಕಟ್ಟೆಯಲ್ಲಿ ಸರಿಯಾದ ದರವಿಲ್ಲದೆ ಕಂಗಾಲಾಗಿದ್ದಾರೆ
ಕೋಲಾರ ತಾಲ್ಲೂಕಿನ ತೊಟ್ಲಿ ಬಳಿ ಸೇವಂತಿಗೆ ಹೂವು ಬೆಳೆದಿರುವ ರೈತರು ಮಾರುಕಟ್ಟೆಯಲ್ಲಿ ಸರಿಯಾದ ದರವಿಲ್ಲದೆ ಕಂಗಾಲಾಗಿದ್ದಾರೆ
ಮಾರುಕಟ್ಟೆಯಲ್ಲಿ ಸೇವಂತಿಗೆ ಹೂವಿನ ದರ ಕುಸಿತ
ಮಾರುಕಟ್ಟೆಯಲ್ಲಿ ಸೇವಂತಿಗೆ ಹೂವಿನ ದರ ಕುಸಿತ

Highlights - ಬಂಗಾರಪೇಟೆಯ ಮಾರಾಂಡಹಳ್ಳಿಯಲ್ಲಿ ಟ್ರ್ಯಾಕ್ಟರ್‌ ಹತ್ತಿಸಿ ಹೂವು ನಾಶ ಪರಿಹಾರಕ್ಕಾಗಿ ಸರ್ಕಾರಕ್ಕೆ ಒತ್ತಾಯ ಆಯುಧಪೂಜೆ, ದೀಪಾವಳಿಗೆ ದರ ಏರಿಕೆಯ ಆಶಾಭಾವ

Quote - ಹಿಂದೆ ಟೊಮೆಟೊ ಬೆಳೆಯುತ್ತಿದ್ದೆ. ದರದಲ್ಲಿ ಏರುಪೇರಾಗಿ ಭಾರಿ ನಷ್ಟ ಅನುಭವಿಸಿದೆ. 3 ವರ್ಷಗಳಿಂದ ಹೂವು ಬೆಳೆಯುತ್ತಿದ್ದು ಈಗ ಹಾಕಿದ ಬಂಡವಾಳವೂ ಸಿಗದೆ ನಷ್ಟವಾಗುತ್ತಿದೆ. ರೈತರ ಪಾಡು ನೋಡಿ ಹರೀಶ್‌ ಹೂವು ಬೆಳೆಗಾರ ತೊಟ್ಲಿ ಕೋಲಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT