ಯುಜಿಡಿ ದುರಸ್ತಿಗೆ ಒತ್ತಾಯ: ರಸ್ತೆತಡೆ

ಸೋಮವಾರ, ಏಪ್ರಿಲ್ 22, 2019
33 °C

ಯುಜಿಡಿ ದುರಸ್ತಿಗೆ ಒತ್ತಾಯ: ರಸ್ತೆತಡೆ

Published:
Updated:
Prajavani

ಕೋಲಾರ: ಯುಜಿಡಿ ದುರಸ್ತಿಗೆ ಒತ್ತಾಯಿಸಿ ನಗರದ ಗೌರಿಪೇಟೆ ನಿವಾಸಿಗಳು ಮಂಗಳವಾರ ರಸ್ತೆತಡೆ ಮಾಡಿ ಧರಣಿ ನಡೆಸಿದರು.

‘ಗೌರಿಪೇಟೆ ಬಡಾವಣೆಯ ಹಲವೆಡೆ ಯುಜಿಡಿಗಳು ಹಾಳಾಗಿ ಏಳೆಂದು ತಿಂಗಳಾಗಿದೆ. ಈ ಸಂಬಂಧ ನಗರಸಭೆಗೆ ಹಲವು ಬಾರಿ ದೂರು ನೀಡಿ ದುರಸ್ತಿಗೆ ಮನವಿ ಮಾಡಿದ್ದೇವೆ. ಆದರೆ, ಅಧಿಕಾರಿಗಳು ಸೌಜನ್ಯಕ್ಕೂ ಬಡಾವಣೆಗೆ ಬಂದು ಯುಜಿಡ ಪರಿಶೀಲಿಸಿಲ್ಲ’ ಎಂದು ಧರಣಿನಿರತರು ಆಕ್ರೋಶ ವ್ಯಕ್ತಪಡಿಸಿದರು.

‘ಯುಜಿಡಿ ಹಾಳಾಗಿರುವುದು, ಮ್ಯಾನ್‌ಹೋಲ್‌ ಸ್ವಚ್ಛ ಮಾಡದಿರುವುದು ಮತ್ತು ಮುಚ್ಚಳ ಇಲ್ಲದಿರುವ ಬಗ್ಗೆ ಜಿಲ್ಲಾಧಿಕಾರಿಯ ಜನಸ್ಪಂದನ ಕಾರ್ಯಕ್ರಮದಲ್ಲಿ ದೂರು ನೀಡಿದ್ದೇವೆ. ಜಿಲ್ಲಾಧಿಕಾರಿ ಸಮಸ್ಯೆ ಪರಿಹರಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದರು. ಆದರೆ, ಅಧಿಕಾರಿಗಳು ಜಿಲ್ಲಾಧಿಕಾರಿಯ ಆದೇಶ ಸಹ ಪಾಲಿಸಿಲ್ಲ’ ಎಂದು ಗೌರಿಪೇಟೆ ನಿವಾಸಿ ರಾಜೇಶ್‌ಸಿಂಗ್ ದೂರಿದರು.

‘ಯುಜಿಡಿ ಅವ್ಯವಸ್ಥೆಯಿಂದ ಇಡೀ ಬಡಾವಣೆ ಕೊಳೆಗೇರಿಯಂತಾಗಿದೆ. ಮ್ಯಾನ್‌ಹೋಲ್‌ಗಳಿಂದ ಕೊಳಚೆ ನೀರು ಹಾಗೂ ಮಲಮೂತ್ರ ರಸ್ತೆಗೆ ಹರಿಯುತ್ತಿದ್ದು, ಬಡಾವಣೆಯಲ್ಲಿ ದುರ್ನಾತ ಹೆಚ್ಚಿದೆ. ರಸ್ತೆಗಳಲ್ಲಿ ಓಡಾಡಲು ಸ್ಥಳೀಯರಿಗೆ ಹಾಗೂ ವಾಹನ ಸವಾರರಿಗೆ ತೀವ್ರ ಸಮಸ್ಯೆಯಾಗಿದೆ’ ಎಂದು ಹೇಳಿದರು.

ರೋಗ ಭೀತಿ: ‘ಯುಜಿಡಿ ಕೊಳಚೆ ನೀರು ರಸ್ತೆಗೆ ಹರಿಯುತ್ತಿರುವುದರಿಂದ ನೈರ್ಮಲ್ಯ ಸಮಸ್ಯೆ ಎದುರಾಗಿದೆ. ಬಡಾವಣೆಯಲ್ಲಿ ಸೊಳ್ಳೆ ಹಾಗೂ ನೊಣಗಳ ಕಾಟ ಹೆಚ್ಚಿದ್ದು, ಸ್ಥಳೀಯರಲ್ಲಿ ಸಾಂಕ್ರಾಮಿಕ ರೋಗ ಭೀತಿ ಮನೆ ಮಾಡಿದೆ. ಈಗಾಗಲೇ ಹಲವರು ಕಾಯಿಲೆಗೆ ತುತ್ತಾಗಿ ಆಸ್ಪತ್ರೆ ಸೇರಿದ್ದಾರೆ’ ಎಂದು ಧರಣಿನಿರತರು ಅಳಲು ತೋಡಿಕೊಂಡರು.

‘ನಗರಸಭೆ ಅಧಿಕಾರಿಗಳು ಪ್ರತಿನಿತ್ಯ ಗೌರಿಪೇಟೆ ಬಡಾವಣೆ ರಸ್ತೆಗಳಲ್ಲೇ ಓಡಾಡುತ್ತಾರೆ. ಆದರೂ ಸಮಸ್ಯೆ ಪರಿಹಾರಕ್ಕೆ ಮೀನಮೇಷ ಎಣಿಸುತ್ತಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಪ್ರಶ್ನೆ ಮಾಡಿದರೆ ಚುನಾವಣೆ ನೀತಿಸಂಹಿತೆ ಜಾರಿಯಲ್ಲಿದೆ ಎಂದು ಸಬೂಬು ಹೇಳುತ್ತಾರೆ. ಶೀಘ್ರವೇ ಮ್ಯಾನ್‌ಹೋಲ್‌ ಸ್ವಚ್ಛಗೊಳಿಸಿ ಯುಜಿಡಿ ದುರಸ್ತಿ ಮಾಡದಿದ್ದರೆ ನಗರಸಭೆ ಕಚೇರಿಗೆ ಬೀಗ ಜಡಿಯುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ಗೌರಿಪೇಟೆ ನಿವಾಸಿಗಳಾದ ನಾಗೇಂದ್ರ, ಮಹಮ್ಮದ್‌ ಬಷೀರ್‌, ಚಾನ್ ಪಾಷಾ, ನೂರ್ ಅಹಮ್ಮದ್‌, ಹಸೀಮ್ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !