ಶುಕ್ರವಾರ, ಸೆಪ್ಟೆಂಬರ್ 24, 2021
21 °C
ತೋಟಗಾರಿಕೆ ಮಹಾವಿದ್ಯಾಲಯದ ವಿರುದ್ಧ ಷಾಪೂರ ರೈತರ ಪ್ರತಿಭಟನೆ

ಕೋಲಾರ: ಜಮೀನಿಗೆ ದಾರಿ ಬಿಡಲು ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ತೋಟಗಾರಿಕೆ ಮಹಾವಿದ್ಯಾಲಯದ ಅಧಿಕಾರಿಗಳು ತಾಲ್ಲೂಕಿನ ಷಾಪೂರ ಗ್ರಾಮದ ಕೃಷಿ ಜಮೀನುಗಳಿಗೆ ದಾರಿ ಬಿಡದೆ ಬೇಲಿ ನಿರ್ಮಿಸುತ್ತಿದ್ದಾರೆ ಎಂದು ಆರೋಪಿಸಿ ರೈತರು ನಮ್ಮ ರೈತ ಸಂಘದ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ಮಾಡಿದರು.

‘ಸರ್ಕಾರ ಷಾಪೂರದ ಸಮೀಪ ಸರ್ಕಾರಿ ಜಮೀನನ್ನು ತೋಟಗಾರಿಕೆ ಮಹಾವಿದ್ಯಾಲಯ ಕಾಲೇಜಿಗೆ ಮಂಜೂರು ಮಾಡಿದೆ. ಆ ಜಮೀನಿಗೆ ಹೊಂದಿಕೊಂಡಂತೆ ಅಕ್ಕಪಕ್ಕದಲ್ಲಿ ರೈತರ ಜಮೀನುಗಳಿವೆ. ಅಧಿಕಾರಿಗಳು ಕಾಲೇಜಿಗೆ ಮಂಜೂರಾಗಿರುವ ಜಮೀನಿನ ಸುತ್ತ ಬೇಲಿ ನಿರ್ಮಿಸುತ್ತಿರುವುದರಿಂದ ತಮ್ಮ ಜಮೀನಿಗೆ ಹೋಗಲು ಸ್ಥಳಾವಕಾಶ ಇಲ್ಲವಾಗಿದೆ’ ಎಂದು ಪ್ರತಿಭಟನಾನಿರತ ರೈತರು ಆಕ್ರೋಶ ವ್ಯಕ್ತಪಡಿಸಿದರು.

‘ಷಾಪೂರ ಗ್ರಾಮದ ರೈತರು ಹಿಂದಿನಿಂದಲೂ ತಮ್ಮ ಜಮೀನುಗಳಿಗೆ ಸರ್ಕಾರಿ ಜಮೀನಿನಲ್ಲಿರುವ ರಸ್ತೆ ಮೂಲಕ ಹೋಗುತ್ತಿದ್ದರು. ಇದೀಗ ಅಧಿಕಾರಿಗಳು ಆ ರಸ್ತೆಯನ್ನು ಮುಚ್ಚಿ ರೈತರ ವಾಹನಗಳು ಹೋಗದಂತೆ ಮಾಡುತ್ತಿದ್ದಾರೆ. ಇದರಿಂದ ಕೃಷಿ ಚಟುವಟಿಕೆಗಳಿಗೆ ಅಡ್ಡಿಯಾಗುತ್ತಿದೆ’ ಎಂದು ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಗಣೇಶ್‌ಗೌಡ ದೂರಿದರು.

‘ರೈತರ ಅನುಕೂಲಕ್ಕಾಗಿ ರಸ್ತೆಗೆ ಜಾಗ ಬಿಡುವಂತೆ ಮನವಿ ಮಾಡಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಅಧಿಕಾರಿಗಳಿಗೆ ರೈತರ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ. ಜಿಲ್ಲಾಡಳಿತ, ಉಪ ವಿಭಾಗಾಧಿಕಾರಿ, ತಹಶೀಲ್ದಾರ್‌ ಸಹ ಈ ಬಗ್ಗೆ ಗಮನ ಹರಿಸುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಿರೋಧವಿಲ್ಲ: ‘ತೋಟಗಾರಿಕೆ ಮಹಾವಿದ್ಯಾಲಯದ ಕಾಲೇಜಿಗೆ ಜಮೀನು ಮಂಜೂರು ಮಾಡಿರುವುದಕ್ಕೆ ವಿರೋಧವಿಲ್ಲ. ಆದರೆ, ರೈತರಿಗೆ ಅನುಕೂಲವಾಗುವಂತೆ ದಾರಿ ಬಿಡಬೇಕು. ಈ ಭಾಗದಲ್ಲಿ ಕೋಳಿ ಫಾರಂಗಳಿವೆ ಮತ್ತು ರೈತರು ಬೆಳೆ ಬೆಳೆಯುತ್ತಾರೆ. ಕೃಷಿ ಸಲಕರಣೆ ಸಾಗಣೆ ವಾಹನಗಳ ಓಡಾಟಕ್ಕೆ ಇರುವ ರಸ್ತೆ ಬಂದ್‌ ಮಾಡಿದರೆ ರೈತರು ಯಾವ ರಸ್ತೆಯಲ್ಲಿ ಓಡಾಡಬೇಕು?’ ಎಂದು ರೈತ ಮಣಿ ಪ್ರಶ್ನಿಸಿದರು.

‘ಕಾಲೇಜಿಗೆ ಮಂಜೂರಾಗಿರುವ ಜಮೀನಿನಲ್ಲಿ ರೈತರ ಜಮೀನುಗಳ ಕಡೆಗೆ ರಸ್ತೆ ಬಿಟ್ಟುಕೊಟ್ಟರೆ ಅನುಕೂಲವಾಗುತ್ತದೆ. ಕಾಲಮಿತಿಯೊಳಗೆ ಈ ಕೆಲಸ ಮಾಡದಿದ್ದರೆ ಜಿಲ್ಲಾಡಳಿತ ಭವನದ ಎದುರು ಹೋರಾಟ ಮಾಡುತ್ತೇವೆ’ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

ವರದಿ ಸಲ್ಲಿಸುತ್ತೇವೆ: ಪ್ರತಿಭಟನಾನಿರತರ ಅಹವಾಲು ಆಲಿಸಿದ ತಹಶೀಲ್ದಾರ್ ವಿಲಿಯಂ, ‘ತೋಟಗಾರಿಕೆ ಮಹಾವಿದ್ಯಾಲಯಕ್ಕೆ ಷಾಪೂರ ಗ್ರಾಮದ ಸರ್ವೆ ನಂಬರ್ 102/1ರಲ್ಲಿ 80 ಎಕರೆ ಜಮೀನು ಮಂಜೂರಾಗಿದೆ. ಈ ಜಾಗ ಪರಿಶೀಲಿಸಿ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸುತ್ತೇವೆ ಮತ್ತು ರೈತರ ಬೇಡಿಕೆ ಬಗ್ಗೆ ಮಾಹಿತಿ ನೀಡುತ್ತೇವೆ. ಬಳಿಕ ಜಿಲ್ಲಾಧಿಕಾರಿ ಆದೇಶದಂತೆ ಕ್ರಮ ವಹಿಸುತ್ತೇವೆ’ ಎಂದು ಭರವಸೆ ನೀಡಿದರು.

ಗ್ರಾ.ಪಂ ಉಪಾಧ್ಯಕ್ಷ ಸಂಪತ್‌ಕುಮಾರ್, ಸಂಘದ ಸದಸ್ಯರಾದ ವಿಶ್ವಾನಾಥ್, ಮಂಜುನಾಥ್, ಮುನೇಗೌಡ, ಗೋಪಾಲ್, ಸೋಮಣ್ಣ, ನಂಜುಂಡ, ಶಿವಪ್ಪ, ರಾಮಕೃಷ್ಣೇಗೌಡ, ಗಣೇಶ್, ಆನಂದ್ ಪಾಲ್ಗೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.