ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಮರೆತರೆ ದೇಶಕ್ಕೆ ಉಳಿಗಾಲವಿಲ್ಲ

ಸಾಲ ವಿತರಣೆ ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಗೋವಿಂದಗೌಡ ಅಭಿಪ್ರಾಯ
Last Updated 24 ಜೂನ್ 2021, 16:42 IST
ಅಕ್ಷರ ಗಾತ್ರ

ಕೋಲಾರ: ‘ಕೋವಿಡ್ ಮತ್ತು ಲಾಕ್‌ಡೌನ್‌ ಕಾರಣಕ್ಕೆ ಬೆಳೆಗೆ ಸೂಕ್ತ ಬೆಲೆ ಸಿಗದೆ ಸಂಕಷ್ಟ ಅನುಭವಿಸುತ್ತಿರುವ ರೈತರಿಗೆ ಬ್ಯಾಂಕ್‌ ಅಗತ್ಯ ಸಾಲ ಸೌಲಭ್ಯ ನೀಡಿ ಶಕ್ತಿ ತುಂಬುತ್ತದೆ’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಹೇಳಿದರು.

ತಾಲ್ಲೂಕಿನ ಕಡಗಟ್ಟೂರು ರೇಷ್ಮೆ ಬೆಳೆಗಾರರ ಸಹಕಾರ ಸಂಘದ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರೈತರಿಗೆ ₹ 50 ಲಕ್ಷ ಬೆಳೆ ಸಾಲ ವಿತರಿಸಿ ಮಾತನಾಡಿ, ‘ರೈತರು ಮತ್ತು ಯೋಧರು ದೇಶಕ್ಕೆ ಎರಡು ಕಣ್ಣುಗಳಿದ್ದಂತೆ. ಇವರನ್ನು ಮರೆತರೆ ದೇಶಕ್ಕೆ ಉಳಿಗಾಲವಿಲ್ಲ’ ಎಂದು ಅಭಿಪ್ರಾಯಪಟ್ಟರು.

‘ಕೋವಿಡ್‌ನಿಂದ ರೈತರು ತೊಂದರೆಗೆ ಸಿಲುಕಿದ್ದಾರೆ. ಬೆವರು ಸುರಿಸಿ ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿ ಬೆಲೆ ಸಿಕ್ಕಿಲ್ಲ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ರೈತರು ಮತ್ತೆ ಬೆಳೆ ಹಾಕಲು ರೈತರು ಹಣಕ್ಕಾಗಿ ಪರದಾಡುತ್ತಿದ್ದಾರೆ. ಬದ್ಧತೆಯಿಂದ ರೈತರಿಗೆ ಆತ್ಮಸ್ಥೈರ್ಯ ತುಂಬುತ್ತಿದ್ದೇವೆ. ಅನ್ನದಾತರಿಗೆ ನೆರವಾಗುವ ಮೂಲಕ ಅವರ ಕೈಹಿಡಿಯುವ ಕೆಲಸ ಮಾಡಿದ್ದೇವೆ’ ಎಂದರು.

‘ಉಳ್ಳವರು ವಾಣಿಜ್ಯ ಬ್ಯಾಂಕ್‌ಗಳಲ್ಲಿ ಠೇವಣಿಯಿಟ್ಟು ಉದ್ಯಮಿಗಳು ಅಥವಾ ಶ್ರೀಮಂತರಿಗೆ ನೆರವಾಗುವ ಬದಲು ಡಿಸಿಸಿ ಬ್ಯಾಂಕ್‌ನಲ್ಲಿ ಹಣ ಠೇವಣಿ ಇಡಬೇಕು. ಆ ಮೂಲಕ ರೈತರಿಗೆ ಸಾಲ ಸೌಲಭ್ಯ ಸಿಗುವಂತೆ ಮಾಡಬೇಕು. ಠೇವಣಿ ಸಂಗ್ರಹ ಹೆಚ್ಚಿದಷ್ಟು ಬ್ಯಾಂಕ್‌ಗೆ ಸಾಲ ನೀಡುವ ಶಕ್ತಿ ವೃದ್ಧಿಯಾಗುತ್ತದೆ. ಸಮಾಜದ ಕಟ್ಟಕಡೆಯ ವ್ಯಕ್ತಿ, ಕುಟುಂಬಕ್ಕೂ ಸಾಲ ನೀಡುವ ಮೂಲಕ ಆರ್ಥಿಕ ಸ್ವಾವಲಂಬನೆಗೆ ನೆರವಾಗಬಹುದು’ ಎಂದು ತಿಳಿಸಿದರು.

ಮುಂಚೂಣಿಯಲ್ಲಿದೆ: ‘ರೈತರು ಮತ್ತು ಮಹಿಳೆಯರಿಗೆ ಬಡ್ಡಿರಹಿತ ಸಾಲ ನೀಡುವಲ್ಲಿ ಡಿಸಿಸಿ ಬ್ಯಾಂಕ್ ರಾಜ್ಯದಲ್ಲೇ ಮುಂಚೂಣಿಯಲ್ಲಿದೆ. ಈ ಸಾಧನೆಗೆ ಠೇವಣಿದಾರರು ಕಾರಣರಾಗಿದ್ದಾರೆ. ಬ್ಯಾಂಕ್ ಆರ್ಥಿಕವಾಗಿ ಸದೃಢತೆ ಹೊಂದಿದ್ದು, ಠೇವಣಿಗೆ ವಾಣಿಜ್ಯ ಬ್ಯಾಂಕ್‌ಗಳಿಗಿಂತ ಹೆಚ್ಚಿನ ಬಡ್ಡಿ ನೀಡುತ್ತಿದ್ದೆ’ ಎಂದು ವಿವರಿಸಿದರು.

‘ಆನ್‌ಲೈನ್‌ ಬ್ಯಾಂಕಿಂಗ್‌ ಸೇವೆ ಮೂಲಕ ಗ್ರಾಹಕರಿಗೆ ಬೆರಳ ತುದಿಯಲ್ಲೇ ಹಣಕಾಸು ವಹಿವಾಟು ನಡೆಸಲು ಅವಕಾಶ ಕಲ್ಪಿಸಲಾಗಿದೆ. ವಾಣಿಜ್ಯ ಬ್ಯಾಂಕ್‌ಗಳಲ್ಲಿ ಸಿಗುವ ಎಲ್ಲಾ ಸೌಲಭ್ಯಗಳು ಡಿಸಿಸಿ ಬ್ಯಾಂಕ್‌ನಲ್ಲೂ ತ್ವರಿತವಾಗಿ ಸಿಗುತ್ತವೆ’ ಎಂದು ಮಾಹಿತಿ ನೀಡಿದರು.

ಸೊಸೈಟಿ ಸಾಧನೆ: ‘ಕಡಗಟ್ಟೂರು ಸೊಸೈಟಿಯಿಂದ ಕೋವಿಡ್ ಸಂಕಷ್ಟದ ಪರಿಸ್ಥಿತಿಯಲ್ಲೂ ರೈತರಿಗೆ ಈಗಾಗಲೇ ₹ 7 ಕೋಟಿ ಸಾಲ ನೀಡಲಾಗಿದೆ. ಸ್ತ್ರೀಶಕ್ತಿ ಸಂಘಗಳಿಗೆ ₹ 16 ಕೋಟಿ. ನೀಡಲಾಗಿದೆ ಸಾಲ ನೀಡಿಕೆ ಮತ್ತು ವಸೂಲಾತಿಯಲ್ಲಿ ಸೊಸೈಟಿ ಸಾಧನೆ ಮಾಡಿದೆ’ ಎಂದು ಬ್ಯಾಂಕ್ ನಿರ್ದೇಶಕ ಕೆ.ವಿ.ದಯಾನಂದ್ ಸಂತಸ ವ್ಯಕ್ತಪಡಿಸಿದರು.

ಶಾಸಕ ಕೆ.ಶ್ರೀನಿವಾಸಗೌಡ, ಬ್ಯಾಂಕ್‌ನ ನಿರ್ದೇಶಕರಾದ ಎಂ.ಎಲ್.ಅನಿಲ್‌ಕುಮಾರ್, ಸೋಮಣ್ಣ, ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಖಲೀಂ ಉಲ್ಲಾ, ಶಿವಕುಮಾರ್, ಕಡಗಟ್ಟೂರು ಸೊಸೈಟು ಉಪಾಧ್ಯಕ್ಷ ಡೇವಿಡ್, ನಿರ್ದೇಶಕರಾದ ವೆಂಕಟೇಶ್, ಕೆ.ಎಸ್.ಕೃಷ್ಣಪ್ಪ, ರಾಮಾಂಜನಪ್ಪ, ಬೈರಮ್ಮ, ವಿಜಯಮ್ಮ, ರಾಜಣ್ಣ, ಮಂಜುನಾಥ್ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT