ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಾವಿದರ ಉಳಿವಿಗೆ ಒಕ್ಕೂಟ ರಚನೆ

Last Updated 6 ನವೆಂಬರ್ 2020, 14:30 IST
ಅಕ್ಷರ ಗಾತ್ರ

ಕೋಲಾರ: ‘ರಾಜ್ಯದೆಲ್ಲೆಡೆ ಇರುವ 6 ಲಕ್ಷಕ್ಕೂ ಹೆಚ್ಚು ಕಲಾವಿದರನ್ನು ಸಂಘಟಿಸಿ ಕಲೆ ಮತ್ತು ಕಲಾವಿದರ ಉಳಿವಿಗಾಗಿ ಅಖಿಲ ಕರ್ನಾಟಕ ಕಲಾವಿದರ ಒಕ್ಕೂಟ ರಚಿಸಲಾಗಿದೆ’ ಎಂದು ರಾಜ್ಯ ಜಾನಪದ ಅಕಾಡೆಮಿ ಮಾಜಿ ಸದಸ್ಯ ಡಿ.ಆರ್.ರಾಜಪ್ಪ ಹೇಳಿದರು.

ತಾಲ್ಲೂಕಿನ ಅರಾಭಿಕೊತ್ತನೂರು ಗ್ರಾಮದಲ್ಲಿ ಶುಕ್ರವಾರ ನಡೆದ ಅಖಿಲ ಕರ್ನಾಟಕ ಕಲಾವಿದರ ಒಕ್ಕೂಟದ ಸಭೆಯಲ್ಲಿ ಮಾತನಾಡಿ, ‘ಕೋವಿಡ್ ಸಂಕಷ್ಟ ಹಾಗೂ ಲಾಕ್‌ಡೌನ್‌ನಿಂದ ಅನೇಕ ಕಲಾವಿದರು ತೊಂದರೆಗೆ ಸಿಲುಕಿದ್ದಾರೆ. ಇವರ ಜೀವನ ನಿರ್ವಹಣೆಗೆ ತುಂಬಾ ಸಮಸ್ಯೆಯಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಕಷ್ಟದಲ್ಲಿರುವ ಜಾನಪದ ಕಲಾವಿದರನ್ನು ಅಸಂಘಟಿತ ಕಾರ್ಮಿಕ ವಲಯಕ್ಕೆ ಸೇರಿಸಿ ಸೌಲಭ್ಯ ಪಡೆದುಕೊಳ್ಳಲು ಸಂಘಟಿತ ಹೋರಾಟ ನಡೆಸುವ ನಿಟ್ಟಿನಲ್ಲಿ ರೂಪುರೇಷೆ ಸಿದ್ಧಗೊಳಿಸಲಾಗುತ್ತಿದೆ. ಒಕ್ಕೂಟವು ಜಾತಿ, ಧರ್ಮದ ಎಲ್ಲೇ ಮೀರಿ ಕಲಾವಿದರೆಲ್ಲರೂ ಒಂದೇ ಎಂಬ ಪರಿಕಲ್ಪನೆಯಿಂದ ಕಲಾವಿದರನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದೆ’ ಎಂದು ವಿವರಿಸಿದರು.

‘ಕಲಾವಿದರು ಸಂಘಟಿತರಾಗದೆ ಸಮಸ್ಯೆಗಳಿಗೆ ಪರಿಹಾರ ಪಡೆಯಲು ಸಾಧ್ಯವಿಲ್ಲ. ಒಗ್ಗಟ್ಟಿನಲ್ಲಿ ಬಲವಿದೆ. ಕಲಾವಿದರು ಈ ಸತ್ಯ ಅರಿತು ಒಗ್ಗಟ್ಟಾಗಿ ತಮ್ಮ ಬೇಡಿಕೆ ಈಡೇರಿಕೆಗೆ ಸರ್ಕಾರದ ಮೇಲೆ ಒತ್ತಡ ಹೇರಬೇಕು’ ಎಂದು ಕಿವಿಮಾತು ಹೇಳಿದರು.

ಸಭೆಯಲ್ಲಿ ಅರಾಭಿಕೊತ್ತನೂರು ಗ್ರಾಮ ಪಂಚಾಯಿತಿ ಕಲಾವಿದರ ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಗೌರವ ಅಧ್ಯಕ್ಷರಾಗಿ ಡಿ.ಸಿ.ರಾಜಶೇಖರಯ್ಯ, ಅಧ್ಯಕ್ಷರಾಗಿ ಜಯರಾಮೇಗೌಡ, ಉಪಾಧ್ಯಕ್ಷರಾಗಿ ಜಿ.ಎಂ.ಮುನಿಯಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಎಂ.ರಾಮಚಂದ್ರಪ್ಪ, ಕಾರ್ಯದರ್ಶಿಯಾಗಿ ಜೋಸೆಫ್‌ ಭಕ್ತವತ್ಸಲ, ಸಹ ಕಾರ್ಯದರ್ಶಿಯಾಗಿ ಎ.ನಾರಾಯಣಪ್ಪ, ಖಜಾಂಚಿಯಾಗಿ ಜೆ.ಕೆ.ನಾರಾಯಣಶೆಟ್ಟಿ, ಸಂಘಟನಾ ಸಂಚಾಲಕರಾಗಿ ನರಸಿಂಹರಾಜು ಆಯ್ಕೆಯಾದರು.

ಎಪಿಎಂಸಿ ಮಾಜಿ ಅಧ್ಯಕ್ಷ ಸಿ.ನಂಜುಂಡಪ್ಪ, ಅರಾಭಿಕೊತ್ತನೂರು ಗ್ರಾಮಸ್ಥರಾದ ಎ.ಶ್ರೀಧರ್, ಚಿಕ್ಕವೆಂಕಟಪ್ಪ, ಕೆ.ಬಿ.ಮುನಿವೆಂಕಟಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT