ಸೋಮವಾರ, ನವೆಂಬರ್ 23, 2020
22 °C
ತರಬೇತಿ ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ತುಳಸಿರಾಮ್ ಹೇಳಿಕೆ

ಹಣ್ಣಿನ ಬೆಳೆ: ಭಾರತಕ್ಕೆ 2ನೇ ಸ್ಥಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಭಾರತ ದೇಶವು ಹಣ್ಣುಗಳನ್ನು ಬೆಳೆಯುವುದರಲ್ಲಿ ಜಾಗತಿಕವಾಗಿ 2ನೇ ಸ್ಥಾನದಲ್ಲಿದೆ. ಆದರೆ, ಶೇ 2ರಷ್ಟು ಮಾತ್ರ ಹಣ್ಣುಗಳ ಮೌಲ್ಯವರ್ಧನೆ ಮಾಡಿಕೊಳ್ಳುತ್ತಿದ್ದು, ರೈತರಿಗೆ ತುಂಬಲಾರದ ನಷ್ಟವಾಗಿದೆ’ ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಕೆ.ತುಳಸಿರಾಮ್ ಹೇಳಿದರು.

ಕೌಶಾಲಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ರಾಜ್ಯ ಉದ್ಯಮಶೀಲತೆ ಅಭಿವೃದ್ಧಿ ಕೇಂದ್ರ ಮತ್ತು -ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಇಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕೃಷಿ ಮತ್ತು ಆಹಾರ ಸಂಸ್ಕರಣಾ ಕೌಶಾಲಾಧಾರಿತ ಉದ್ಯಮಶೀಲತಾ ಅಭಿವೃದ್ಧಿ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಯುವಕ ಯುವತಿಯರನ್ನು ಆರ್ಥಿಕವಾಗಿ ಸ್ವಾವಲಂಬಿಗಳಾಗಿಸುವುದು ಈ ಕಾರ್ಯಕ್ರಮದ ಮೂಲ ಉದ್ದೇಶ. ಟೊಮೆಟೊ, ಮೆಣಸಿನಕಾಯಿ, ಮಾವು ತುಂಬಾ ಹಾಳಾಗಿ ಹೋಗುತ್ತಿದ್ದು, ಮೌಲ್ಯವರ್ಧನೆ ಮೂಲಕ ಇದನ್ನು ತಡೆಗಟ್ಟಬಹುದು’ ಎಂದು ಸಲಹೆ ನೀಡಿದರು.

‘ಹಣ್ಣು ಮತ್ತು ತರಕಾರಿಗಳ ಸ್ವಚ್ಛತೆ ಹಾಗೂ ಸಂಸ್ಕರಣೆ ಪ್ರಕ್ರಿಯೆ, ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಸಂಸ್ಥೆ ಪ್ರಕಾರ ಸಂಸ್ಕರಣಾ ಪದಾರ್ಥಗಳ ತಯಾರಿಕೆ ಹಾಗೂ ಪ್ರಮಾಣೀಕರಿಸುವುದು, ಮಾರುಕಟ್ಟೆ ಕೌಶಲ ಲಭ್ಯತೆಗಳ ಕುರಿತು ಕಾರ್ಯಕ್ರಮದಲ್ಲಿ ಸಂಪೂರ್ಣ ಮಾಹಿತಿ ನೀಡಲಾಗುತ್ತದೆ’ ಎಂದರು.

‘ಇತ್ತೀಚಿನ ವರ್ಷಗಳಲ್ಲಿ ನಿರುದ್ಯೋಗ ಹೆಚ್ಚುತ್ತಿದ್ದು, ಯುವಕ ಯುವತಿಯಲ್ಲಿ ಆಸಕ್ತಿ ಮೂಡಿಸುವ ಮೌಲ್ಯವರ್ಧನೆಯ ತರಬೇತಿ ಕಾರ್ಯಕ್ರಮ ಆಯೋಜಿಸುವುದು ಅತ್ಯಗತ್ಯವಾಗಿದೆ. ಆಹಾರ ಸಂಸ್ಕರಣೆಯು ವೈಜ್ಞಾನಿಕವಾಗಿದ್ದು, ತಾಂತ್ರಿಕತೆ ಅಳವಡಿಸಿಕೊಂಡು ಪ್ಯಾಕಿಂಗ್ ಮಾಡಿರಬೇಕು. ಮೌಲ್ಯವರ್ಧಿತ ಪದಾರ್ಥಗಳಿಗೆ ಮಾರುಕಟ್ಟೆ ಒದಗಿಸಿ ಆದಾಯ ದ್ವಿಗುಣಗೊಳಿಸಬೇಕು’ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಎನ್‌.ಸುರೇಶ್ ಸಲಹೆ ನೀಡಿದರು.

‘ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿವಿಧ ಇಲಾಖೆಗಳ ಮೂಲಕ ಸಹಾಯಧನ ಕೊಡುತ್ತಿದ್ದು, ಈ ಬಗ್ಗೆ ನಿರುದ್ಯೋಗಿ ಯುವಕ ಯುವತಿಯರಿಗೆ ಮಾಹಿತಿ ನೀಡಬೇಕು. ಆಹಾರ ಮೌಲ್ಯವರ್ಧನೆ ಘಟಕ ಸ್ಥಾಪನೆಯಲ್ಲಿ ಆಹಾರ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಹಾಗೂ ಕಡ್ಡಾಯವಾಗಿ ಪರವಾನಗಿ ಪಡೆಯಬೇಕು’ ಎಂದು ತಿಳಿಸಿದರು.

ಗುಣಮಟ್ಟ ಮುಖ್ಯ: ‘ದೇಶದಲ್ಲಿ ಶೇ 2ರಷ್ಟಿರುವ ಮೌಲ್ಯವರ್ಧನೆಯನ್ನು 5 ಪಟ್ಟು ಹೆಚ್ಚಿಸಲು ತರಬೇತಿ ಕಾರ್ಯಕ್ರಮಗಳು ಪೂರಕ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಾಕಷ್ಟು ಉತ್ಪನ್ನಗಳಿದ್ದರೂ ಕೆಲವನ್ನು ಮಾತ್ರ ಆಯ್ಧುಕೊಳ್ಳುತ್ತೇವೆ. ಹೀಗಾಗಿ ಸಂಸ್ಕರಿಸಿದ ಆಹಾರ ಪದಾರ್ಥಗಳ ಗುಣಮಟ್ಟ ಕಾಪಾಡಿಕೊಳ್ಳುವುದು ಬಹಳ ಮುಖ್ಯ’ ಎಂದು ತೋಟಗಾರಿಕೆ ಮಹಾವಿದ್ಯಾಲಯದ ಸಹ ವಿಸ್ತರಣಾ ನಿರ್ದೇಶಕ ಟಿ.ಬಿ.ಬಸವರಾಜು ಅಭಿಪ್ರಾಯಪಟ್ಟರು.

‘ಮಾರುಕಟ್ಟೆಯಲ್ಲಿ ಹಣ್ಣು, ತರಕಾರಿಗಳಿಗೆ ಹೆಚ್ಚಿನ ಬೆಲೆ ಹಾಗೂ ಬೇಡಿಕೆ ಇದ್ದಾಗ ಮೌಲ್ಯವರ್ಧನೆ ಮಾಡದೆ ಬೆಲೆ ಕುಸಿದಾಗ ಮೌಲ್ಯವರ್ಧನೆ ಮಾಡಿ ಹೆಚ್ಚು ಆದಾಯ ಪಡೆಯಬಹುದು. ತರಬೇತಿಯಿಂದ ಶಿಬಿರಾರ್ಥಿಗಳು ನಿಪುಣತೆ ಪಡೆಯಬಹುದು. ಜಿಲ್ಲೆಯು ಮಾವು ಬೆಳೆಯಲ್ಲಿ ಮುಂಚೂಣಿಯಲ್ಲಿರುವಂತೆ ಆಹಾರ ಸಂಸ್ಕರಣೆಯಲ್ಲೂ ಮುಂಚೂಣಿಗೆ ಬರಬೇಕು’ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ಗಾಯತ್ರಿ ಆಶಿಸಿದರು.

ತೋಟಗಾರಿಕೆ ಮಹಾವಿದ್ಯಾಲಯದ ಡೀನ್‌ ಬಿ.ಜಿ.ಪ್ರಕಾಶ್, ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಚಿಕ್ಕಣ್ಣ, ಜ್ಯೋತಿ, ಡಿ.ಎಸ್‌.ಅಂಬಿಕಾ ಪಾಲ್ಗೊಂಡರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.